ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಬೇಸಿಗೆಯಲ್ಲಿ ತಂಪು ಅನುಭವ

ಕುದುರೆಮುಖ ರಾಷ್ಟ್ರೀಯ ಉದ್ಯಾನದ ಪರಿಸರ; ಮುಗಿಲಿಗೆ ಮುಖಮಾಡಿರುವ ಮರಗಳು
Last Updated 4 ಏಪ್ರಿಲ್ 2021, 3:34 IST
ಅಕ್ಷರ ಗಾತ್ರ

ಕಳಸ: ಕುದುರೆಮುಖ ರಾಷ್ಟ್ರೀಯ ಉದ್ಯಾನದ ಸೆರಗಿನ ಕಳಸ, ಸಂಸೆ ಗ್ರಾಮಗಳಲ್ಲಿ ಬೇಸಿಗೆ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇದ್ದರೆ ಉದ್ಯಾನದ ಒಳಗಿನ ತಾಪಮಾನ ಇದಕ್ಕಿಂತ 4-5 ಡಿಗ್ರಿ ಕಡಿಮೆ.

ರಾಷ್ಟ್ರೀಯ ಉದ್ಯಾನದ ಚೆಕ್‌ಪೋಸ್ಟ್ ದಾಟಿ ಕುದುರೆಮುಖದಿಂದ ಎಸ್.ಕೆ.ಬಾರ್ಡರ್ ಕಡೆಗೆ ಪ್ರಯಾಣಿಸುವಾಗ ಪ್ರಕೃತಿಯ ವಿಶಿಷ್ಟ ಕೊಡುಗೆಗಳ ದರ್ಶನ ಆಗುತ್ತದೆ. ಉದ್ಯಾನದ ಹೃದಯಭಾಗ ಸೀಳಿಕೊಂಡು ಹೋಗುವ ಹೆದ್ದಾರಿಯ ಎರಡೂ ಬದಿ ಹುಲ್ಲುಗಾವಲು, ಜಲಪಾತ, ಶೋಲಾ ಅರಣ್ಯ, ನಿತ್ಯಹರಿದ್ವರ್ಣ ಕಾಡು ಈ ಬೇಸಿಗೆಯಲ್ಲೂ ಜೀವಂತಿಕೆಯ ಲಕ್ಷಣಗಳನ್ನು ತೋರ್ಪಡಿಸುತ್ತವೆ. ಜಲಪಾತದಲ್ಲಿ ಈಗಲೂ ನೀರು ಇದೆ. ಹಸಿರಿಗೆ ಏನೂ ಕೊರತೆ ಇಲ್ಲದಂತೆ ಉದ್ಯಾನದ ದೃಶ್ಯಗಳು ಕಣ್ಣಿಗೆ ಮುದ ನೀಡುತ್ತವೆ. ಬೇಸಿಗೆಯ ಕಾವು ಮರೆಸುತ್ತವೆ.

ಈ ವರ್ಷದ ಜನವರಿ, ಫೆಬ್ರುವರಿ ಮತ್ತು ಮಾರ್ಚ್ ಮಳೆಯಿಂದಾಗಿ ಉದ್ಯಾನದ ಹುಲ್ಲುಗಾವಲು ಈ ಬಾರಿ ಅಷ್ಟಾಗಿ ಒಣಗಿಲ್ಲ. ಹಳ್ಳಗಳಲ್ಲಿನ ನೀರು ಕೂಡ ಬತ್ತಿಲ್ಲ ಎಂಬುದು ವಿಶೇಷ. ಕೆಲ ವರ್ಷಗಳ ಹಿಂದೆ ಈ ಕಾಡಿಗೆ ಅಲ್ಲಲ್ಲಿ ಬೆಂಕಿ ತಗುಲಿತ್ತು. ಈ ಬಾರಿ ಅಂತಹ ಯಾವುದೇ ಘಟನೆಯೂ ಇಲ್ಲ. ಆದರೆ ಒಂದೇ ಜಾತಿಯ ಅನೇಕ ಮರಗಳು ಉದ್ಯಾನದಲ್ಲಿ ಅಲ್ಲಲ್ಲಿ ಅಂತ್ಯ ಕಾಣುತ್ತಿರುವುದು ಗಮನಾರ್ಹ.

ಮಳೆಗಾಲದಲ್ಲಿ ಧುಮ್ಮಿಕ್ಕುವ ಕಡಾಂಬಿ ಜಲಪಾತದಲ್ಲಿ ಈ ಬೇಸಿಗೆಯಲ್ಲಿ ಅಷ್ಟಿಷ್ಟು ನೀರು ಇದೆ. ಚಳಿಗಾಲದಲ್ಲಿ ಎಲೆ ಉದುರಿಸಿ ಹೊಸ ಚಿಗುರಿನೊಂದಿಗೆ ನಳನಳಿಸುವ ನಿತ್ಯ ಹರಿದ್ವರ್ಣ ಕಾಡಿನ ಮರಗಳು ಸಂಜೆಯ ಬೆಳಕಿಗೆ ಪಳಪಳನೆ ಹೊಳೆಯುತ್ತವೆ. ಈ ಹೆದ್ದಾರಿ ಬಳಸಿ ಸಾಗುವ ಪ್ರವಾಸಿಗರಿಗೆ ಇದು ಬೇಸಿಗೆ ಎಂಬುದನ್ನೇ ಮರೆಸುತ್ತದೆ.

ಸೂರ್ಯನಿಗೆ ಸವಾಲೊಡ್ಡುವ ಮರಗಳು

ಒಂದು ಚದರ ಮೀಟರ್‌ನಲ್ಲಿ ವಿವಿಧ ವಯೋಮಾನದ ಕನಿಷ್ಠ 5-6 ಮರಗಳು ಇರುವ ಕಗ್ಗಾಡಿನ ಒಳಗೆ ಬಿಸಿಲೇ ಬೀಳದಿರುವುದರಿಂದ ರಾಷ್ಟ್ರೀಯ ಉದ್ಯಾನದಲ್ಲಿ ಯಾವಾಗಲೂ ತಂಪು. ಮಧ್ಯಾಹ್ನದ ನಂತರ ಕವಿಯುವ ದಟ್ಟ ಕಾರ್ಮೋಡ, ಮಳೆ ಸೂಚನೆ ನೀಡುತ್ತಲೇ ಇರುತ್ತದೆ.

ರಾಷ್ಟ್ರೀಯ ಉದ್ಯಾನದ ಹೆದ್ದಾರಿ ಮೂಲಕ ಸಾಗುವ ಪ್ರವಾಸಿಗರಿಗೆ ಈ ಪಯಣ ಆಹ್ಲಾದ ನೀಡುವುದು ಖಚಿತ. ಆದರೆ ಈ ಕಾಡನ್ನೇ ಸುತ್ತಬೇಕು ಎಂದು ಬರುವವರಿಗೆ ಉದ್ಯಾನದೊಳಗೆ ಪ್ರವೇಶವಿಲ್ಲ ಎಂಬುದನ್ನೂ ಗಮನಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT