ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ನಿರ್ಬಂಧಿತ ಪ್ರದೇಶದಂತಾದ ಉದ್ಯಾನ

ನಗರಸಭೆ ಕಚೇರಿ ಎದುರಿನ ಉದ್ಯಾನ ನಿರ್ವಹಣೆಗೆ ನಿರ್ಲಕ್ಷ
Last Updated 10 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದ ಉದ್ಯಾನಗಳ ಅಭಿವೃದ್ಧಿ ಮತ್ತು ನಿರ್ವಹಣೆ ಜವಾಬ್ದಾರಿಯನ್ನು ನಗರಸಭೆ ಹೊತ್ತಿದೆ. ಆದರೆ ನಗರಸಭೆ ಆವರಣದಲ್ಲಿನ ಗಣಪತಿ ದೇಗುಲವಿರುವ ಉದ್ಯಾನದಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದು, ಹುಳಹುಪ್ಪಟೆಗಳ ಕೂಪವಾಗಿದೆ.

ನಗರಸಭೆ ಕಚೇರಿ ಎದುರಿನ ಈ ಉದ್ಯಾನದಲ್ಲಿ ಮಿನಿ ಜಲಪಾತ ನಿರ್ಮಿಸಲು ಬಳಸಿದ್ದ ಮೋಟಾರು ಹಾಳಾಗಿದೆ. ಜಲಪಾತದ ಗುಂಡಿ ಒಣಗಿ ನಿಂತಿದೆ. ಪುಣ್ಯಕೋಟಿ ಕಥೆ ಬಿಂಬಿಸುವ ಹಸು–ಹುಲಿ, ಆವರಣದಲ್ಲಿನ ಜಿಂಕೆ, ಸಿಂಹದ ಆಕೃತಿಗಳ ಬಣ್ಣ ಹೋಗಿದ್ದು, ಸೀಮೆಂಟ್ ಕಾಣಿಸುತ್ತಿದೆ. ಕೆಲವು ಆಕೃತಿಗಳನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ.

ಉದ್ಯಾನ ಪ್ರವೇಶ ದ್ವಾರಕ್ಕೆ ಅಡ್ಡಲಾಗಿ ಮರದ ಗಳಗಳನ್ನು ಕಟ್ಟಲಾಗಿದೆ. ಅದರಿಂದ ಸಾರ್ವಜನಿಕರು ಉದ್ಯಾನಕ್ಕೆ ಪ್ರವೇಶಿಸದಂತಾಗಿದೆ. ಉದ್ಯಾನದಲ್ಲಿನ ಗಣಪತಿ ದೇಗುಲದ ಸುತ್ತ ಹಾಗೂ ಪಾದಚಾರಿ ಮಾರ್ಗದಲ್ಲಿ ನಿತ್ಯ ಸ್ವಚ್ಛತೆ ನಡೆಯುತ್ತದೆ. ಆದರೆ ಉದ್ಯಾನ ನಿರ್ವಹಣೆಗೆ ನಿರ್ಲಕ್ಷ ವಹಿಸಲಾಗಿದೆ.

ಉದ್ಯಾನದಲ್ಲಿ ಪ್ರಾಣಿಗಳ ಆಕೃತಿ, ಜಲಪಾತ ನಿರ್ಮಿಸಿದಾಗ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿತ್ತು. ಆದರೆ ಆಕೃತಿಗಳ ಮೇಲೆ ಗೀಚುವುದು, ಬಾಲ, ಕಿವಿ, ಕೊಂಬು ಮುರಿಯುವುದು ಕಂಡು ಬಂತು. ಹಾಗಾಗಿ ಸಾರ್ವಜನಿಕರು ಪ್ರವೇಶಿದಂತೆ ಗಳಗಳನ್ನು ಕಟ್ಟಲಾಗಿದೆ. ಅಧಿಕೃತವಾಗಿ ಪ್ರವೇಶ ನಿರ್ಬಂಧಿಸಿಲ್ಲ ಎಂದು ನಗರಸಭೆ ನೌಕರರೊಬ್ಬರು ಹೇಳಿದರು.

‘2016ರಲ್ಲಿ ನಗರಸಭೆ ಅಧ್ಯಕ್ಷನಾದಾಗ ₹9 ಲಕ್ಷ ವೆಚ್ಚದಲ್ಲಿ ಈ ಉದ್ಯಾನ ಅಭಿವೃದ್ಧಿಗೆ ಕೈ ಹಾಕಲಾಯಿತು. ಪ್ರಾಣಿಗಳ ಆಕೃತಿ ನಿರ್ಮಾಣಕ್ಕೆ ಯುಕೋ ಬ್ಯಾಂಕ್ ₹1.5 ಲಕ್ಷ ದೇಣಿಗೆ ನೀಡಿತ್ತು. 2018ರಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು. ಅದರ ನಿರ್ವಹಣೆಗೆ ಅಧಿಕಾರಿಗಳು ಆಸಕ್ತಿ ತೋರಿಲ್ಲ’ಎಂದು ನಗರಸಭೆ ಮಾಜಿ ಅಧ್ಯಕ್ಷ ಮತ್ತಯ್ಯ ವಿಷಾಧ ವ್ಯಕ್ತಪಡಿಸಿದರು.

ನಗರಸಭೆ ಸುತ್ತ, ಸರ್ಕಾರಿ ಜಿಲ್ಲಾಸ್ಪತ್ರೆ, ಕಾಲೇಜುಗಳು, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಎಸ್‌ಬಿಐ ಬ್ಯಾಂಕ್ ಇದೆ. ಇಂತ ಜನ ನಿಬಿಡ ಪ್ರದೇಶದಲ್ಲಿನ ಉದ್ಯಾನವನ್ನು ಸುಸ್ಥಿಯಲ್ಲಿಡಲು ನಗರಸಭೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ನಗರಸಭೆ ಮಾಜಿ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಒತ್ತಾಯಿಸಿದರು.

ವಿದ್ಯಾರ್ಥಿಗಳು ಮಧ್ಯಾಹ್ನ ಆಹಾರ ಸೇವಿಸಲು, ಸರ್ಕಾರಿ ಕಚೇರಿ ಕೆಲಸಕ್ಕೆ ಬರುವ ಸಾರ್ವಜನಿಕರು ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ನಗರಸಭೆ ಆವರಣದಲ್ಲಿ ಗುಣಮಟ್ಟದ ಕುಡಿಯುವ ನೀರು, ಶೌಚಾಲಯ ಸಹಿತ ಮೂಲಸೌಕರ್ಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT