ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನರಸಿಂಹರಾಜಪುರ | ಹದಗೆಟ್ಟ ರಸ್ತೆ: ಮಳೆಗಾಲದಲ್ಲಿ ಕೆಸರುಗದ್ದೆ

ಜನಪ್ರತಿನಿಧಿಗಳ ನಿರ್ಲಕ್ಷ್ಯ; 2.5 ಕಿ.ಮೀ ಮಾರ್ಗ ಕ್ರಮಿಸಲು ಗ್ರಾಮಸ್ಥರ ಪರದಾಟ
Published 21 ಮೇ 2024, 13:31 IST
Last Updated 21 ಮೇ 2024, 13:31 IST
ಅಕ್ಷರ ಗಾತ್ರ

ನರಸಿಂಹರಾಜಪುರ: ತಾಲ್ಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇದಾನಿವಾಸ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಈ ಮಾರ್ಗದಲ್ಲಿ ಸಂಚರಿಸಲು ಗ್ರಾಮಸ್ಥರು ಪರದಾಡುವಂತಾಗಿದೆ. 

ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳದಮನೆ, ಕೆಸವೆ, ಹಳೇದಾನಿವಾಸದ ಮೂಲಕ ಗೇರುಬೈಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಈ ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 300ಕ್ಕೂ ಹೆಚ್ಚು ಜನರು ವಾಸವಿದ್ದಾರೆ. ಮಾಜಿ ಸಚಿವರಾಗಿದ್ದ ಎಚ್.ಜಿ.ಗೋವಿಂದೇಗೌಡರ ಕಾಲದಲ್ಲಿ ಈ ಗ್ರಾಮಕ್ಕೆ ಡಾಂಬರು ರಸ್ತೆ ನಿರ್ಮಿಸಲಾಗಿತ್ತು. ಸದ್ಯ ರಸ್ತೆಗೆ ಹಾಕಿದ್ದ ಡಾಂಬರು, ಜಲ್ಲಿ ಕಿತ್ತುಹೋಗಿದ್ದು ಸಂಪೂರ್ಣ ಮಣ್ಣಿನ ರಸ್ತೆಯಾಗಿ ಮಾರ್ಪಟ್ಟಿದೆ. ಮಳೆಯಾದಾಗ ರಸ್ತೆ ಕೆಸರುಗದ್ದೆಯಾಗುತ್ತದೆ. ಇಲ್ಲಿ ವಾಹನ, ಜನರು ಹೋಗುವುದು ದುಸ್ತರವಾಗಿದೆ.  ನಡೆದುಕೊಂಡು ಹೋದರೆ ಬಟ್ಟೆಯಲ್ಲ ಕೆಸರುಮಯವಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಕೆಸರು ಮಯವಾಗುವುದರಿಂದ ಆಟೊದವರು ಈ  ಗ್ರಾಮಕ್ಕೆ ಬಾಡಿಗೆಗೆ ಬರುವುದಿಲ್ಲ. ಒಂದು ವೇಳೆ ಬಂದರೂ ಹೆಚ್ಚುವರಿ ಬಾಡಿಗೆ ಕೇಳುತ್ತಾರೆ ಎನ್ನುತ್ತಾರೆ ಗ್ರಾಮಸ್ಥರು.

ಈ ಗ್ರಾಮಗಳ ವ್ಯಾಪ್ತಿಯಿಂದ  100ಕ್ಕೂ ಹೆಚ್ಚು ಮಕ್ಕಳು ಶಾಲಾ, ಕಾಲೇಜಿಗೆ ಹೋಗುತ್ತಾರೆ. ಯಾವುದೇ ಶಾಲಾ ವಾಹನಗಳು ಈ ಗ್ರಾಮಕ್ಕೆ ಬರುವುದಿಲ್ಲವಾದ್ದರಿಂದ ಸುಮಾರು 2.50 ಕಿ.ಮೀ ದೂರವನ್ನು ಕೆಸರಿನಲ್ಲೇ ನಡೆದುಕೊಂಡು ಸಾಗಬೇಕು. ಮುಖ್ಯರಸ್ತೆಗೆ ಬಂದು ಅಲ್ಲಿಂದ ಶಾಲಾ ವಾಹನ ಹಿಡಿದು ಪಟ್ಟಣಕ್ಕೆ ಹೋಗಬೇಕು.

ಹಲವು ವರ್ಷಗಳಿಂದ ರಸ್ತೆ ದುರಸ್ತಿಪಡಿಸುವಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ದಶಕದಿಂದ ಈ ರಸ್ತೆ ಜಲ್ಲಿಯನ್ನೂ ಕಂಡಿಲ್ಲ. ಸದ್ಯ ಮಳೆ ಆರಂಭಗೊಂಡಿದ್ದರೂ, ಬೆಳಿಗ್ಗೆ ಬಿಸಿಲಿರುವುದರಿಂದ ಹೇಗೋ ಓಡಾಡಬಹುದು. ಆದರೆ, ಒಮ್ಮೆ ಮಳೆಗಾಲ ಆರಂಭಗೊಂಡ ನಂತರ ಗ್ರಾಮಸ್ಥರ ಸ್ಥಿತಿ ಹೇಳತೀರದಾಗಿದೆ ಎಂದು ಗ್ರಾಮಸ್ಥರಾದ ಏಲಿಯಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಬಂಧಪಟ್ಟವರು ಈಗಲಾದರೂ ಇತ್ತ ಗಮನಹರಿಸಿ ಕನಿಷ್ಟ ಜಲ್ಲಿರಸ್ತೆಯನ್ನಾದರೂ ನಿರ್ಮಿಸಿ ಶಾಲಾ ಮಕ್ಕಳಿಗೆ, ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT