ಶುಕ್ರವಾರ, ನವೆಂಬರ್ 15, 2019
23 °C

ಕಳಸ ತಾಲ್ಲೂಕು ವ್ಯಾಪ್ತಿ ಪ್ರಸ್ತಾವ; ಅನುಮೋದನೆಗೆ ಕಳಿಸಲು ಸೂಚನೆ

Published:
Updated:
Prajavani

ಚಿಕ್ಕಮಗಳೂರು: ‘ಕಳಸ ತಾಲ್ಲೂಕು ವ್ಯಾಪ್ತಿ ರಚನೆಗೆ ಸಂಬಂಧಿಸಿದಂತೆ ಸಿದ್ಧಪಡಿಸಿರುವ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿ, ಅತ್ತಿಕೂಡಿಗೆ ಮತ್ತು ಮಾಗುಂಡಿ ಗ್ರಾಮಸ್ಥರ ಅಭಿಪ್ರಾಯ ಪಡೆದುಕೊಳ್ಳುವುದು ಒಳಿತು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ತಿಳಿಸಿದರು.

ಕಳಸ ತಾಲ್ಲೂಕು ವ್ಯಾಪ್ತಿ ನಿಗದಿ ಕುರಿತು ಸಭೆಯಲ್ಲಿ ಮಾತನಾಡಿದರು. ಅತ್ತಿಕೂಡಿಗೆ ಮತ್ತು ಮಾಗುಂಡಿ ಸೇರಿಸುವ ನಿಟ್ಟಿನಲ್ಲಿ ಆ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಬೇಕು. ನಂತರ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

‘ಮಾವಿನಕೆರೆ, ಸಂಸೆ, ತೋಟದೂರು, ಹಿಡಕಣಿ, ಮರಸಣಿಗೆ ಈ ಐದು ಗ್ರಾಮ ಲೆಕ್ಕಾಧಿಕಾರಿ ವೃತ್ತಗಳನ್ನು ಕಳಸ ತಾಲ್ಲೂಕು ವ್ಯಾಪ್ತಿಗೆ ಒಳಪಡಿಸಿ ಪ್ರಸ್ತಾವ ಸಿದ್ಧಪಡಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

‘13 ಕಂದಾಯ ಗ್ರಾಮಗಳು, 382 ಹ್ಯಾಮ್ಲೆಟ್‌ಗಳು ಒಳಪಡುತ್ತವೆ. ತಾಲ್ಲೂಕಿನ ಜನಸಂಖ್ಯೆ 31 ಸಾವಿರ ಆಗುತ್ತದೆ. ಕಳಸ ತಾಲ್ಲೂಕು ವ್ಯಾಪ್ತಿಗೆ ಸೇರಿಸಬಾರದು ಎಂದು ಜಾವಳಿ, ಬಾಳೂರು, ನಿಡುವಾಳೆ, ಸುಂಕಸಾಲೆಯವರು ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯ ಮಾಡಿ, ಪ್ರತಿ ಸಲ್ಲಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

‘2012–13ನೇ ಸಾಲಿನಲ್ಲಿ ಕಳಸ ತಾಲ್ಲೂಕು ಹೋರಾಟ ಸಮಿತಿ ಮನವಿಗಳ ಕೂಲಂಕಷವಾಗಿ ಪರಿಶೀಲಿಸಿ ಕ್ರಮ ವಹಿಸಲಾಗಿದೆ. ಗ್ರಾಮಸ್ಥರು, ಮುಖಂಡರು, ಜನಪ್ರತಿನಿಧಿಗಳೊಂದಿಗೆ ಸ್ಥಳೀಯವಾಗಿ ಚರ್ಚಿಸಲಾಗಿದೆ’ ಎಂದು ತಿಳಿಸಿದರು.

‘ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಿ ಕೈಗೊಂಡಿರುವ ನಿರ್ಣಯದಂತೆ ಪ್ರಸ್ತಾವ ಸಲ್ಲಿಸೋಣ. ಒಂದು ಸರ್ಕಾರದಿಂದ ಮರುಪರಿಶೀಲನೆಗೆ ಆದೇಶ ಬಂದರೆ ಆಗ ಮತ್ತೆ ಚರ್ಚಿಸೋಣ’ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಸಲಹೆ ನೀಡಿದರು.

ವಿಧಾನ ಪರಿಷತ್ತಿನ ಸದಸ್ಯ ಎಂ.ಕೆ.ಪ್ರಾಣೇಶ್‌, ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಭಾಕರ್‌ ಸಲಹೆಗಳನ್ನು ನೀಡಿದರು. ಜಿಲ್ಲಾಧಿಕಾರಿ, ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಣಕಲ್ ಶಾಮಣ್ಣ, ಅಮಿತಾ ಮುತ್ತಪ್ಪ, ಮೂಡಿಗೆರೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರತನ್ ಇದ್ದರು.

ಪ್ರತಿಕ್ರಿಯಿಸಿ (+)