ಮುಂದುವರಿದ ಮಳೆಯ ಅಬ್ಬರ: ಕೊಳೆ ರೋಗ ಭೀತಿಯಲ್ಲಿ ಅಡಿಕೆ ಬೆಳೆಗಾರರು

7

ಮುಂದುವರಿದ ಮಳೆಯ ಅಬ್ಬರ: ಕೊಳೆ ರೋಗ ಭೀತಿಯಲ್ಲಿ ಅಡಿಕೆ ಬೆಳೆಗಾರರು

Published:
Updated:
ಶೃಂಗೇರಿ ತಾಲ್ಲೂಕಿನ ರೈತರೊಬ್ಬರ ತೋಟದಲ್ಲಿ ಬೋರ್ಡೋ ದ್ರಾವಣ ಸಿದ್ಧಪಡಿಸುತ್ತಿರುವುದು.

ಶೃಂಗೇರಿ: ಮುಂಗಾರು ಮಳೆಯ ಅಬ್ಬರ ಸ್ವಲ್ಪ ಕಡಿಮೆಯಾಗುತ್ತಿದ್ದಂತೆ ತಾಲ್ಲೂಕಿನ ಅಡಿಕೆ ತೋಟಗಳಲ್ಲಿ ಕೊಳೆ ರೋಗ ನಿಯಂತ್ರಣದ ಔಷಧಿ ಸಿಂಪಡಣೆ ಕಾರ್ಯ ಚುರುಕುಗೊಂಡಿದೆ.

ಈ ವರ್ಷ ಬೇಸಿಗೆ ಕಾಲದಲ್ಲಿಯೇ ಅಲ್ಪಸ್ವಲ್ಪ ಮಳೆಯಾಗಿತ್ತು. ಮೇ ತಿಂಗಳಿನಲ್ಲಿಯೇ 20 ದಿನ ಮಳೆ ದಾಖಲಾಗಿದೆ. ಸತತ ಮಳೆಯಾಗಿರುವುದು ಮತ್ತು ಜೂನ್ ಮೊದಲ ವಾರದಿಂದಲೇ ಮುಂಗಾರು ಆರಂಭಗೊಂಡಿದ್ದರಿಂದ ಅಡಿಕೆ ತೋಟದಲ್ಲಿ ಕೊಳೆ ರೋಗ ನಿಯಂತ್ರಣ ಔಷಧಿ ಸಿಂಪಡಣೆಗೆ ಅಡ್ಡಿಯಾಗಿತ್ತು. ಸ್ವಲ್ಪ ದಿನಗಳಿಂದ ಮಳೆ ಬಿಡುವು ನೀಡಿದ ಹಿನ್ನೆಲೆಯಲ್ಲಿ ರೈತರು ಅಡಿಕೆ ತೋಟಕ್ಕೆ ಕೊಳೆ ರೋಗ ನಿಯಂತ್ರಣ ಔಷಧಿ ಸಿಂಪಡಣೆಗೆ ಮುಂದಾಗಿದ್ದಾರೆ.

ಈ ವರ್ಷ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಕೊಳೆ ರೋಗದ ಭೀತಿ ಹೆಚ್ಚಾಗಿದ್ದು, ಮಳೆ ಮುಂದುವರೆಯುವ ಸಾಧ್ಯತೆಯೂ ಇರುವುದರಿಂದ ತ್ವರಿತವಾಗಿ ಔಷಧಿ ಸಿಂಪಡಣೆಗೆ ಮುಂದಾಗಿದ್ದಾರೆ. ಅಡಿಕೆಗೆ ಕೊಳೆ ರೋಗ ಬಂದರೆ ರೈತರ ವಾರ್ಷಿಕ ಆದಾಯಕ್ಕೆ ಕುತ್ತು ಬರಲಿದ್ದು, ಇದರಿಂದ ರೈತರು ಮುಂಜಾಗ್ರತಾ ಕ್ರಮವನ್ನು ಅನುಸರಿಸುತ್ತಾರೆ. ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ 3-4 ಬಾರಿ ಔಷಧಿ ಸಿಂಪಡಣೆ ಅನಿವಾರ್ಯವಾದರೆ, ಸಾಮಾನ್ಯ ಮಳೆಯಾಗುವಲ್ಲಿಯೂ ಕನಿಷ್ಠ ಎರಡು ಬಾರಿ ಔಷಧಿ ಸಿಂಪಡಣೆ ಮಾಡಬೇಕಾಗುತ್ತದೆ.

ದುಬಾರಿಯಾದರೂ ಮೈಲುತುತ್ತಾ ಬಳಸಲೇಬೇಕಿದ್ದು, ಇದರೊಂದಿಗೆ ಕಾರ್ಮಿಕರ ಸಂಬಳ, ಯಂತ್ರದ ಖರ್ಚು ಕೂಡ ಸೇರಿ ರೈತರಿಗೆ ಹೊರೆಯಾಗುತ್ತಿದೆ. ಔಷಧಿ ಸಿಂಪಡಣೆ ಮಾಡುವ ಕಾರ್ಮಿಕರು ಸೀಮಿತವಾಗಿದ್ದು, ಇದರಿಂದ ಮಳೆ ಕಡಿಮೆಯಾದ ತಕ್ಷಣ ಔಷಧಿ ಸಿಂಪಡಿಸುವ ಕಾರ್ಮಿಕರಿಗೆ ಬೇಡಿಕೆ ಹೆಚ್ಚುತ್ತದೆ. ಔಷಧಿ ಸಿಂಪಡಿಸುವ ಕಾರ್ಮಿಕರು ಅನೇಕ ರೈತರ ತೋಟದ ಔಷಧಿ ಸಿಂಪಡಣೆಯ ಜವಾಬ್ದಾರಿ ಹೊಂದಿದ್ದು, ಒಂದು ಕಡೆಯಿಂದ ಸಿಂಪಡಣೆಗೆ ಮುಂದಾಗುತ್ತಾರೆ. ಇದರಿಂದ ಅಡಿಕೆ ತೋಟಕ್ಕೆ ಸಿಂಪಡಣೆ ಕಾರ್ಯ ಅನೇಕ ರೈತರ ತೋಟದಲ್ಲಿ ಸಮಯಕ್ಕೆ ಸರಿಯಾಗಿ ಆಗದೇ ತೊಂದರೆಗೆ ಸಿಲುಕುತ್ತಾರೆ.

ಮೊದಲಬಾರಿ ಸಮಯಕ್ಕೆ ಸರಿಯಾದ ಸಿಂಪಡಣೆ ಮಾಡಿ, ನಂತರ ಇಲಾಖೆ ಶಿಫಾರಸು ಮಾಡುವಂತೆ 45 ದಿನ ಅಥವಾ 45 ಇಂಚು ಮಳೆಯಾಗುವುದರೊಳಗೆ ಮತ್ತೊಮ್ಮೆ ಔಷಧಿ ಸಿಂಪಡಣೆ ಅಗತ್ಯವಾಗಿದೆ. ಎರಡನೇ ಬಾರಿ ಔಷಧಿ ಸಿಂಪಡಣೆಗೆ ಅಡಿಕೆ ಮರ ಸತತ ಮಳೆಯಿಂದ ಜಾರಿಕೆ ಮತ್ತು ಮಳೆ ಮುಂದುವರೆದಿದ್ದಲ್ಲಿ ಔಷಧಿ ಸಿಂಪಡಣೆ ವಿಳಂಬವಾಗಿ ಕೊಳೆ ರೋಗ ಹರಡುತ್ತದೆ. ಒಂದೇ ಕಡೆ ಅಡಿಕೆ ತೋಟವಿರುವ ಪ್ರದೇಶದಲ್ಲಿ ಒಂದು ತೋಟಕ್ಕೆ ರೋಗ ಬಂದರೂ ಅದು ಬೇರೆ ತೋಟಕ್ಕೆ ಹಬ್ಬುವ ಸಾಧ್ಯತೆ ಇರುತ್ತದೆ.

ಕೆಲ ವರ್ಷದ ಹಿಂದೆ ಪರಿಚಯವಾದ ಜೈವಿಕ ಔಷಧಿ ಇದೀಗ ರೈತರಿಂದ ದೂರವಾಗಿದ್ದು, ಮತ್ತೆ ಸಾಂಪ್ರದಾಯಿಕ ಔಷಧಿ ಬೋರ್ಡೋ ದ್ರಾವಣಕ್ಕೆ ರೈತರು ಮೊರೆ ಹೋಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !