ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ವಿರುದ್ಧ ಪ್ರಕರಣ

ನೀತಿ ಸಂಹಿತೆ ಉಲ್ಲಂಘನೆ ಆರೋಪ
Last Updated 31 ಮಾರ್ಚ್ 2023, 6:08 IST
ಅಕ್ಷರ ಗಾತ್ರ

ಮೂಡಿಗೆರೆ: ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಶಾಸಕ ಎಂ.ಪಿ ಕುಮಾರಸ್ವಾಮಿ ವಿರುದ್ಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಿಸಲಾಗಿದೆ.

ಶಾಸಕ ಎಂ.ಪಿ ಕುಮಾರಸ್ವಾಮಿ ಅವರ ನಿವಾಸದ ಪಕ್ಕದಲ್ಲಿ ಗುರುವಾರ ಬೆಳಿಗ್ಗೆ ಸ್ವಸಹಾಯ ಸಂಘದ ನೂರಾರು ಮಹಿಳೆಯರು ಜಮಾಯಿಸಿದ್ದರು. ವಿಷಯ ತಿಳಿದ ಕೂಡಲೇ ಚುನಾವಣಾ ಆಯೋಗದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ನೀತಿ ಸಂಹಿತೆ ಉಲ್ಲಂಘಿಸಲಾಗಿದೆ ಎಂದು ಪ್ರಕರಣ ದಾಖಲಿಸಿದ್ದಾರೆ.

ಸ್ವಸಹಾಯ ಗುಂಪುಗಳಿಗೆ ಸರ್ಕಾರದ ಚೆಕ್ ವಿತರಣೆಗಾಗಿ ಗುರುವಾರ ಬೆಳಗ್ಗೆ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಕೆಲ್ಲೂರು ಗ್ರಾಮದಲ್ಲಿರುವ ಶಾಸಕ ಎಂ.ಪಿ ಕುಮಾರಸ್ವಾಮಿ ಅವರ ನಿವಾಸಕ್ಕೆ ಬಂದಿದ್ದರು. ಶಾಸಕರ ನಿವಾಸದಲ್ಲಿ ಚುನಾವಣಾ ಪ್ರಚಾರ ನಡೆಯುತ್ತಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಆಯೋಗದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ನೂರಾರು ಮಹಿಳೆಯರಿಗೆ ಬೆಳಗ್ಗಿನ ಉಪಾಹಾರ ನೀಡಲಾಗುತ್ತಿತ್ತು. ಘಟನೆ ಸಂಬಂದಿಸಿ ವಿಡಿಯೊ ಚಿತ್ರೀಕರಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಚುನಾವಣಾ ಆಯೋಗ ಪ್ರಕರಣ ದಾಖಲಿಸಿಕೊಂಡಿದೆ.

‘ಶಾಸಕ ಎಂ.ಪಿ ಕುಮಾರಸ್ವಾಮಿ ಅವರ ನಿವಾಸದಲ್ಲಿ ಚುನಾವಣಾ ಪ್ರಚಾರ ನಡೆಯುತ್ತಿದೆ ಎಂದು ಮಾಹಿತಿ ದೊರೆತ ಕೂಡಲೇ ನಮ್ಮ ತಂಡ ಭೇಟಿ ನೀಡಿ ಪರಿಶೀಲಿಸಿತು. ಅಲ್ಲಿ ಯಾವುದೇ ಚೆಕ್ ದೊರೆತಿಲ್ಲ. ಜನರನ್ನು ಗುಂಪುಗೂಡಿಸಿ ಉಪಾಹಾರ ನೀಡುವುದು ಕೂಡ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದರಿಂದ ಪ್ರಕರಣ ದಾಖಲು ಮಾಡಲಾಗಿದೆ’ ಎಂದು ಚುನಾವಣಾಧಿಕಾರಿ ಎಚ್.ಡಿ ರಾಜೇಶ್ ಪ್ರಜಾವಾಣಿಗೆ ತಿಳಿಸಿದರು.

‘ಮಹಿಳಾ ಸಂಘಗಳಿಗೆ ಗುರುವಾರ ಚೆಕ್ ವಿತರಣೆ ಮಾಡಬೇಕೆಂದು ಕಳೆದ 2 ದಿನಗಳ ಹಿಂದೆ ಸಂಬಂಧಿಸಿದ ಅಧಿಕಾರಿಗಳಿಗೆ ಚೆಕ್ ತರಲು ತಿಳಿಸಿದ್ದೆ. ಆದರೆ, ಬುಧವಾರ ನೀತಿ ಸಂಹಿತೆ ಜಾರಿಯಾಯಿತು. ಕಾರ್ಯಕ್ರಮ ರದ್ದುಗೊಳಿಸಿರುವ ಬಗ್ಗೆ ಬುಧವಾರವೇ ಅನೇಕ ಸ್ವ ಸಹಾಯ ಸಂಘಗಳಿಗೆ ತಿಳಿಸಲಾಗಿತ್ತು. ಆದರೆ, ಕೆಲವರಿಗೆ ಮಾಹಿತಿ ಸಿಗದೆ ಬೆಳಿಗ್ಗೆ ನನ್ನ ನಿವಾಸಕ್ಕೆ ಬಂದಿದ್ದಾರೆ. ದೂರದ ಊರಿನಿಂದ ಹಸಿವಿನಿಂದ ಬಂದಿದ್ದಾರೆಂದು ತಿಂಡಿ ನೀಡಲಾಯಿತು. ಇಲ್ಲಿ ಯಾವುದೇ ಚುನಾವಣೆ ಪ್ರಚಾರ ನಡೆಸಿಲ್ಲ’ ಎಂದು ಶಾಸಕ ಎಂ.ಪಿ ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT