ಶನಿವಾರ, ಏಪ್ರಿಲ್ 1, 2023
29 °C

ಅಜ್ಜಂಪುರ: ಸಾಂಪ್ರದಾಯಿಕ ಕೃಷಿ ಪರಿಕರ ಪರಿಚಯ

ಜೆ.ಒ.ಉಮೇಶ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಅಜ್ಜಂಪುರ: ಆಧುನೀಕರಣ ಮತ್ತು ಜಾಗತೀಕರಣದ ಪ್ರಭಾವಕ್ಕೆ ಸಿಲುಕಿ, ಮರೆಯಾಗುತ್ತಿರುವ ಸಾಂಪ್ರದಾಯಕ ಕೃಷಿ ಕೃಷಿ ಸಾಧನಗಳ ಮಾದರಿ ತಯಾರಿಕೆ, ಸಂಗ್ರಹ ಮತ್ತು ಪ್ರದರ್ಶನದಲ್ಲಿ ಅಜ್ಜಂಪುರ ತಾಲ್ಲೂಕಿನ ಗೊಂಡೇದಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಜಿ.ಆರ್. ಮಂಜಪ್ಪ ಗಮನ ಸೆಳೆದಿದ್ದಾರೆ.

ಪ್ರಸ್ತುತ ಸಾಂಪ್ರದಾಯಿಕ ಕೃಷಿ ಪದ್ಧತಿ ಮಾಯವಾಗುತ್ತಿರುವ ಕಾಲದಲ್ಲಿ, ಮಂಜಪ್ಪ ಅವರು ಹಿಂದಿನ ಕೃಷಿ ಪದ್ದತಿಯಲ್ಲಿ ಬೇಸಾಯಕ್ಕೆ ಬಳಸುತಿದ್ದ ಎತ್ತು, ಸರಕು ಸಾಗಾಣಿಕೆಗೆ ಅವಶ್ಯವಿದ್ದ ಚಕ್ಕಡಿ, ಬಿತ್ತನೆಗೆ ಪೂರಕವಾದ ಕೂರಿಗೆ, ಕಳೆ ತೆಗೆಯಲು ಬಳಸುತ್ತಿದ್ದ ಎಡೆಕುಂಟೆ, ನೇಗಿಲು, ಹಲುವೆ ಸೇರಿದಂತೆ ಹತ್ತಾರು ಮಾದರಿಯನ್ನು ನಿರ್ಮಿಸಿ, ಮಕ್ಕಳಿಗೆ ಪರಿಚಯಿಸುತ್ತಿದ್ದಾರೆ.

ಬಸವಣ್ಣ, ಕನಕದಾಸರು, ಸಂಗೊಳ್ಳಿ ರಾಯಣ್ಣ, ಅಕ್ಕಮಹಾದೇವಿ, ಕಿತ್ತೂರು ರಾಣಿ ಚೆನ್ನಮ್ಮ ಮೊದಲಾದ ಚರಿತ್ರೆಕಾರರ ಛದ್ಮವೇಷ ಹಾಕಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ್ದಾರೆ.

ಜಿಲ್ಲಾ, ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಜಾನಪದ ಸಮ್ಮೇಳನ, ಚಿಕ್ಕಮಗಳೂರು ಜಿಲ್ಲಾ ಹಬ್ಬ, ಶಾಲಾ-ಕಾಲೇಜು ವಾರ್ಷಿಕೋತ್ಸವ, ಪ್ರಾತ್ಯಕ್ಷಿಕೆಗಳಲ್ಲಿ ಕೃಷಿ ಸಾಧನ ಮಾದರಿಗಳನ್ನು ಪ್ರದರ್ಶಿಸಿ, ಜನ ಮೆಚ್ಚುಗೆ ಗಳಿಸಿದ್ದಾರೆ. ಮಂಜಪ್ಪ ಅವರ ಕಾರ್ಯ ಶ್ಲಾಘನೀಯ ಎನ್ನುತ್ತಾರೆ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಅಧ್ಯಕ್ಷ ಸೂರಿಶ್ರೀನಿವಾಸ್.

ರಂಗಭೂಮಿಯಲ್ಲಿಯೂ ತೊಡಗಿಸಿ
ಕೊಂಡಿರುವ ಶಿಕ್ಷಕ ಮಂಜಪ್ಪ, ‘ಸಂಪೂರ್ಣ ರಾಮಾಯಣ, ದಾನಶೂರ ಕರ್ಣ, ಕುರುಕ್ಷೇತ್ರ, ಭಕ್ತ ಪ್ರಹ್ಲಾದ ಸೇರಿದಂತೆ ಹಲವು ಪೌರಾಣಿಕ ನಾಟಕಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕಿರೀಟ, ಕಠಾರಿ, ಗದೆ, ಬಿಲ್ಲು-ಬಾಣ, ಎದೆ ಗವಚ, ಭುಜಕೀರ್ತಿಗಳನ್ನು ಸಿದ್ಧಪಡಿಸುತ್ತಾರೆ. ಮಕ್ಕಳಿಗೆ ನಾಟಕ ಕಲಿಸುತ್ತಾರೆ. ಇದು ಅವರ ಬಹುಮುಖ ಪ್ರತಿಭೆಗೆ ಸಾಕ್ಷಿ ಎನ್ನುತ್ತಾರೆ ಹಿರಿಯ ರಂಗಕರ್ಮಿ ಕೃಷ್ಣಮೂರ್ತಿ.

ಮಕ್ಕಳ ಕೊರತೆಯಿಂದ ಮುಚ್ಚಿದ್ದ ಗೊಂಡೇದಹಳ್ಳಿಯ ಗೊರುಚ ಗ್ರಾಮ ವಿಕಾಸ ಪ್ರತಿಷ್ಠಾನದ ದತ್ತು ಸ್ವೀಕಾರ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ಯನ್ನು 2017ರಲ್ಲಿ ಪ್ರತಿಷ್ಠಾನ ಮತ್ತು ಗ್ರಾಮಸ್ಥರ ಸಹಕಾರದಿಂದ ಪುನರಾರಂಭಿಸಿದ್ದಾರೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಇವರೊಂದಿಗೆ ಶಿಕ್ಷಕ ಚಂದ್ರಶೇಖರ್ ಕೈಜೋಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು