ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 3ನೇ ಹಂತದ ಕೋವಿಡ್‌ ಲಸಿಕೆ ಅಭಿಯಾನ ಶುರು

Last Updated 2 ಮಾರ್ಚ್ 2021, 5:02 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮೂರನೇ ಹಂತದ ಕೋವಿಡ್‌–19 ಲಸಿಕೆ ಅಭಿಯಾನ ಸೋಮವಾರ ಶುರುವಾಗಿದೆ , 6 ತಾಲ್ಲೂಕು ಆಸ್ಪತ್ರೆ ಮತ್ತು ಎರಡು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾಧಿಕಾರಿ ಕೆ.ಎನ್‌.ರಮೇಶ್‌ ಇಲ್ಲಿ ಸೋಮವಾರ ತಿಳಿಸಿದರು.

60 ವರ್ಷ ತುಂಬಿದವರು (1962 ಜ.1ಕ್ಕೂ ಮುನ್ನ ಜನಿಸಿದವರು), ಇತರ ಸೋಂಕುವುಳ್ಳ (ಕೋಮಾರ್ಬಿಡಿಟಿ) 45 ರಿಂದ 59 ವಯೋಮಾನದ ವರು, ಒಂದು ಮತ್ತು ಎರಡನೇ ಹಂತದಲ್ಲಿ ಬಿಟ್ಟಿರುವವರಿಗೆ (ಆರೋಗ್ಯ ನೌಕರರು, ಫ್ರಂಟ್‌ ಲೈನ್‌ ವಾರಿಯರ್ಸ್‌) ಈ ಹಂತದಲ್ಲಿ ಲಸಿಕೆ ಹಾಕಲಾಗುವುದು ಎಂದು ಎಂದು ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ಕಡೂರು, ತರೀಕೆರೆ, ಮೂಡಿಗೆರೆ, ಕೊಪ್ಪ, ಶೃಂಗೇರಿ, ಎನ್‌.ಆರ್‌.ಪುರ ತಾಲ್ಲೂಕು ಆಸ್ಪತ್ರೆಗಳು ಹಾಗೂ ಚಿಕ್ಕಮಗಳೂರಿನ ಹೋಲಿ ಕ್ರಾಸ್‌ ಮತ್ತು ಕೆಆರ್‌ಎಸ್‌ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವಾರದಲ್ಲಿ ನಾಲ್ಕು ದಿನ (ಸೋಮ, ಬುಧ, ಶುಕ್ರ ಮತ್ತು ಶನಿವಾರ) ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ವಾರದ ಎಲ್ಲ ದಿನ ಹಾಕಲಾಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ಶುಲ್ಕ ಇಲ್ಲ, ಖಾಸಗಿ ಆಸ್ಪತ್ರೆಗಳಲ್ಲಿ ₹ 250 ಶುಲ್ಕ ವಿಧಿಸಲಾಗುತ್ತದೆ ಎಂದು ವಿವರಿಸಿದರು.

COVID-2.0 ವೆಬ್‌ಪೋರ್ಟ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು. ಲಸಿಕಾ ಕೇಂದ್ರದಲ್ಲಿ ನೋಂದಣಿಗೆ ಅವಕಾಶ ಇದೆ. ಆಶಾ ಕಾರ್ಯಕರ್ತೆಯರು , ಸ್ವಯಂ ಸೇವಕರು ಫಲಾನುಭವಿಗಳನ್ನು ಗುರುತಿಸಿ ಕೇಂದ್ರ ಕರೆ ತರುತ್ತಾರೆ. ನೋಂದಣಿ ಮಾಡಿಸಿ ಸ್ವೀಕೃತಿ ಪ್ರತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಫಲಾನುಭವಿಗಳು ಫೋಟೊ ಗುರುತಿನ ಚೀಟಿ (ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ...) ದಾಖಲೆ ತೋರಿಸಬೇಕು ಎಂದು ಮಾಹಿತಿ ನೀಡಿದರು.

‘ಲಸಿಕಾ ಕೇಂದ್ರಗಳಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿದೆ. ‘ಕೋವಿ ಶೀಲ್ಡ್‌ ’ ಲಸಿಕೆ ನೀಡಲಾಗುತ್ತಿದೆ. ದಿನಕ್ಕೆ ಒಂದು ಕೇಂದ್ರದಲ್ಲಿ 200 ಮಂದಿಗೆ ಹಾಕುವ ಗುರಿ ಇದೆ. ಪ್ರಸ್ತುತ 3000 ಸಾವಿರ ಲಸಿಕೆ ದಾಸ್ತಾನು ಇದೆ. ಮೊದಲ ಹಂತದಲ್ಲಿ ಶೇ 85 ಹಾಗು ಎರಡನೇ ಹಂತದಲ್ಲಿ ಶೇ 80 ಗುರಿ ಸಾಧನೆಯಾಗಿದೆ’ ಎಂದರು.

ಲಸಿಕೆ ಹಾಕಿಕೊಂಡಿರುವವರಲ್ಲಿ ಯಾವುದೇ ಅಡ್ಡಪರಿಣಾಮ ಕಂಡುಬಂದಿಲ್ಲ. ಲಸಿಕೆ ಸುರಕ್ಷಿತವಾಗಿದೆ. ಮುಂದಿನ ದಿನಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ವಿಸ್ತರಿಸಲಾಗುವುದು’ ಎಂದು ಹೇಳಿದರು.

‘ಜಾಸ್ತಿ ಶುಲ್ಕ ವಸೂಲಿ ಮಾಡಿದರೆ ಕ್ರಮ’

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಪೂವಿತಾ ಮಾತನಾಡಿ, ಖಾಸಗಿ ಆಸ್ಪತ್ರೆಯವರು ಕೋವಿಡ್‌ ಲಸಿಕೆ ಹಾಕಲು ನಿಗದಿಪಡಿಸಿರುವ ಶುಲ್ಕಕ್ಕಿಂತ ಜಾಸ್ತಿ ವಸೂಲಿ ಮಾಡಿದರೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

‘₹ 250 ಶುಲ್ಕ ನಿಗದಿಪಡಿಸಲಾಗಿದೆ. ಶುಲ್ಕ ಫಲಕ ಅಳವಡಿಸುವಂತೆ ಸೂಚನೆ ನೀಡಲಾಗುವುದು. ನಿಗದಿತ ಶುಲ್ಕಕ್ಕಿಂತ ಜಾಸ್ತಿ ವಸೂಲಿ ಮಾಡಿದರೆ ಸಾರ್ವಜನಿಕರು ದೂರು ನೀಡಬಹುದು’ ಎಂದರು.

‘ನಾಲ್ಕನೇ ಹಂತದಲ್ಲಿ ಎಲ್ಲರಿಗೂ ಲಸಿಕೆ ನೀಡಲಾಗುತ್ತದೆ. ಸರ್ಕಾರ ಸುತ್ತೋಲೆ ಕಳಿಸಿದ ನಂತರ ಕ್ರಮ ವಹಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ಜಿಲ್ಲಾ ಆರೋಗ್ಯಧಿಕಾರಿ ಡಾ.ಎಸ್.ಎನ್‌.ಉಮೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT