ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಸಂಚಾರ ಸ್ಥಗಿತ: ಪ್ರಯಾಣಿಕರ ಪರದಾಟ

ಕೆಎಸ್‌ಆರ್‌ಟಿಸಿ ಸಿಬ್ಬಂದಿಯ ಮುಷ್ಕರ; ಸರ್ಕಾರಿ ನೌಕರರಾಗಿ ಪರಿಗಣನೆಗೆ ಒತ್ತಾಯ
Last Updated 11 ಡಿಸೆಂಬರ್ 2020, 14:50 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ರಾಜ್ಯ ರಸ್ತೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸಬೇಕು ಎಂಬುದು ಸಹಿತ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಕೆಎಸ್ಆರ್‌ಟಿಸಿ ನೌಕರರು ಶುಕ್ರವಾರ ಕರ್ತವ್ಯ ಬಹಿಷ್ಕರಿಸಿ ನಗರದಲ್ಲಿ ಮುಷ್ಕರ ನಡೆಸಿದರು.

ನಗರದ ಕೆಎಸ್‌ಆರ್‌ಟಿಸಿ ನಿಲ್ದಾಣ ದಲ್ಲಿ ಜಮಾಯಿಸಿದ ಕೆಎಸ್‌ಆರ್‌ಟಿಸಿ ಬಸ್‌ ಚಾಲಕರು, ನಿರ್ವಾಹಕರು, ಸಿಬ್ಬಂದಿ, ನ್ಯಾಯ ಒದಗಿಸಬೇಕು ಎಂದು ಘೋಷಣೆ ಕೂಗಿದರು.

ವೇತನ ತಾರತಮ್ಯ ನಿವಾರಿಸಬೇಕು, ವೈದ್ಯಕೀಯ ಚಿಕಿತ್ಸೆ ವೆಚ್ಚ ಆನ್ಲೈನ್‌ (ಕ್ಯಾಶ್‌ಲೆಸ್‌ ವಿಧಾನ) ಪಾವತಿ ಸೌಕರ್ಯ ಸಹಿತ ಸರ್ಕಾರಿ ನೌಕರರಿಗೆ ದೊರೆಯುವ ವಿವಿಧ ಸವಲತ್ತುಗಳನ್ನು ಕೆಎಸ್‌ಆರ್‌ಟಿಸಿ ನೌಕರರಿಗೂ ಒದಗಿಸಬೇಕು ಎಂದು ಮನವಿ ಮಾಡಿದರು.

‘ಸರ್ಕಾರಿ ನೌಕರರು ದಿನಕ್ಕೆ ಎಂಟು ಗಂಟೆ ಕೆಲಸ ಮಾಡುತ್ತಾರೆ. ಆದರೆ ಕೆಎಸ್‌ಆರ್‌ಟಿಸಿ ನೌಕರರು 12 ಗಂಟೆಗೂ ಹೆಚ್ಚು ಕೆಲಸ ಮಾಡುತ್ತಾರೆ. ಸರ್ಕಾರಿ ನೌಕರರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ನಗದು ಪಾವತಿ ರಹಿತ ಚಿಕಿತ್ಸೆ ಪಡೆಯುವ ಸೌಲಭ್ಯ ಇದೆ. ಆದರೆ ಕೆಎಸ್‌ಆರ್‌ಟಿಸಿ ನೌಕರರಿಗೆ ಈ ಸೌಲಭ್ಯ ಇಲ್ಲ. ನೌಕರನ ಚಿಕಿತ್ಸೆಗೆ ₹50 ಸಾವಿರ ವೆಚ್ಚವಾಗಿದ್ದರೆ, ನಿಗಮದಿಂದ ಗರಿಷ್ಠ ₹ 2 ಸಾವಿರದವರೆಗೆ ಮರುಪಾವತಿ ಮಾಡುತ್ತಾರೆ’ ಎಂದು ಮುಷ್ಕರ ನಿರತರು ದೂರಿದರು.

‘ವೇತನ ತಾರತಮ್ಯ ಸರಿಪಡಿಸ ಬೇಕು. ಸೇವಾ ಹಿರಿತನದ ಆಧಾರದಲ್ಲಿ ವೇತನ ಹೆಚ್ಚಿಸಬೇಕು’ ಎಂದರು.

‘ಸರ್ಕಾರಿ ನೌಕರರು ಹಾಗೂ ಕೆಎಸ್‌ಆರ್‌ಟಿಸಿ ನೌಕರರ ವೇತನಕ್ಕೂ ಶೇ 56 ವ್ಯತ್ಯಾಸ ಇದೆ. ಕೆಎಸ್‌ಆರ್‌ಟಿಸಿ ನೌಕರರ ಸಮಸ್ಯೆ ಪರಿಹರಿಸುವವರೆಗೆ ಮುಷ್ಕರ ನಡೆಸಲಾಗುವುದು’ ಎಂದು ಕೆಎಸ್‌ಆರ್‌ಟಿಸಿ ನೌಕರರ ಒಕ್ಕೂಟ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಪ್ರಸನ್ನ ಹೇಳಿದರು.

ಕಾರ್ಮಿಕ ಮುಖಂಡರಾದ ರಾಧಾ ಸುಂದರೇಶ್‌, ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್‌ ಅವರು ನೌಕರರ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದರು. ಕೆಎಸ್‌ಆರ್‌ಟಿಸಿ ಸಿಬ್ಬಂದಿ ಕೊಟ್ರೇಶ್ ಕಡ್ಲಿ, ತನುಜ್, ಉಮೇಶ್, ಕುಮಾರ್ ಇದ್ದರು.

ಪ್ರಯಾಣಿಕರು ಅತಂತ್ರ...

ಬೆಳಿಗ್ಗೆಯಿಂದಲೇ ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ಬಸ್‌ ಸಂಚಾರ ಇಲ್ಲದೇ ಪ್ರಯಾಣಿಕರು ಪರದಾಡಿದರು.

ಪ್ರಯಾಣ ಅರ್ಧಕ್ಕೆ ಸ್ಥಗಿತವಾಗಿ ಹಲವು ಪ್ರಯಾಣಿಕರು ಬಸ್‌ನಲ್ಲೇ ಅತಂತ್ರರಾಗಿ ಕುಳಿತಿದ್ದರು.

ಪ್ರಯಾಣಿಕರು ಸಂಚಾರ ಆರಂಭವಾಗಬಹುದು ಎಂದು ನಿಲ್ದಾಣದಲ್ಲೇ ಕಾಯುತ್ತಾ ಕುಳಿತಿದ್ದು ಕಂಡುಬಂತು.

‘ಚಿಕ್ಕಮಗಳೂರಿನ ಕೋಳಿ ಫಾರಂ ಒಂದರಲ್ಲಿ ಕೆಲಸ ಮಾಡುತ್ತೇವೆ. ಬೆಂಗಳೂರಿಗೆ ತೆರಳಿ, ಅಲ್ಲಿಂದ ಒಡಿಶಾಕ್ಕೆ ಪ್ರಯಾಣ ಬೆಳೆಸಬೇಕು. ಬೆಳಿಗ್ಗೆಯಿಂದ ಕಾಯುತ್ತಿದ್ದೇವೆ ಬಸ್ ಸಂಚಾರ ಆರಂಭವಾಗಿಲ್ಲ’ ಎಂದು ರೂಪಕಾಂತಿ ಅಳಲು ತೋಡಿಕೊಂಡರು.

‘ಬೆಳಿಗ್ಗೆ 6 ಗಂಟೆಗೆ ಧರ್ಮಸ್ಥಳದಿಂದ ಬಸ್‌ ಹತ್ತಿದ್ದೆವು. ಧಾರವಾಡಕ್ಕೆ ತೆರಳಬೇಕು. ಮುಷ್ಕರ ಇದೆಯೆಂದು ಚಿಕ್ಕಮಗಳೂರಿನಲ್ಲಿ ಬಸ್ ನಿಲುಗಡೆ ಮಾಡಿದ್ದಾರೆ. ಹೀಗಾದರೆ ಪ್ರಯಾಣಿಕರ ಪಾಡೇನು? ನೌಕರರು ಮುಷ್ಕರ ಮಾಡುವುದಾರೆ ಮುಂಚೆಯೇ ಮಾಧ್ಯಮಗಳಲ್ಲಿ ಪ್ರಚಾರ ನೀಡಬೇಕು. ಸರ್ಕಾರವು ಮಾರ್ಗ ಮಧ್ಯೆ ಸಿಲುಕಿರುವ ಪ್ರಯಾಣಿಕರಿಗೆ ಪರ್ಯಾಯ ಸಂಚಾರ ವ್ಯವಸ್ಥೆ ಮಾಡಬೇಕು’ ಎಂದು ಪ್ರಯಾಣಿಕ ಮಂಜುನಾಥ್ ಒತ್ತಾಯಿಸಿದರು.

ನಿಲ್ದಾಣ, ಡಿಪೊದಲ್ಲಿ ಬಸ್‌ಗಳು ನಿಂತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT