ಶನಿವಾರ, ಡಿಸೆಂಬರ್ 5, 2020
19 °C

ನಿಗಮ ಸ್ಥಾಪನೆ; ಸಾಧಕ–ಬಾಧಕ ಚರ್ಚೆಯಾಗಲಿ: ಸಿ.ಟಿ.ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ‘ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಚರ್ಚೆಯಾ‌ಗಬೇಕು. ಈ ನಿಗಮಗಳಿಂದ ಸಮುದಾಯಗಳ ಅಭಿವೃದ್ಧಿ ಆಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಒರೆಗೆ ಹಚ್ಚುವ ಕೆಲಸ ಆಗಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇವತ್ತು ವೀರಶೈವ ಅಭಿವೃದ್ಧಿ ನಿಗಮ, ಮುಂದೆ ಸಂದರ್ಭ ಬಂದರೆ ಒಕ್ಕಲಿಗ, ಕುರುಬ ಮೊದಲಾದ ಸಮುದಾಯಗಳಿಗೂ ನಿಗಮ ಸ್ಥಾಪಿಸಬೇಕಾಗಬಹುದು. ಬೇಕು ಎನ್ನುವುದಾದರೆ ಎಲ್ಲ ಸಮುದಾಯಗಳಿಗೂ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಯಾವ ಸಮಯದಾಯಕ್ಕೂ ಬೇಡ ಎನ್ನುವುದಾದರೆ ವಿಧಾನಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು. ಟಿಕೆಟ್‌ ನೀಡುವಾಗ, ಸಚಿವ ಸ್ಥಾನ ನೀಡುವಾಗ ಜಾತಿ ಪರಿಗಣಿಸುತ್ತೇವೆ. ಹೀಗಿರುವಾಗ, ಒಂದು ಜಾತಿಗೆ ಪರ ಮತ್ತೊಂದಕ್ಕೆ ವಿರುದ್ಧವಾಗಿ ಯಾಕೆ ನಿಲ್ಲಬೇಕು’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ಮರಾಠ ಸಮುದಾಯದವರು ದೊಡ್ಡ ಪ್ರಮಾಣದಲ್ಲಿ ಇದ್ದಾರೆ. ಮರಾಠ ಸಮುದಾಯದ ಅಭಿವೃದ್ಧಿಗೆ ನಿಗಮ ಸ್ಥಾಪಿಸುವುದರಲ್ಲಿ ತಪ್ಪೇನಿದೆ? ಅದನ್ನು ಯಾಕೆ ವಿರೋಧ ಮಾಡಬೇಕು? ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಸಹಿತ ವಿವಿಧ ಅಭಿವೃದ್ಧಿ ರಚಿಸಿದಾಗ ಯಾಕೆ ಸುಮ್ಮನಿದ್ದರು’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ಬ್ಯಾರಿ, ತುಳು, ಕೊಡವ ಸಹಿತ ವಿವಿಧ ಭಾಷೆಗಳ ಅಕಾಡೆಮಿಗಳು ಇವೆ. ಇವೆಲ್ಲವೂ ಸಹೋದರ ಭಾಷೆಗಳು. ಅವುಗಳನ್ನು ಗೌರವಿಸುತ್ತೇವೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ’ ಎಂದು ಉತ್ತರಿಸಿದರು.

‘ಸಂಪತ್‌ರಾಜ್‌ ಅವರು ಆಸ್ಪತ್ರೆಯಿಂದ ನಾಪತ್ತೆಯಾಗಿದ್ದರು. ಅವರನ್ನು ಯಾರು ಬಚ್ಚಿಟ್ಟಿದ್ದರು, ಅವರಿಗೆ ಯಾರು ರಕ್ಷಣೆ ಕೊಟ್ಟಿದ್ದರು ಎಂಬುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೇ ಉತ್ತರಿಸಬೇಕು’ ಎಂದು ತಿವಿದರು.

‘ಕಾಂಗ್ರೆಸ್‌ ಒಳಗಿನ ಎರಡು ಗುಂಪಿನ ಜಗಳ ಒಬ್ಬ ಶಾಸಕರ ಮನೆಗೆ ಬೆಂಕಿ ಹಚ್ಚಲು ಕಾರಣವಾಯಿತು. ಬೆಂಕಿ ಹಾಕಿದವರ ಪರ ಒಂದು ಗುಂಪು, ಹಾಕಿಸಿಕೊಂಡವರ ಪರ ಮತ್ತೊಂದು ಗುಂಪು ಇತ್ತು. ಹೀಗಾಗಿ, ಅವರು ಪಕ್ಷದ ದಲಿತ ಶಾಸಕರಿಗೆ ರಕ್ಷಣೆ ಇಲ್ಲದಂಥ ಕೆಟ್ಟ ಪರಿಸ್ಥಿತಿ ನಿರ್ಮಾಣವಾಯ್ತು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು