ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರಿ ಶ್ರೇಣಿ: ಅಪಾಯದ ಮಗ್ಗುಲಲ್ಲಿ ಪಯಣ

ಸಾಲುರಜೆಗಳ ದಿನಗಳಲ್ಲಿ ಪ್ರವಾಸಿಗರ ದಾಂಗುಡಿ– ದಟ್ಟಣೆ ನಿರ್ವಹಣೆಯೇ ಸವಾಲು
Last Updated 4 ಜನವರಿ 2022, 5:34 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ತಾಲ್ಲೂಕಿನ ಗಿರಿಶ್ರೇಣಿ ಮಾರ್ಗದ ಹಲವೆಡೆ ರಸ್ತೆಯ ಹಂಚಿನ ಮಣ್ಣು ಕುಸಿದಿದೆ, ಸೇತುವೆಗಳು ಹಾಳಾಗಿವೆ, ನೀರು ಹರಿದು ಡಾಂಬರು ಕಿತ್ತು ಕೊರಕಲಾಗಿದೆ. ಈ ಘಾಟಿ ರಸ್ತೆಯಲ್ಲಿ ವಾಹನಗಳು ಅಪಾಯದ ಮಗ್ಗುಲಲ್ಲಿ ಓಡಾಡಬೇಕಾದ ಸ್ಥಿತಿ ಇದೆ.

ಕಳೆದ ವರ್ಷ ಸುರಿದ ನಿರಂತರ ಮಳೆಯಿಂದಾಗಿ ಬೆಟ್ಟ ಶ್ರೇಣಿಯ ಅಲ್ಲಲ್ಲಿ ಮಣ್ಣು ಕುಸಿದಿದೆ. ರಸ್ತೆ ಬದಿಯಲ್ಲಿ ನೀರು ಹರಿಯಲು ವ್ಯವಸ್ಥಿತವಾಗಿ ಮೋರಿ ನಿರ್ಮಿಸಿಲ್ಲ. ಕೆಲವು ಕಡೆ ರಸ್ತೆ ಅಂಚಿನ ಡಾಂಬರು ಹಾಳಾಗಿದೆ. ಕೆಲವೆಡೆ ಗುಂಡಿಗಳಾಗಿವೆ. ಕೆಲವೆಡೆ ಸೇತುವೆಗಳು ಹಾಳಾಗಿವೆ. ಹಲವು ಕಡೆ ತಗ್ಗು,ದಿಬ್ಬ ಗುಂಡಿಗಳಾಗಿವೆ. ಚಂದ್ರದ್ರೋಣ ಪರ್ವತ ಶ್ರೇಣಿಯು ಕಾಫಿನಾಡಿನ ರಮಣೀಯ ಪ್ರವಾಸಿ ತಾಣಗಳ ಬೀಡು. ಮುಳ್ಳಯ್ಯನಗಿರಿ, ಸೀತಾಳಯ್ಯನ ಗಿರಿ, ಹೊನ್ನಮ್ಮನಹಳ್ಳ, ಬಾಬಾಬುಡನ್‌ ಗಿರಿ, ಮಾಣಿಕ್ಯ ಧಾರಾ, ಗಾಳಿ ಕೆರೆ ಮೊದಲಾದ ತಾಣಗಳು ಈ ಭಾಗದಲ್ಲಿ ಇವೆ.

ನಿತ್ಯ ಸಹಸ್ರಾರು ಪ್ರವಾಸಿಗರು ಗಿರಿ ಶ್ರೇಣಿಗೆ ಭೇಟಿ ನೀಡುತ್ತಾರೆ. ವಾರಾಂತ್ಯ, ಸಾಲುರಜೆಗಳ ದಿನಗಳಲ್ಲಿ ಗಿರಿ ಶ್ರೇಣಿಯಲ್ಲಿ ಪ್ರವಾಸಿಗರ ದಾಂಗುಡಿ, ವಾಹನ ದಟ್ಟಣೆ ವಿಪರೀತ ಇರುತ್ತದೆ. ವಾಹನ ಸಂಚಾರ ದಟ್ಟಣೆ ನಿರ್ವಹಣೆಯೇ ಸವಾಲು.

‘ಟಿಂಬರ್‌ ತುಂಬಿದ ಲಾರಿಗಳು, ಭಾರಿ ವಾಹನಗಳು (ದೊಡ್ಡ ಬಸ್‌, ಲಾರಿ) ಈ ಮಾರ್ಗದಲ್ಲಿ ಓಡಾಡುತ್ತವೆ. ವಾಹನಗಳ ದಟ್ಟಣೆಯು ಗಿರಿ ಮಾರ್ಗಕ್ಕೆ ‘ಕಂಟಕ’ವಾಗಿದೆ. ರಸ್ತೆ ನಿರ್ಮಾಣ ಕಾಮಗಾರಿ ಕಳಪೆಯಾಗಿದೆ’ ಎಂದು ಗಿರಿಶ್ರೇಣಿ ತಪ್ಪಲಿನ ಕೈಮರ ಗ್ರಾಮಸ್ಥ ಪ್ರಕಾಶ್‌ ಹೇಳುತ್ತಾರೆ.

ಈಚೆಗೆ ಬಿದ್ದ ಮಳೆಗೆ ಗಿರಿ ಶ್ರೇಣಿ ಮಾರ್ಗ ಮಧ್ಯದಲ್ಲಿನ ಹೊನ್ನಮ್ಮನ ಹಳ್ಳದ ಬಳಿಯೂ ಸೇತುವೆಯೂ ಕುಸಿದಿತ್ತು. ಕವಿಕಲ್ ಗಂಡಿ ಭಾಗದಲ್ಲಿ ಹಲವು ಕಡೆ ರಸ್ತೆ ಕೊರಕಲಾಗಿದೆ. ಡಾಂಬರು ಕಿತ್ತಿದೆ. ಒಂದು ಕಡೆ ನಿರ್ಮಿಸಿ ರುವ ತಡೆಗೋಡೆ ಸಂಪೂರ್ಣವಾಗಿ ವಾಲಿದೆ. ಈ ತಡೆ ಗೋಡೆ ಅಪಾಯಕ್ಕೆ ಆಹ್ವಾನ ನೀಡುವಂತಿದೆ.

ಗಿರಿಶ್ರೇಣಿ ಮಾರ್ಗದಲ್ಲಿ ಅಪಘಾತ ಗಳು ಮಾಮೂಲಿ ಎಂಬಂತಾಗಿದೆ. ಕೈಮರ ಭಾಗದಲ್ಲಿ ಈಚೆಗಷ್ಟೇ ಕಾರೊಂದು ಪಲ್ಟಿಯಾಗಿತ್ತು. ದ್ವಿಚಕ್ರ ವಾಹನ ಉರುಳಿ ಇಬ್ಬರಿಗೆ ಗಾಯವಾ ಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ.

‘ಗಿರಿಶ್ರೇಣಿ ಭಾಗದಲ್ಲಿ ಸುಮಾರು 30 ಕಡೆ ಮಣ್ಣು ಕುಸಿದಿದೆ. ಗಿರಿ ಭಾಗದ ಮಣ್ಣು ಮೃದು. ಮಳೆಯಿಂದಾಗಿ ಹಲವೆಡೆ ಕುಸಿದಿದೆ. ಗಿರಿ ಶ್ರೇಣಿ ಮಾರ್ಗದ ರಸ್ತೆಯನ್ನು ಅವೈಜ್ಞಾನಿಕವಾಗಿ ವಿಸ್ತರಣೆ ಮಾಡಿರುವುದು ಸಮಸ್ಯೆಗೆ ಕಾರಣ. ಗಿರಿಶ್ರೇಣಿಯಲ್ಲಿ ಪ್ರವಾಸಿ ವಾಹನ, ಟಿಂಬರ್‌ ಲಾರಿ, ಭಾರಿ ವಾಹನ ಓಡಾಟಕ್ಕೆ ಕಡಿವಾಣ ಹಾಕಬೇಕು. ವಾಹನಗಳಿಗೆ ಕಡಿವಾಣ ಹಾಕಿದರೆ ವಾಯು ಮಾಲಿನ್ಯ, ಶಬ್ಧ ಮಾಲಿನ್ಯ ತಪ್ಪುತ್ತದೆ’ ಎಂದು ವನ್ಯಜೀವಿ ಗೌರವ ಪರಿಪಾಲಕ ಡಾ.ಜಿ.ವಿರೇಶ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT