ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರೂರು: ಆದಾಯ ಹೆಚ್ಚಾದ ಕಾರಣಕ್ಕೆ ಜಾತಿ ಪ್ರಮಾಣಪತ್ರ ತಿರಸ್ಕರಿಸಿದ ಕಂದಾಯ ಇಲಾಖೆ

Published 31 ಆಗಸ್ಟ್ 2023, 13:33 IST
Last Updated 31 ಆಗಸ್ಟ್ 2023, 13:33 IST
ಅಕ್ಷರ ಗಾತ್ರ

ಬೀರೂರು: ಆದಾಯ ಹೆಚ್ಚಿದೆ ಎನ್ನುವ ಕಾರಣಕ್ಕೆ ಜಾತಿ ದೃಢೀಕರಣ ಪ್ರಮಾಣಪತ್ರಕ್ಕೆ ಸಲ್ಲಿಸಲಾದ ಅರ್ಜಿಯನ್ನು ಕಂದಾಯ ಇಲಾಖೆ ತಿರಸ್ಕರಿಸಿದ ಪ್ರಕರಣ ಬೀರೂರು ಪಟ್ಟಣದಲ್ಲಿ ವರದಿಯಾಗಿದೆ.

ಬೀರೂರು ಪಟ್ಟಣದ ನಿವಾಸಿ ಪರಿಶಿಷ್ಟ ಜಾತಿಗೆ ಸೇರಿದ ರಮ್ಯಾ (ಹೆಸರು ಬದಲಿಸಿದೆ) ಎಂಬುವರು ಜಾತಿ ದೃಢೀಕರಣ ಪತ್ರ ಕೋರಿ ಗ್ರಾಮ ಒನ್ ಸೇವಾಕೇಂದ್ರದ ಮೂಲಕ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಸರ್ಕಾರ ನಿಗದಿ ಪಡಿಸಿದ ಅವಧಿ ಮುಗಿದ ಬಳಿಕ ದೃಢೀಕರಣ ಪತ್ರ ಲಭ್ಯವಿದ್ದರೆ ಪಡೆಯಲು ಅರ್ಜಿ ಸಲ್ಲಿಸಿದ ಸೇವಾಕೇಂದ್ರಕ್ಕೆ ತೆರಳಿ ಪರಿಶೀಲಿಸಿದಾಗ ಅರ್ಜಿ ತಿರಸ್ಕೃಗೊಂಡಿರುವುದು ಕಂಡು ಬಂದಿದೆ. ಜಾತಿ ದೃಢೀಕರಣ ಪತ್ರ ತಿರಸ್ಕೃತಗೊಳ್ಳಲು ಕಾರಣವೇನು ಎಂದು ಪರಿಶೀಲಿಸಿದಾಗ ಹಿಂಬರಹದಲ್ಲಿ  ಆದಾಯ ಮಿತಿಗಿಂತ ಹೆಚ್ಚಿರುವುದರಿಂದ ಜಾತಿ ಪ್ರಮಾಣಪತ್ರ ನೀಡಲಾಗುವುದಿಲ್ಲ' ಎಂದು ನಮೂದಿಸಲಾಗಿತ್ತು. ಇದನ್ನು ಕಂಡು ಕಂಗೆಟ್ಟ ಅರ್ಜಿದಾರರು ಜಾತಿ ಪ್ರಮಾಣಪತ್ರಕ್ಕೂ ಆದಾಯ ಮಿತಿಗೂ ಏನು ಸಂಬಂಧ ಎಂದು ಗೊಂದಲಗೊಂಡಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಡೂರು ತಹಶೀಲ್ದಾರ್ ಎಂ.ಪಿ.ಕವಿರಾಜ್, ಈ ವಿಷಯ ಗಮನಕ್ಕೆ ಬಂದಿದೆ, ಅರ್ಜಿದಾರರು ಜಾತಿ ಪ್ರಮಾಣಪತ್ರಕ್ಕೆ ಕೋರಿಕೆ ಸಲ್ಲಿಸುವಾಗ ತಂದೆಯ ಜಾತಿ ಪ್ರಮಾಣಪತ್ರವನ್ನು ಲಗತ್ತಿಸಿರಲಿಲ್ಲ. ವಿಷಯ ನಿರ್ವಾಹಕರು ಕಾರಣ ನಮೂದಿಸುವ ಸಂದರ್ಭದಲ್ಲಿ ಇರುವ ಆಯ್ಕೆಗಳಲ್ಲಿ ತಪ್ಪು ಆಯ್ಕೆ ನಮೂದಿಸಿರುವ ಕಾರಣ ಹೀಗಾಗಿದೆ. ಈ ವಿಷಯವಾಗಿ ಅಟಲ್ ಜನಸ್ನೇಹಿ ಕೇಂದ್ರದ ವೆಬ್ ನಿರ್ವಾಹಕರಿಗೆ ನಿಗದಿತ ಕಾರಣಗಳನ್ನು ನಮೂದಿಸಲು ಅವಕಾಶವಾಗುವಂತೆ ಕೇಂದ್ರಗಳಲ್ಲಿ ಬದಲಾವಣೆ ಮಾಡಲು ಕೋರಲಾಗುವುದು' ಎಂದು ತಿಳಿಸಿದರು.

ಗ್ರಾಮ ಒನ್ ಅಥವಾ ನಾಗರಿಕ ಸೇವಾಕೇಂದ್ರಗಳಿಂದ ನಾಡಕಚೇರಿ ಅಥವಾ ತಾಲ್ಲೂಕು ಕಚೇರಿಗೆ ಸಲ್ಲಿಸಲಾದ ಬಹಳಷ್ಟು ಅರ್ಜಿಗಳನ್ನು ಸರಿಯಾಗಿ ಪರಿಶೀಲಿಸದೆ ತಿರಸ್ಕೃತಗೊಳಿಸುವ  ಬಹಳಷ್ಟು ಪ್ರಕರಣಗಳು ವರದಿಯಾಗುತ್ತಿದ್ದು ತಾಲ್ಲೂಕು ಆಡಳಿತ ಈ ಬಗ್ಗೆ ಸೂಕ್ತ ಕ್ರಮ ವಹಿಸಿ ಅರ್ಹ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT