ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿನಾಡು: ಈ ವರ್ಷ ಪ್ರವಾಸಿಗರ ದಂಡು ಕ್ಷೀಣ

Last Updated 14 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಾಂಗುಡಿ ಈ ವರ್ಷ ಕ್ಷೀಣಿಸಿದ್ದು, ಪ್ರವಾಸೋದ್ಯಮಕ್ಕೆ ಕೊಂಚ ಪೆಟ್ಟು ಬಿದ್ದಿದೆ.

ನಾಲ್ಕೈದು ವರ್ಷಗಳಿಂದ ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿ ಇದ್ದ ಪ್ರವಾಸಿಗರ ದಾಂಗುಡಿ ಈ ವರ್ಷ ಇಳಿಮುಖವಾಗಿದೆ. 2018ರಲ್ಲಿ (ನವೆಂಬರ್‌ ಅಂತ್ಯಕ್ಕೆ) ಜಿಲ್ಲೆ ವಿವಿಧ ಪ್ರವಾಸಿ ತಾಣಗಳಿಗೆ 48 ಲಕ್ಷ ಪ್ರವಾಸಿಗರು, 2017ರಲ್ಲಿ ಇದೇ ವೇಳೆಗೆ 73 ಲಕ್ಷ ಮಂದಿ ಭೇಟಿ ನೀಡಿದ್ದಾರೆ. ಹೊಟ್ಟೆಪಾಡಿಗೆ ಪ್ರವಾಸೋದ್ಯಮವನ್ನೇ ನಂಬಿರುವವರ ಆದಾಯಕ್ಕೆ ಹೊಡೆತ ಬಿದ್ದಿದೆ.

ಈ ವರ್ಷ ಮುಂಗಾರಿನಲ್ಲಿ ಮಳೆಯ ರುದ್ರನರ್ತನ, ಮಲೆನಾಡಿನ ಕೆಲವೆಡೆ ಭೂಕುಸಿತ, ರಸ್ತೆ ಸಂಪರ್ಕ ಕಡಿತ ಮೊದಲಾದ ಕಾರಣಗಳಿಂದ ಜಿಲ್ಲೆಯ ತಾಣಗಳ ಕಡೆಗೆ ಪ್ರವಾಸಿಗರ ಒಲವು ಕಡಿಮೆಯಾಗಿದೆ. ಪ್ರವಾಸಿ ತಾಣಗಳಲ್ಲಿ ಕೆಲವಡೆ ಶೌಚಾಲಯ, ವಿಶ್ರಾಂತಿ ತಾಣ, ಪಾರ್ಕಿಂಗ್‌ ಮೊದಲಾದ ಮೂಲಸೌಕರ್ಯ ಕೊರತೆಗಳು ಇವೆ.

ಮಲೆನಾಡು, ಬಯಲುಸೀಮೆಯ ರಮಣೀಯ ತಾಣಗಳ ಕಾಫಿನಾಡು ಪ್ರವಾಸಿಗರ ಆಕರ್ಷಣೆ ಬೀಡು. ಬಾಬಾಬುಡನ್‌ಗಿರಿ, ಕೆಮ್ಮಣ್ಣುಗುಂಡಿ, ಕಲ್ಹತ್ತಿಗಿರಿ, ಅಮೃತಾಪುರ, ಶೃಂಗೇರಿ, ಬಾಳೆಹೊನ್ನೂರು, ಹೊರನಾಡು, ಕಳಸ, ಕುದುರೆಮುಖ, ಮುತ್ತೋಡಿ ಅರಣ್ಯ ,ಬೆಳವಾಡಿ, ಅಂಗಡಿ ಮೊದಲಾದ ಪ್ರೇಕ್ಷಣೀಯ ಸ್ಥಳಗಳು ಇಲ್ಲಿವೆ. ಹೋಟೆಲ್‌, ಲಾಡ್ಜ್‌, ಹೋಮ್‌ ಸ್ಟೇ, ಪ್ರವಾಸಿ ಟ್ಯಾಕ್ಸಿಗಳವರ ಆದಾಯದ ಪ್ರಮುಖ ಮೂಲ ಪ್ರವಾಸಿಗರು.

‘ವಾರಾಂತ್ಯಗಳಲ್ಲಿಯೂ ಪ್ರವಾಸಿಗರ ದಂಡು ಹೆಚ್ಚು ಇರುವುದಿಲ್ಲ. ಬುಕ್ಕಿಂಗೂ ಕಡಿಮೆಯಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 30 ರಷ್ಟು ಪ್ರವಾಸಿಗರ ಸಂಖ್ಯೆ ತಗ್ಗಿದೆ’ ಎಂದು ರತ್ನಗಿರಿ ರಸ್ತೆಯ ವಸಂತ ವಿಹಾರ್‌ ಹೋಟೆಲ್‌ ವ್ಯವಸ್ಥಾಪಕ ಸದಾಶಿವ ಬೇಸರ ವ್ಯಕ್ತಪಡಿಸುತ್ತಾರೆ.

ಧಾರ್ಮಿಕ ಕ್ಷೇತ್ರ ಶೃಂಗೇರಿಗೆ ಕಳೆದ ವರ್ಷ 45 ಲಕ್ಷ ಮಂದಿ ಭೇಟಿ ನೀಡಿದ್ದರು, ಈ ವರ್ಷ ನವೆಂಬರ್‌ ಅಂತ್ಯಕ್ಕೆ 20 ಲಕ್ಷ ಮಂದಿ ಬಂದಿದ್ದಾರೆ. ಹೊರನಾಡಿಗೆ ಕಳೆದ ವರ್ಷ 28 ಲಕ್ಷ ಮಂದಿ ಭೇಟಿ ನೀಡಿದ್ದಾರೆ. ಈ ವರ್ಷ ನವೆಂಬರ್‌ ಅಂತ್ಯಕ್ಕೆ 13 ಲಕ್ಷ ಮಂದಿ ಸಂದರ್ಶಿಸಿದ್ದಾರೆ.

‘ಈ ಬಾರಿ ಮುಂಗಾರಿನಲ್ಲಿ ವಿಪರೀತ ಮಳೆ, ಭೂಕುಸಿತ ಇತ್ಯಾದಿಯಿಂದಾಗಿ ಪ್ರವಾಸಿಗರು ಮಲೆನಾಡು ಕಡೆಗೆ ಬರಲು ಉತ್ಸಾಹ ತೋರುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಬುಕ್ಕಿಂಗ್‌ ಕಡಿಮೆ ಇದೆ’ ಎಂದು ಜಿಲ್ಲಾ ಹೋಮ್ ಸ್ಟೇ ಮಾಲೀಕರ ಸಂಘದ ಹೊಲದಗದ್ದೆ ಗಿರೀಶ್‌ ಹೇಳುತ್ತಾರೆ.

‘ಬೆಂಗಳೂರಿನ ಐಟಿ, ಬಿಟಿ ಮಂದಿ ಇತ್ತ ಬರುವುದು ಕಡಿಮೆಯಾಗಿದೆ. ನಮ್ಮ ದುಡಿಮೆಗೆ ಏಟು ಬಿದ್ದಿದೆ. ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಪ್ರವಾಸೋದ್ಯಮ ಇಲಾಖೆ ಆದ್ಯ ಗಮನ ಹರಿಸಬೇಕು. ಪ್ರವಾಸಿಗರ ಆಕರ್ಷಣೆಗೆ ಒತ್ತು ನೀಡಬೇಕು’ ಎಂದು ಪ್ರವಾಸಿ ಟ್ಯಾಕ್ಸಿ ಚಾಲಕ ಹಿನಾಯತ್‌ ಖಾನ್‌ ಹೇಳುತ್ತಾರೆ.\

*
ಕೊಡಗು, ಕೇರಳದಲ್ಲಿ ಮಳೆ ಆವಾಂತರದಿಂದ ಮಲೆನಾಡಿನ ಕಡೆಗೆ ಪ್ರವಾಸಿಗರು ಬರುವುದು ಕಡಿಮೆಯಾಗಿದೆ. ಕೆಲತಿಂಗಳಲ್ಲಿ ಸರಿಯಾಗಲಿದೆ.
-ರಾಜು, ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ

***

ಜಿಲ್ಲೆಯ ತಾಣಗಳಿಗೆ ಪ್ರವಾಸಿಗರ ಭೇಟಿ ಅಂಕಿಅಂಶ (ಜನವರಿಯಿಂದ ಡಿಸೆಂಬರ್‌)

ವರ್ಷ ಪ್ರವಾಸಿಗರು
2015 - 79.47 ಲಕ್ಷ

2016 - 83.29 ಲಕ್ಷ

2017- 84.39 ಲಕ್ಷ

2018(ನವೆಂಬರ್‌ವರೆಗೆ)48.08 ಲಕ್ಷ

(ಮಾಹಿತಿ: ಪ್ರವಾಸೋದ್ಯಮ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT