ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಳುವವರಿಲ್ಲ ವಾಹನ ಸವಾರರ ಗೋಳು

ಹೆದ್ದಾರಿ ಸಂಕಟ: ಅವೈಜ್ಞಾನಿಕ ಕಾಮಗಾರಿ ಆರೋಪ
Last Updated 12 ಅಕ್ಟೋಬರ್ 2020, 8:43 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನಿಂದ ಕರಾವಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 234ರಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ವಾಹನ ಸವಾರರು ಹೈರಾಣಾಗುವಂತಾಗಿದೆ.

ಹೆದ್ದಾರಿಯ ಹ್ಯಾಂಡ್ ಪೋಸ್ಟ್‌ ನಿಂದ ಕೊಟ್ಟಿಗೆಹಾರದ ರಸ್ತೆಯಲ್ಲಿ ಕಿರು ಸೇತುವೆ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ಒಂದು ಬದಿಯನ್ನು ಅಗೆದು ಮುಚ್ಚಿದು, ಈ ಭಾಗದಲ್ಲಿ ಭಾರದ ವಾಹನಗಳು ಚಲಿಸಿದರೆ ಮಣ್ಣಿನಲ್ಲಿ ಸಿಲುಕಿಕೊಂಡು ಗಂಟೆಗಟ್ಟಲೇ ವಾಹನ ಸವಾರರು ಪರದಾಡುವಂತಾಗುತ್ತದೆ.

ಅಲ್ಲದೆ, ಮಳೆ ಸುರಿದರೆ ಕಿರು ಸೇತು ವೆಯ ಪ್ರದೇಶದಲ್ಲಿ ನೀರು ಸಂಗ್ರಹ ವಾಗುವುದರಿಂದ ವಾಹನಗಳನ್ನು ಚಲಾಯಿಸಲು ಸವಾರರು ಪರದಾಡು ವಂತಾಗಿದೆ. ರಾಷ್ಟ್ರೀಯ ಹೆದ್ದಾರಿ 234 ರ ವಿಸ್ತರಣಾ ಕಾರ್ಯಕ್ಕೆ ಎರಡು ವರ್ಷಗಳ ಹಿಂದೆ ಚಾಲನೆ ನೀಡಿದ್ದು, ಫಲ್ಗುಣಿ, ಬಿದರಹಳ್ಳಿ, ಅತ್ತಿಗೆರೆ, ಮುಗ್ರಹಳ್ಳಿ ಪ್ರದೇಶಗಳಲ್ಲಿ ಸೇತುವೆ ಕಾಮಗಾರಿಗಳು ಪೂರ್ಣವಾಗದೆ ಕಿರು ಸೇತುವೆಗಳನ್ನು ದಾಟಿಸಲು ವಾಹನ ಸವಾರರು ಹರಸಾಹಸ ಪಡುವಂತಾಗಿದೆ.

‘ಹ್ಯಾಂಡ್ ಪೋಸ್ಟ್ ಬಳಿ 15 ದಿನಗಳಿಂದಲೂ ವಾಹನ ದಟ್ಟಣೆ ಉಂಟಾಗುತ್ತಿದ್ದು, ಗಂಟೆಗಟ್ಟಲೇ ವಾಹನಗಳನ್ನು ರಸ್ತೆ ಬದಿ ಯಲ್ಲಿ ನಿಲ್ಲಿಸಿ ಕೊಂಡು ಕಾಯುವಂತಾಗಿದೆ. ಸೇತುವೆ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಭೂಮಿಯನ್ನು ಅಗೆದಿರುವ ಪ್ರದೇಶದಲ್ಲಿ ಸಮರ್ಪಕವಾಗಿ ರಸ್ತೆ ನಿರ್ಮಿಸದ ಕಾರಣ, ರಸ್ತೆಯ ಒಂದೇ ಬದಿಯಲ್ಲಿ ವಾಹನಗಳು ಚಲಾಯಿಸಬೇಕಾಗಿದ್ದು, ಬೆಳಿಗ್ಗೆ ಹಾಗೂ ಸಂಜೆ ಈ ರಸ್ತೆಯಲ್ಲಿ ಓಡಾಡುವುದೇ ದುಸ್ತರವಾಗಿದೆ. ಕಿರು ಸೇತುವೆಯ ಬಳಿ ಲಾರಿಗಳು ಸಿಲುಕಿಕೊಂಡರಂತೂ ಅರ್ಧ ದಿನಗಳ ಕಾಲ ಸಂಚಾರ ಸ್ಥಗಿತವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗುಂಡಿ ತಪ್ಪಿಸಲು ಹೋಗುವ ಆಟೊ ಚಾಲಕರು, ಬೈಕ್ ಸವಾರರು ಅಪಘಾತಕ್ಕೆ ಸಿಲುಕಿದ ಘಟನೆಗಳು ನಡೆದಿವೆ. ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಆಟೊ ಚಾಲಕ ಸುರೇಶ್ ಆರೋಪಿಸಿದ್ದಾರೆ.

ಕಿರು ಸೇತುವೆ ನಿರ್ಮಿಸುತ್ತಿರುವ ಪ್ರದೇಶಗಳಲ್ಲಿ ಎರಡು ವಾಹನಗಳು ಸರಾಗವಾಗಿ ಸಂಚರಿಸುವಂತೆ ರಸ್ತೆ ನಿರ್ಮಿಸಬೇಕು. ಹೆಚ್ಚಿನ ಕಾರ್ಮಿಕರನ್ನು ನಿಯೋಜಿಸಿ ಕಾಮಗಾರಿಯನ್ನು ಚುರುಕುಗೊಳಿಸಿ, ಎರಡು ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿ ಕೂಡಲೇ ಪೂರ್ಣಗೊಳಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT