ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪ | ವಿದ್ಯುತ್ ಬದಲು 2 ಲೀಟರ್‌ ಸೀಮೆಎಣ್ಣೆ ಕೊಡಿ: ಗ್ರಾಮಸ್ಥರು

Published 13 ಜುಲೈ 2023, 14:28 IST
Last Updated 13 ಜುಲೈ 2023, 14:28 IST
ಅಕ್ಷರ ಗಾತ್ರ

ಕೊಪ್ಪ: ‘ಕಲ್ಲುಗುಡ್ಡೆ, ಹಾಲುಗೋಡು, ನಕ್ಸಲ್ ಪ್ರಭಾವ ಇದ್ದ ಪ್ರದೇಶವಾದ ಮೆಣಸಿನಹಾಡ್ಯ ಭಾಗದಲ್ಲಿ ಜಂಗಲ್ ಕಟಿಂಗ್ ಆಗಿಲ್ಲ, ವಿದ್ಯುತ್ ಸಮಸ್ಯೆಯಿದೆ’ ಎಂದು ಗ್ರಾಮಸ್ಥರಾದ ರಜಿತ್, ವಸಂತ್, ಸತೀಶ್ ಹೇಳಿದರು.

ಪುರಭವನದಲ್ಲಿ ಮೆಸ್ಕಾಂ ಎಂಜಿನಿಯರ್ ಸೋಮಶೇಖರ್ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಗ್ರಾಮಸ್ಥರೊಬ್ಬರು ಮಾತನಾಡಿ, ‘ಕಲ್ಲುಗುಡ್ಡೆ, ಗಣಪತಿಕಟ್ಟೆ ಭಾಗದಲ್ಲಿ ವಿದ್ಯುತ್ ಇರುವುದಿಲ್ಲ. ಪ್ರಶ್ನಿಸಿದರೆ, ಜಂಗಲ್ ಕಟಿಂಗ್ ನಡೆಯುತ್ತಿದೆ ಎಂದು ಹೇಳುತ್ತೀರಿ. ವರ್ಷವಿಡೀ ಜಂಗಲ್ ಕಟಿಂಗ್ ಮಾಡುವುದಾದರೆ ನಮ್ಮ ಭಾಗಕ್ಕೆ ವಿದ್ಯುತ್ ಬೇಡ, 2 ಲೀಟರ್ ಸೀಮೆಎಣ್ಣೆ ಕೊಡಿ. ಮಕ್ಕಳಿಗೆ ಓದಿಕೊಳ್ಳಲು ಬೆಳಕಿನ ವ್ಯವಸ್ಥೆ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭುವನಕೋಟೆ ಗ್ರಾಮ ಪಂಚಾಯಿತಿ ಸದಸ್ಯ ಶ್ರೀಕಾಂತ್ ಮಾತನಾಡಿ, ‘ಹುರುಳಿಹಕ್ಲು ಎಂಬಲ್ಲಿ 75 ವರ್ಷಗಳಿಂದ ಮರದ ವಿದ್ಯುತ್ ಕಂಬವಿದ್ದು ಅದನ್ನು ತೆರವುಗೊಳಿಸಿಲ್ಲ, ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಆರೋಪಿಸಿದರು.

ಕೆಸವೆ ರಾಮಪ್ಪ ಮಾತನಾಡಿ, ‘ಕೆಸವೆಯಿಂದ ಸಿದ್ದರಮಠದ ವರೆಗೆ ಹಳೆಯ ತಂತಿಗಳೇ ಇದ್ದು, ಅದನ್ನು ಬದಲಾಯಿಸಿಲ್ಲ’ ಎಂದರು. ಇದಕ್ಕೆ ಉತ್ತರಿಸಿದ ಮೆಸ್ಕಾಂ ಎಇ ಶಶಿಕಾಂತ್ ರಾಥೋಡ್, ‘₹3.6 ಲಕ್ಷದ ಟೆಂಡರ್ ಪ್ರಕ್ರಿಯೆ ನಡೆದಿದೆ. ಸಿದ್ದರಮಠ, ಗುಣವಂತೆ ಪ್ರತ್ಯೇಕ ಲಿಂಕ್ ಲೈನ್ ಸಂಪರ್ಕ ಕಲ್ಪಿಸಲಾಗಿದೆ’ ಎಂದರು.

ಅಂಬಳಿಕೆಯ ಅಭಿಷೇಕ್ ಎಂಬುವರು ಮಾತನಾಡಿ, ‘ನಮ್ಮ ಮನೆ ಪಕ್ಕದಲ್ಲಿ ವಿದ್ಯುತ್ ಕಂಬ, ವಿದ್ಯುತ್ ಪರಿವರ್ತಕ ಅಪಾಯದ ಸ್ಥಿತಿಯಲ್ಲಿದೆ. ಅದನ್ನು ಸ್ಥಳಾಂತರಿಸಿ ಎಂದು ಮೆಸ್ಕಾಂ ಜೆಇ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧೀಕ್ಷಕ ಎಂಜಿನಿಯರ್ ಸೋಮಶೇಖರ್, ‘ಒಮ್ಮೆ ಅಳವಡಿಸಿದ ವಿದ್ಯುತ್ ಲೈನ್ ಸ್ಥಳಾಂತರಿಸಲು ಅವಕಾಶವಿಲ್ಲ. ಶಿಫ್ಟಿಂಗ್ ಚಾರ್ಜ್ ನೀಡಿದರೆ ಸ್ಥಳಾಂತರಿಸಬಹುದು’ ಎಂದು ತಿಳಿಸಿದರು.

ಚಾವಲ್ಮನೆ ಸುರೇಶ್ ನಾಯ್ಕ್ ಮಾತನಾಡಿ, ‘ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂಟರ್ ಮೀಡಿಯಟ್ ಫೋಲ್ ಅಳವಡಿಸಬೇಕು. ಅಲ್ಲಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದಿವೆ’ ಎಂದು ಹೇಳಿದರು.

‘ಗ್ರಾಮ ಪಂಚಾಯಿತಿಯಿಂದ ಫಲಾನುಭವಿಗಳ ಪಟ್ಟಿ ಕಳುಹಿಸಿದ್ದರೂ ಬೆಳಕು ಯೋಜನೆ ಪೂರ್ಣಗೊಳಿಸಿಲ್ಲ’ ಎಂದು ಮುಖಂಡರಾದ ಎಚ್.ಆರ್.ಜಗದೀಶ್, ಬಿ.ಪಿ.ಚಿಂತನ್ ಬೆಳಗೊಳ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮೆಸ್ಕಾಂ ಇಇ ಸಿದ್ಧೇಶ್, ‘ಸರ್ಕಾರದಿಂದ ಅನುದಾನ ಬಂದ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು’ ಎಂದರು.

ಮೇಲಿನಪೇಟೆ ನಿವಾಸಿ ಬರ್ಕತ್ ಆಲಿ ಮಾತನಾಡಿ, ‘ಕ್ಯಾಂಪ್ಕೋ ಬಳಿ ಕಳೆದ ಒಂದೂವರೆ ತಿಂಗಳ ಹಿಂದೆ ವಿದ್ಯುತ್ ಕಂಬ ಮುರಿದಿದೆ, ಅಧಿಕಾರಿಗಳ ಗಮನಕ್ಕೂ ತರಲಾಗಿತ್ತು ಆದರೂ ಯಾವುದೇ ಕ್ರಮವಾಗಿಲ್ಲ’ ಎಂದು ಹೇಳಿದರು.

ಸಭೆಯಲ್ಲಿ ಮೆಸ್ಕಾಂ ಇಇ ಸಿದ್ದೇಶ್, ಎಇಇ ಮಾರ್ತಾಂಡಪ್ಪ, ಎಇ ಸುಧೀರ್ ಪಟೇಲ್, ಪ್ರಶಾಂತ್, ಜೆಇ ಸೋಮಶೇಖರ್, ಎಎಒ ಮಂಜುನಾಥ್ ಇದ್ದರು.

‘ಮೆಸ್ಕಾಂ ಲಾರಿ ಸ್ಕ್ರಾಪ್ ಆಗಿದೆ, ಆರ್.ಸಿ ಇಲ್ಲ. ಅನಾಹುತ ಸಂಭವಿಸಿದರೆ ಜವಾಬ್ದಾರಿ ಯಾರು? ಎಂದು ಮೇಲಿನಪೇಟೆ ನಿವಾಸಿ, ಕಾಂಗ್ರೆಸ್ ಮುಖಂಡ ಬರ್ಕತ್ ಆಲಿ ಪ್ರಶ್ನಿಸಿದರು.

‘ಬೇರೆ ಕಡೆ ಮನೆ ಇದ್ದವರಿಗೆ, ದೀನ್ ದಯಾಳ್ ಯೋಜನೆಯಲ್ಲಿ 11 ರಿಂದ 12 ಕಂಬ ಹಾಕಿ ವಿದ್ಯುತ್ ಕಲ್ಪಿಸಲಾಗಿದೆ. ಪಂಚಾಯಿತಿ ಫಲಾನುಭವಿ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಯಾವ ದಾಖಲೆ ಆಧಾರದಲ್ಲಿ ಸಂಪರ್ಕ ಕಲ್ಪಿಸಲಾಗಿದೆ’ ಎಂದು ಗುಡ್ಡೆತೋಟ ಗ್ರಾಮ ಪಂಚಾಯಿತಿ ಸದಸ್ಯ ಪ್ರಶಾಂತ್ ಪ್ರಶ್ನಿಸಿದರು.

ಸಭೆ ನಡಯುವಾಗ ವಿದ್ಯುತ್‌ ವ್ಯತ್ಯಯ

ಮೆಸ್ಕಾಂ ಜನಸಂಪರ್ಕ ಸಭೆ ನಡೆಯುತ್ತಿದ್ದ ವೇಳೆ ವಿದ್ಯುತ್ ವ್ಯತ್ಯಯವಾಯಿತು. ಸಭೆಯಲ್ಲಿ ಭಾಗವಹಿಸಿದ್ದ ಕೆಲವರು ಇದನ್ನು ಪ್ರಶ್ನಿಸಿ ಮೆಸ್ಕಾಂ ಸಭೆ ನಡೆಯುವಾಗಲೇ ವಿದ್ಯುತ್ ಇಲ್ಲ ಇನ್ನು ಬೇರೆ ಸಮಯದಲ್ಲಿ ವಿದ್ಯುತ್ ಹೇಗೆ ಕೊಡುತ್ತೀರಿ ಎಂದು ಪ್ರಶ್ನಿಸಿದರು

ಯಾಕೆ ಸಂಪರ್ಕ ಕಲ್ಪಿಸಿಲ್ಲ?

ಪಟ್ಟಣ ಪಂಚಾಯಿತಿ ಸದಸ್ಯ ವಿಜಯಕುಮಾರ್ ಮಾತನಾಡಿ ‘ಪಟ್ಟಣ ವ್ಯಾಪ್ತಿಯಲ್ಲಿ ಆಗಾಗ ಪವರ್ ಕಟ್ ಆಗುವುದರಿಂದ ಜನರಿಗೆ ನೀರು ಕೊಡಲು ತೊಂದರೆಯಾಗುತ್ತಿದೆ. ಸಮಸ್ಯೆ ನಿವಾರಣೆಗೆಂದು ಈಗಾಗಲೇ ಅಳವಡಿಸಿರುವ ಎಬಿ ಕೇಬಲ್‌ಗೆ ಈವರೆಗೂ ಯಾಕೆ ಸಂಪರ್ಕ ಕಲ್ಪಿಸಿಲ್ಲ’ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮೆಸ್ಕಾಂ ಎಇ ಶಶಿಕಾಂತ್ ರಾಥೋಡ್ ‘ಎಬಿ ಕೇಬಲ್ ಹಿರಿಕೆರೆವರೆಗೆ ಹಾಕಲಾಗಿದೆ. ಸಂಪರ್ಕ ಕಲ್ಪಿಸಲು ಕ್ರಮ ವಹಿಸಲಾಗುವುದು’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT