ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು ಜಿಲ್ಲೆಗೆ ಬಿಜೆಪಿಯವರ ಕೊಡುಗೆ ತಿಳಿಸಿ; ಎಚ್.ಎಂ.ಸತೀಶ್

Published 13 ಫೆಬ್ರುವರಿ 2024, 13:26 IST
Last Updated 13 ಫೆಬ್ರುವರಿ 2024, 13:26 IST
ಅಕ್ಷರ ಗಾತ್ರ

ಕೊಪ್ಪ: ‘ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕಳೆದ 10 ವರ್ಷಗಳ ಅವಧಿಯಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಕೊಟ್ಟ ಕೊಡುಗೆ ಏನು, ತಂದ ಅನುದಾನ ಎಷ್ಟು? ಎಂಬುದನ್ನು ಮೊದಲು ಬಿಜೆಪಿಯವರು ಜನರಿಗೆ ಉತ್ತರಿಸಲಿ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಎಚ್.ಎಂ.ಸತೀಶ್ ಸವಾಲು ಹಾಕಿದರು.

‘ಬಿಜೆಪಿ ನಾಯಕರು, ಜಿಲ್ಲೆಯಲ್ಲಿನ ಶಾಸಕರ ಕಚೇರಿಗಳಿಗೆ ಹೋಗಿ ಮನವಿ ಪತ್ರ ಸಲ್ಲಿಸಿದ್ದು, ಶಾಸಕರು  ಜಿಲ್ಲೆಗೆ ತಂದ ಅನುದಾನದ ಲೆಕ್ಕ ಕೇಳಿದ್ದಾರೆ. ಜಿಲ್ಲೆಯ ಶಾಸಕರು ಲೆಕ್ಕ ಕೊಡಲು ಬದ್ಧರಿದ್ದಾರೆ. ಆದರೆ, ಶಾಸಕರು ಗೆದ್ದು ಎಂಟು ತಿಂಗಳು ಮಾತ್ರ ಆಗಿದೆ, ಒಂದು ವರ್ಷದ ಬಜೆಟ್‌ನ ಪೂರ್ಣ ಅನುದಾನವು ಲಭ್ಯವಾಗಿಲ್ಲ. ಆದರೆ ಇದನ್ನು ಲೆಕ್ಕಕ್ಕೆ ಇಡುವ ಬಿಜೆಪಿಯ ನಾಯಕರು ಮೊದಲು ಜನರಿಗೆ ಬಹಿರಂಗವಾಗಿ ಉತ್ತರ ಹೇಳಲಿ’ ಎಂದಿದ್ದಾರೆ.

‘ಸಿ.ಟಿ.ರವಿ ಅವರು 20 ವರ್ಷದ ಅವಧಿಯಲ್ಲಿ ಹಾಸನ-ಚಿಕ್ಕಮಗಳೂರು ರಸ್ತೆ, ಚಿಕ್ಕಮಗಳೂರು-ಮೂಡಿಗೆರೆ ರಸ್ತೆ ಅಭಿವೃದ್ಧಿ ಮಾಡುವಲ್ಲಿ ವಿಫಲರಾಗಿದ್ದಾರೆ. ಅದು ಯಾವ ಸ್ಥಿತಿಯಲ್ಲಿದೆ ಎಂದು ಜನಸಾಮನ್ಯರಿಗೆ ಗೊತ್ತು. ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ 15 ವರ್ಷ ಶಾಸಕರಾಗಿದ್ದ ಡಿ.ಎನ್.ಜೀವರಾಜ್‌ ಅವರು ಜಿಲ್ಲಾ ಉಸ್ತುವಾರಿ ಮಂತಿಯಾಗಿ, ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆಗಿದ್ದವರು. ಅವರ ಕೊಡುಗೆ ಕ್ಷೇತ್ರಕ್ಕೆ ಏನಿದೆ ಎಂಬುದನ್ನು ಮೊದಲು ಬಹಿರಂಗಪಡಿಸಲಿ’ ಎಂದು ಹೇಳಿದ್ದಾರೆ.

‘ಅವರ ಇಡೀ ಅಧಿಕಾರ ಅವಧಿಯಲ್ಲಿ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ 2008, 2011 ರಲ್ಲಿ ವರ್ಗಾವಣೆ ಮಾಡಿರುವಂತದ್ದೇ ಸಾಧನೆ’ ಎಂದು ಆರೋಪಿಸಿದ್ದಾರೆ.

‘ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸಂಸದರಾಗಿ, ಕೇಂದ್ರದ ಕೃಷಿ ಮಂತ್ರಿಯಾಗಿ ಶೋಭಾ ಕರಾಂದ್ಲಾಜೆ ಅವರು ಜಿಲ್ಲೆಗೆ ಕೊಟ್ಟ ಕೊಡುಗೆಯಾದರು ಏನು? ಕೊಪ್ಪ, ಶೃಂಗೇರಿ, ಎನ್.ಆರ್.ಪುರದ ಕೆಲವು ಭಾಗದಲ್ಲಿ ಅಡಿಕೆ ಬೆಳೆಗಾರರು ಹಳದಿಎಲೆ ರೋಗ, ಎಲೆಚುಕ್ಕಿ ರೋಗ ಹಾಗೂ ಅರಣ್ಯ ಒತ್ತುವರಿ ಸಮಸ್ಯೆಯಲ್ಲಿ ಸಿಲುಕಿರುವ ಸಂದರ್ಭದಲ್ಲಿ ಶೋಭಾ ಅವರು ಯಾವ ರೈತರ ನೆರವಿಗೂ ಬರಲಿಲ್ಲ’ ಎಂದು ದೂರಿದರು.

‘2020-21, 21-22 ರಲ್ಲಿ ರೈತರು ಸಾಕಷ್ಟು ಬೆಳೆವಿಮೆ ಕಂತು ಕಟ್ಟಿದ್ದು, ಎರಡು ಅವಧಿಯಲ್ಲೂ ವಿಮೆ ಪರಿಹಾರ ಬಾರದೆ ರೈತರಿಗೆ ಅನ್ಯಾಯವಾದರೂ ಸಂಸತ್ತಿನಲ್ಲಿ ಧ್ವನಿ ಎತ್ತಲಿಲ್ಲ. ಇಂತಹ ಸಂದರ್ಭದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್‌ ಶಾಸಕರ ಕಚೇರಿಗೆ ಹೋಗಿ ಅನುದಾನದ ಬಗ್ಗೆ ಮಾಹಿತಿ ಕೇಳುವ ನೈತಿಕತೆ ಇದೆಯೇ ಎನ್ನುವ ಪ್ರಶ್ನೆ ಕಾಂಗ್ರೆಸ್ಸಿನದ್ದು’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT