ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು: ಮಾರುಕಟ್ಟೆಯಲ್ಲಿ ನೇರಳೆ ಕಾರುಬಾರು

ಪ್ರತಿ ಕೆ.ಜಿಗೆ ₹200 ದರದಲ್ಲಿ ಮಾರಾಟ, ಜಂಬು ನೇರಳೆಗೆ ಬೇಡಿಕೆ
ರಘು ಕೆ.ಜಿ.
Published 25 ಜೂನ್ 2024, 6:44 IST
Last Updated 25 ಜೂನ್ 2024, 6:44 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದ ಮಾರುಕಟ್ಟೆಯಲ್ಲಿ ಹಲಸು ಮತ್ತು ಮಾವಿನ ಘಮಲಿನ ನಡುವೆ ಸದ್ಯ ನೇರಳೆ ಹಣ್ಣಿನ ಕಾರುಬಾರು ಶುರುವಾಗಿದೆ. ಬಣ್ಣದಿಂದಲೇ ಮನಸೆಳೆಯುವ ನೇರಳೆ ದರ ಕೊಂಚ ದುಬಾರಿಯಾದರೂ ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ.

ನಗರದ ಎಂ.ಜಿ. ರಸ್ತೆ, ಆಜಾದ್ ಪಾರ್ಕ್ ವೃತ್ತ, ಮಲ್ಲಂದೂರು ರಸ್ತೆ ಸೇರಿದಂತೆ ಪ್ರಮುಖ ಕಡೆ ವ್ಯಾಪಾರಿಗಳು ತಳ್ಳುಗಾಡಿಗಳಲ್ಲಿ ನೇರಳೆ ಹಣ್ಣು ಮಾರಾಟ ಮಾಡುತ್ತಿದ್ದು, ಖರೀದಿ ಭರಾಟೆಯೂ ಜೋರಾಗಿದೆ. ಶಾಲಾ–ಕಾಲೇಜಿನ ವಿದ್ಯಾರ್ಥಿಗಳು,  ಮಹಿಳೆಯರು, ವೃದ್ಧರು ಸೇರಿ ವಿವಿಧ ವರ್ಗದ ಗ್ರಾಹಕರು ಖರೀದಿಸಿ ಹಣ್ಣಿನ ರುಚಿ ಸವಿಯುತ್ತಿದ್ದಾರೆ.

'ತಳ್ಳುಗಾಡಿಯ ವ್ಯಾಪಾರಿಗಳಲ್ಲಿ ನೇರಳೆ ಹಣ್ಣು ಕಾಲು ಕೆ.ಜಿಗೆ ₹60 ಹಾಗೂ ಪ್ರತಿ ಕೆ.ಜಿಗೆ ₹200 ರಿಂದ ₹220ರ ದರದಲ್ಲಿ ಮಾರಾಟವಾಗುತ್ತಿದೆ. ಜಿಲ್ಲೆಯಲ್ಲಿ ನೇರಳೆ ಇಳುವರಿ ಪ್ರಮಾಣ ತುಂಬಾ ಕಡಿಮೆ. ಹಾಗಾಗಿ ಉತ್ತರ ಕರ್ನಾಟಕದ ಬೆಳಗಾವಿ, ಬಳ್ಳಾರಿ, ಬೆಂಗಳೂರಿನಿಂದ ತಂದು ವ್ಯಾಪಾರ ಮಾಡುತ್ತಿದ್ದೇವೆ' ಎಂದು ನೇರಳೆ ಹಣ್ಣಿನ ವ್ಯಾಪಾರಿ ಅನ್ವರ್ ಹೇಳಿದರು.

ಮೇ ಮತ್ತು ಜೂನ್‌ನಲ್ಲಿ ಮಾತ್ರವೇ ಸಿಗುವ ನೇರಳೆ ಹಣ್ಣು ಬಲು ರುಚಿ. ಮಧುಮೇಹಿಗಳ ಆರೋಗ್ಯಕ್ಕೆ ಅನುಕೂಲವಿರುವ ಈ ಹಣ್ಣಿಗೆ ಮಾರುಕಟ್ಟೆಗಳಲ್ಲಿಯೂ ಬೇಡಿಕೆ ಇದೆ. ನಾಯಿ ನೇರಳೆ, ಜಂಬೂ ನೇರಳೆಯಂತಹ, ಸೀಡ್‌ಲೆಸ್‌ ತಳಿಗಳಿವೆ. ಗ್ರಾಹಕರು ಇದರ ಮಹತ್ವ ಅರಿತು ಬೆಲೆ ತುಸು ಹೆಚ್ಚಾದರೂ ಖರೀದಿಸುತ್ತಾರೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಒಟ್ಟು 3 ಹೆಕ್ಟೇರ್ ಪ್ರದೇಶದಲ್ಲಿ ನೇರಳೆ ಬೆಳೆ ಇದೆ. ಈ ಪೈಕಿ ಅಜ್ಜಂಪುರದ ಹೆಬ್ಬೂರು, ಹೆಗ್ಗಡೀಹಳ್ಳಿ ಹಾಗೂ ಕಡೂರು ಭಾಗದಲ್ಲಿ ಹೆಚ್ಚು. ಬಹುತೇಕ ರೈತರು ಸಾಂಪ್ರಾದಾಯಿಕ ಹಾಗೂ ಲಾಭದಾಯಕ ಬೆಳೆಗಳಾದ ತೆಂಗು, ಅಡಿಕೆಗೆ ಒಲವು ತೋರುತ್ತಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ನೇರಳೆ ಬೆಳೆಯುವ ರೈತರ ಪ್ರಮಾಣ ಕ್ಷೀಣಿಸುತ್ತಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎಸ್‌. ರೇಣುಕರಾಧ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಕೆಲವು ರೈತರು ತಮ್ಮ ಹೊಲದ ಬದುಗಳಲ್ಲಿ ಒಂದೆರಡು ನೇರಳೆ ಗಿಡ ಬೆಳೆಯತ್ತಾರೆ. ರಸ್ತೆ ಬದಿಗಳಲ್ಲಿ ಇದ್ದ ಹಣ್ಣಿನ ಗಿಡಗಳು ಈಗ ಕಡಿಮೆಯಾಗುತ್ತಿವೆ. ಮಾರುಕಟ್ಟೆಯಲ್ಲಿ ನೇರಳೆಗೆ ಉತ್ತಮ ಬೆಲೆ ಇದೆ ರೈತರು ಇದನ್ನು ಮನಗಾಣಬೇಕು. ಪ್ರೋತ್ಸಾಹಿಸುವ ರೈತರಿಗೆ ಇಲಾಖೆಯಿಂದ ಅಗತ್ಯ ಮಾಹಿತಿ ಹಾಗೂ ಸವಲತ್ತು ಸಿಗಲಿದೆ ಎಂದರು.

ಜಿಲ್ಲೆಯಲ್ಲಿ ನೇರಳೆ ಬೆಳೆ ಪ್ರಮಾಣ ಕಡಿಮೆ. ಹಾಗಾಗಿ ಹೊರಜಿಲ್ಲೆಗಳಿಂದ ಸಗಟು ದರದಲ್ಲಿ ತರುವ ವ್ಯಾಪಾರಿಗಳಿಂದ ಹಣ್ಣು ಖರೀದಿಸಿ ಮಾರಾಟ ಮಾಡುತ್ತೇವೆ. ವ್ಯಾಪಾರ ಉತ್ತಮವಾಗಿದೆ.
– ರಶೀದ್‌ ನೇರಳೆ ಹಣ್ಣಿನ ವ್ಯಾಪಾರಿ

ನೇರಳೆ ಹಣ್ಣಿನಲ್ಲಿದೆ ಔಷಧೀಯ ಗುಣ

ಆಯುರ್ವೇದ ಚಿಕಿತ್ಸೆಯಲ್ಲಿ ಮಹತ್ವ ಪಡೆದಿರುವ ನೇರಳೆ ಹಣ್ಣು ಹೆಚ್ಚಿನ ಔಷಧೀಯ ಗುಣಗಳನ್ನು ಹೊಂದಿದೆ ಎಂದು ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಗೀತಾ ತಿಳಿಸಿದರು. ಮಧುಮೇಹವನ್ನು ಹತೋಟಿಗೆ ತರಲು ರಕ್ತಹೀನತೆ ಕಡಿಮೆ ಮಾಡಲು ಇದು ರಾಮಬಾಣವಿದ್ದಂತೆ. ಸಿ.ಜೀವಸತ್ವ ಪೊಟ್ಯಾಶಿಯಂ ಖನಿಜ ಲವಣಾಂಶಗಳಿರುವ ಈ ಹಣ್ಣಿನ ತೊಗಟೆ ಬೀಜಗಳಲ್ಲಿಯೂ ಔಷಧ ಗುಣ ಅಡಗಿದೆ. ಒಟ್ಟಾರೆ ಸದೃಢ ಆರೋಗ್ಯಕ್ಕೆ ಸಹಕಾರಿ. ಹಾಗಾಗಿ ಮಾರುಕಟ್ಟೆಗಳಲ್ಲಿಯೂ ಇದರ ದರ ಹೆಚ್ಚಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT