ಬುಧವಾರ, ಸೆಪ್ಟೆಂಬರ್ 18, 2019
23 °C
ಮಳೆಗೆ ವಿದ್ಯುತ್‌ ಕಂಬ, ಮರಗಳು ಧರೆಗುರುಳಿ ಪೂರೈಕೆ ಕಡಿತ

ಚಿಕ್ಕಮಗಳೂರು: 15 ದಿನಗಳಿಂದ ವಿದ್ಯುತ್‌ ಇಲ್ಲದೆ ಹೈರಾಣ

Published:
Updated:
Prajavani

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದ ಏಳು ಗ್ರಾಮಗಳಲ್ಲಿ ವಿದ್ಯುತ್‌ ಪೂರೈಕೆ ಇನ್ನೂ ಸರಿಯಾಗಿಲ್ಲ. ಈ ಗ್ರಾಮಗಳ ಜನರು ಪಡಿಪಾಟಲು ಪಡುವಂತಾಗಿದೆ.

ಮೂಡಿಗೆರೆ ತಾಲ್ಲೂಕಿನ ತತ್ಕೋಳ, ಎಸ್ಟೇಟ್‌ಕುಂದೂರು, ಹಳ್ಳಿಬೈಲು, ಹುಲ್ಲೆಮನೆ, ಬಾಳೂರು ಚನ್ನಹಡ್ಲು, ಎನ್‌.ಆರ್‌.ಪುರ ತಾಲ್ಲೂಕಿನ ಹೊಸಗದ್ದೆ, ಆಡಿಕೆಸ್ಕೊಡು ಗ್ರಾಮಗಳಲ್ಲಿ 15 ದಿನಗಳಿಂದ ವಿದ್ಯುತ್‌ ಇಲ್ಲ. ಮೊಂಬತ್ತಿ, ಸೀಮೆಎಣ್ಣೆ ದೀಪದ ಬೆಳಕಿನಲ್ಲಿ ರಾತ್ರಿ ಕಳೆಯಬೇಕಾಗಿದೆ. ಅಕ್ಕಪಕ್ಕದ ಊರುಗಳಿಗೆ ಹೋಗಿ ಮೊಬೈಲ್‌ ಫೋನ್‌ ಚಾರ್ಜ್‌ ಮಾಡಿಕೊಳ್ಳಬೇಕಾದ ಸ್ಥಿತಿ ಇದೆ.‌

‘ಮಳೆಯಿಂದಾಗಿ ಗ್ರಾಮದ ಬೀದಿಗಳು ಕೆಸರುಮಯವಾಗಿವೆ. ರಾತ್ರಿ ಹೊತ್ತಿನಲ್ಲಿ ಓಡಾಡುವುದು ಕಷ್ಟ. ದೀಪದ ಬೆಳಕಿನಲ್ಲಿ ಕತ್ತಲಿನಲ್ಲಿ ಮನೆಗೆಲಸ ಮಾಡಿಕೊಳ್ಳುವುದು ತ್ರಾಸು’ ಎಂದು ತತ್ಕೋಳದ ಮಹಿಳೆಯೊಬ್ಬರು ಸಂಕಷ್ಟ ತೋಡಿಕೊಂಡರು.

‘ಕರೆಂಟ್‌ ಇಲ್ಲದಿರುವುದು ಬಹಳ ತೊಂದರೆಯಾಗಿದೆ. ವಿದ್ಯಾರ್ಥಿಗಳು ದೀಪದ ಬೆಳಕಿನಲ್ಲಿ ಓದಿಕೊಳ್ಳಬೇಕಿದೆ’ ಎಂದು ಗಿರೀಶ್‌ ತತ್ಕೋಳ ಅಲವತ್ತುಕೊಂಡರು.

ಮಳೆಯಿಂದಾಗಿ ವಿದ್ಯುತ್‌ ಕಂಬಗಳು ಧರೆಗುರುಳಿ, ವಿದ್ಯುತ್‌ ಮಾರ್ಗ ಹಾಳಾಗಿ ಹಲವಾರು ಗ್ರಾಮಗಳಿಗೆ ಪೂರೈಕೆ ಕಡಿತವಾಗಿತ್ತು. ಮಲೆನಾಡು ಭಾಗದಲ್ಲಿ 1,800ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಹಾಳಾಗಿದ್ದವು. ಹೊಸ ಕಂಬಗಳ ಅಳವಡಿಕೆ, ರಿಪೇರಿ ಕೈಗೆತ್ತಿಕೊಳ್ಳಲಾಗಿದೆ.

‘ತತ್ಕೋಳ ಭಾಗದಲ್ಲಿ ಸುಮಾರು 50 ಕಂಬಗಳು ಕೊಚ್ಚಿ ಹೋಗಿವೆ. ಹೊಸದಾಗಿ ಕಂಬಗಳನ್ನು ಅಳವಡಿಸಲಾಗುತ್ತಿದೆ. ಚಿಕ್ಕಮಗಳೂರು, ಮೂಡಿಗೆರೆ ಭಾಗದಲ್ಲಿ 900ಕ್ಕೂ ಹೆಚ್ಚು ಕಂಬಗಳನ್ನು ಅಳವಡಿಸಲಾಗಿದೆ. ಪೂರೈಕೆ ಕಡಿತವಾಗಿದ್ದ ಬಹುತೇಕ ಕಡೆ ಮಾರ್ಗ ಸರಿಪಡಿಸಿ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ’ ಎಂದು ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

Post Comments (+)