ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೂರಿನಿಂದ ಬೆಂಗಳೂರಿಗೆ ಅಂತರ 998 ಕಿಮೀ!: ಫಲಕಗಳಲ್ಲಿ ತಪ್ಪು ಮಾಹಿತಿ

ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿ ಪ್ರಾಧಿಕಾರ ಅಳವಡಿಸಿರುವ ಫಲಕಗಳಲ್ಲಿ ತಪ್ಪು ಮಾಹಿತಿ
ಬಾಲು ಮಚ್ಚೇರಿ ಕಡೂರು
Published 4 ಏಪ್ರಿಲ್ 2024, 7:06 IST
Last Updated 4 ಏಪ್ರಿಲ್ 2024, 7:06 IST
ಅಕ್ಷರ ಗಾತ್ರ

ಕಡೂರು: ಪಟ್ಟಣದಿಂದ ಬೆಂಗಳೂರಿಗೆ ಇರುವ ಅಂತರ 206 ಕಿಲೋಮೀಟರ್. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಕಾರ ಬೆಂಗಳೂರು ಹಾಗೂ ಕಡೂರು ನಡುವಿನ ದೂರ 992 ಕಿ.ಮೀ!

ಕಡೂರು ಹೊರವಲಯದಲ್ಲಿ, ರಾಷ್ಟ್ರೀಯ ಹೆದ್ದಾರಿ 206ರ ಬೈಪಾಸ್ ರಸ್ತೆಯಲ್ಲಿ ಪ್ರಾಧಿಕಾರ ಅಳವಡಿಸಿರುವ ಫಲಕಗಳಲ್ಲಿ ಈ ಲೋಪ ಕಂಡುಬಂದಿದೆ.

ಬೆಂಗಳೂರು-ಹೊನ್ನಾವರ ಚತುಷ್ಪಥ ರಸ್ತೆ ಕಾಮಗಾರಿ ಕಡೂರು ವ್ಯಾಪ್ತಿಯಲ್ಲಿ ಬಹುತೇಕ ಮುಗಿದಿದ್ದು ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಈ ರಸ್ತೆಯ ಸೂಚನಾ ಫಲಕಗಳಲ್ಲಿ ತಪ್ಪುಗಳು ಕಾಣಿಸಿಕೊಂಡಿವೆ. ಕಡೂರು ಗಡಿ ಭಾಗ ಬಾಣಾವರದಿಂದ 2 ಕಿಮೀ ದೂರದಲ್ಲಿರುವ ಫಲಕದಲ್ಲಿ ಬೇಲೂರಿಗೆ 105 ಕಿಮೀ ಎಂದಿದೆ. ಆದರೆ ಅಲ್ಲಿಂದ ಬೇಲೂರಿಗೆ ಇರುವ ದೂರ 70 ಕಿಮೀ ಮಾತ್ರ. ಇಲ್ಲಿಂದಲೂ ಬೆಂಗಳೂರಿಗೆ 992 ಕಿ‌ಮೀ ದೂರ ಎಂದು ಇದೆ. ಇದರಿಂದ ವಾಹನ ಚಾಲಕರು ಗೊಂದಲಕ್ಕೊಳಗಾಗುತ್ತಿದ್ದಾರೆ. ನಿಜವಾಗಿ ಅಲ್ಲಿಂದ ಬೆಂಗಳೂರು 186 ಕಿಮೀ ದೂರದಲ್ಲಿದೆ.

ತುಮಕೂರು 135 ಕಿಮೀ‌ ದೂರದಲ್ಲಿದ್ದರೂ ಫಲಕದಲ್ಲಿ 118 ಕಿಮೀ ಎಂದು ಇದೆ. 50 ಕಿಮೀ ದೂರದ ಹುಳಿಯಾರ್‌ಗೆ 86 ಕಿಮೀ ಸಾಗಬೇಕು ಎಂದು ಬರೆಯಲಾಗಿದೆ. ದಾಬಸ್ ಪೇಟೆ 167 ಕಿಮೀ ದೂರದಲ್ಲಿದ್ದರೂ ಪ್ರಾಧಿಕಾರದ ಪ್ರಕಾರ 138 ಕಿಮೀ ದೂರದಲ್ಲಿದೆ

ಚಿಕ್ಕಮಗಳೂರು, ಶಿವಮೊಗ್ಗ ಮುಂತಾದ ಕಡೆಗೆ ಬೆಂಗಳೂರು ಮತ್ತಿತರ ಕಡೆಯಿಂದ ವಾರಾಂತ್ಯದ ರಜೆ ಕಳೆಯಲು ಬರುವವರು ಗಮ್ಯ ತಲುಪಲು ಗೂಗಲ್ ಮ್ಯಾಪ್ ಬಳಸುತ್ತಾರೆ. ಮ್ಯಾಪ್‌ನಲ್ಲಿ ತೋರಿಸುವ ಅಂತರಕ್ಕೂ ಫಲಕದಲ್ಲಿ ಬರೆದಿರುವ ಅಂತರಕ್ಕೂ ವ್ಯತ್ಯಾಸ ಇರುವುದರಿಂದ ಗೊಂದಲಕ್ಕೀಡಾಗುತ್ತಾರೆ. 

ಕಡೂರಿನಲ್ಲಿ ಕುವೆಂಪು ವಿವಿ?

ರಸ್ತೆಯಲ್ಲಿ ಕುಪ್ಪಾಳು ಸರ್ವೀಸ್ ರಸ್ತೆಯಲ್ಲಿ ಕುವೆಂಪು ವಿಶ್ವವಿದ್ಯಾಲಯ ಎಂದು ಬರೆದ ದೊಡ್ಡ ಫಲಕ ಅಳವಡಿಸಲಾಗಿದೆ. ಕುವೆಂಪು ವಿವಿ‌ ಇರುವುದು ಶಿವಮೊಗ್ಗಕ್ಕೆ ಹತ್ತಿರದ ಶಂಕರಘಟ್ಟದಲ್ಲಿ. ಇಲ್ಲಿರುವುದು ವಿವಿ‌ ಸ್ನಾತಕೋತ್ತರ ಕೇಂದ್ರ. ಫಲಕ ನೋಡಿದ ಕೆಲವರು ಕುವೆಂಪು ವಿವಿ  ಶಿವಮೊಗ್ಗದಲ್ಲಿದೆಯೋ ಕಡೂರಿನಲ್ಲಿದೆಯೋ ಎಂಬ ಗೊಂದಲಕ್ಕೆ ಒಳಗಾಗುತ್ತಾರೆ.

ಸರ್ವಿಸ್ ರಸ್ತೆಗೆ ಹೋಗುವ ಬಗ್ಗೆಯೂ ಸರಿಯಾದ ಮಾಹಿತಿ ಇಲ್ಲ. ಕೆಲವು ಕಡೆಗಳಲ್ಲಿ ಊರುಗಳಿಗೆ ಹೋಗಲು ಮೇಲ್ಸೇತುವೆಯ ಮೇಲೆ ಸಾಗಬೇಕೋ ಬೇಡವೋ ಎಂಬ ಸಂದೇಹ ಕಾಡುತ್ತದೆ. ಯು ಟರ್ನ್ ತೆಗೆದುಕೊಳ್ಳವುದಕ್ಕೂ ಸರಿಯಾದ ಸೂಚನೆಗಳಿಲ್ಲ. ಸರ್ವಿಸ್ ರಸ್ತೆಯಲ್ಲಿ ಎದುರು ಭಾಗದಿಂದ, ರಾಂಗ್ ಸೈಡ್‌ನಲ್ಲಿ ಬರುವ ವಾಹನಗಳನ್ನು ನಿಯಂತ್ರಿಸುವ ವ್ಯವಸ್ಥೆ ಇಲ್ಲ. ತಂಗಲಿ ಕ್ರಾಸ್ ಬಳಿ ಹೀಗೆ ಬಂದ ವಾಹನ ಢಿಕ್ಕಿಯಾಗಿ ಈಚೆಗೆ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT