ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು: ಸೌಕರ್ಯಗಳೇ ಇಲ್ಲದ ಬಸ್‌ ನಿಲ್ದಾಣ

ಸಿಬ್ಬಂದಿ ಕೊರತೆ: ಶೃಂಗೇರಿ, ಎನ್‌.ಆರ್.ಪುರ, ಕೊಪ್ಪ, ತರೀಕೆರೆ ಭಾಗದಲ್ಲಿ ಡಿಪೊಗಳಿಲ್ಲ
Published : 23 ಸೆಪ್ಟೆಂಬರ್ 2024, 7:03 IST
Last Updated : 23 ಸೆಪ್ಟೆಂಬರ್ 2024, 7:03 IST
ಫಾಲೋ ಮಾಡಿ
Comments

ಚಿಕ್ಕಮಗಳೂರು: ಶಕ್ತಿ ಯೋಜನೆ ಜಾರಿಯಾದ ಬಳಿಕ ಕೆಎಸ್‌ಆರ್‌ಟಿಸಿ ಬಸ್‌ಗಳ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ಬೇಡಿಕೆಗೆ ತಕ್ಕಷ್ಟು ಬಸ್‌ಗಳ ಕಾರ್ಯಾಚರಣೆಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಣುಕಾಡುತ್ತಿದ್ದಾರೆ. ಈ ನಡುವೆ ಒಂದೆಡೆ ಸಿಬ್ಬಂದಿ ಕೊರತೆ ಮತ್ತೊಂದೆಡೆ ಮಲೆನಾಡಿನಲ್ಲಿ ಡಿಪೊಗಳೇ ಇಲ್ಲವಾಗಿದೆ.

ಚಿಕ್ಕಮಗಳೂರು ವಿಭಾಗದಲ್ಲಿ ಆರು ಡಿಪೊಗಳಿದ್ದು, ಮೂರು ಡಿಪೊಗಳು ಹಾಸನ ಜಿಲ್ಲೆಯ ವ್ಯಾಪ್ತಿಯಲ್ಲಿವೆ(ಅರಸೀಕೆರೆ, ಬೇಲೂರು, ಸಕಲೇಶಪುರ). ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಡೂರು, ಚಿಕ್ಕಮಗಳೂರು ಮತ್ತು ಮೂಡಿಗೆರೆಯಲ್ಲಿ ಡಿಪೊಗಳಿವೆ. ಶೃಂಗೇರಿ, ಎನ್‌.ಆರ್.ಪುರ, ಕೊಪ್ಪ, ತರೀಕೆರೆ ಭಾಗದಲ್ಲಿ ಡಿಪೊಗಳೇ ಇಲ್ಲ.

ಚಿಕ್ಕಮಗಳೂರು ಡಿಪೊನಿಂದ ಈ ತಾಲ್ಲೂಕು ಕೇಂದ್ರಗಳು ಕನಿಷ್ಠ 90ರಿಂದ 100 ಕಿಲೋ ಮೀಟರ್ ದೂರದಲ್ಲಿವೆ. ಇಲ್ಲಿಂದ ಬಸ್‌ಗಳನ್ನು ಕಳುಹಿಸಿ ಮಲೆನಾಡು ಭಾಗದ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡುವುದು ದುಬಾರಿ. ಆದ್ದರಿಂದ ಕೊಪ್ಪ, ಎನ್‌.ಆರ್.ಪುರ, ಶೃಂಗೇರಿ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಕಾರ್ಯಾಚರಣೆ ಬೆರಳೆಣಿಕೆಯಷ್ಟಿವೆ.

ಇನ್ನು ಜಿಲ್ಲಾ ಕೇಂದ್ರದಲ್ಲಿರುವ ಬಸ್ ನಿಲ್ದಾಣ ಮೂಲ ಸೌಕರ್ಯಗಳಿಂದ ಬಳಲುತ್ತಿದೆ. ಗ್ರಾಮೀಣ ಬಸ್ ನಿಲ್ದಾಣವಂತೂ ಮಳೆಗಾಲದಲ್ಲಿ ಕೆಸರುಗದ್ದೆ, ಬೇಸಿಗೆಯಲ್ಲಿ ಧೂಳಿನ ಕಣಜವಾಗಿದೆ.

ಮಳೆ ಬಂದರೆ ನಿಲ್ಲಲು ಜಾಗವಲ್ಲದ ಸ್ಥಿತಿ ಇದೆ. ನಿರಂತರವಾಗಿ ಸುರಿವ ಮಳೆಯ ನಡುವೆ ಬಸ್ ಹತ್ತುವುದೇ ಸಾಹಸದ ಕೆಲಸ. ನಗರದ ಶಾಲಾ ಕಾಲೇಜುಗಳಿಗೆ ಬರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಬಸ್ ನಿಲ್ದಾಣದಲ್ಲೇ ನಿಲ್ಲುತ್ತಾರೆ.

ಎರಡೂ ಬಸ್ ನಿಲ್ದಾಣಗಳನ್ನು ಕೂಡಿಸಿ ಒಂದೇ ಹೈಟೆಕ್ ನಿಲ್ದಾಣ ನಿರ್ಮಿಸುವ ಯೋಜನೆಯನ್ನು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಡಿದ್ದಾರೆ. ಆದರೆ, ಸರ್ಕಾರದಿಂದ ಇನ್ನೂ ಅನುಮೋದನೆ ದೊರೆತಿಲ್ಲ.

ಎರಡೂ ಬಸ್ ನಿಲ್ದಾಣದ ಮಧ್ಯದಲ್ಲಿರುವ ರಸ್ತೆ ಮುಚ್ಚಿ, ಹಿಂದಿರುವ ಕುವೆಂಪು ಕಲಾಮಂದಿರ, ಆದ್ರಿಕಾ ಹೋಟೆಲ್, ಮಿಲನ ಚಿತ್ರಮಂದಿರಕ್ಕೆ ಹೋಗಲು ಒಂದು ಬದಿಯಲ್ಲಿ ರಸ್ತೆ ಬಿಟ್ಟುಕೊಡುವ ಬಗ್ಗೆಯೂ ಅಧಿಕಾರಿಗಳು ಆಲೋಚನೆ ನಡೆಸಿದ್ದಾರೆ. ಎರಡು ನಿಲ್ದಾಣಗಳ ಮಧ್ಯ ಇರುವ ರಸ್ತೆ ಮುಚ್ಚಲು ಹಿಂಬದಿಯ ಕಟ್ಟಡಗಳ ಮಾಲೀಕರೊಂದಿಗೆ ಚರ್ಚೆ ನಡೆಯುತ್ತಿದೆ. ಅವರು ಒಪ್ಪಿಕೊಂಡರೆ ವಿಶಾಲವಾದ ಬಸ್ ನಿಲ್ದಾಣ ನಿರ್ಮಾಣವಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಸರ್ಕಾರದಿಂದ ಅನುಮೋದನೆ ದೊರೆತು ಹೊಸ ನಿಲ್ದಾಣ ನಿರ್ಮಾಣಕ್ಕೆ ಇನ್ನೂ ಅನೇಕ ವರ್ಷಗಳು ಬೇಕಾಗಲಿವೆ. ಗ್ರಾಮೀಣ ಬಸ್ ನಿಲ್ದಾಣಕ್ಕೆ ಕನಿಷ್ಠ ಮೂಲಸೌಕರ್ಯ ಒದಗಿಸಬೇಕು ಎಂಬುದು ಪ್ರಯಾಣಿಕರ ಒತ್ತಾಯ. 

ಕೊಪ್ಪ ಬಸ್ ನಿಲ್ದಾಣ
ಕೊಪ್ಪ ಬಸ್ ನಿಲ್ದಾಣ
ತಾಲ್ಲೂಕು ಕೇಂದ್ರವಾಗಿರುವ ಕಳಸದಲ್ಲಿ ಬಸ್ ನಿಲ್ದಾಣದ ಜಾಗ ಅಡುಗೆ ಅನಿಲದ ವಿತರಣೆ ಕೇಂದ್ರವಾಗಿರುವುದು
ತಾಲ್ಲೂಕು ಕೇಂದ್ರವಾಗಿರುವ ಕಳಸದಲ್ಲಿ ಬಸ್ ನಿಲ್ದಾಣದ ಜಾಗ ಅಡುಗೆ ಅನಿಲದ ವಿತರಣೆ ಕೇಂದ್ರವಾಗಿರುವುದು
ನರಸಿಂಹರಾಜಪುರ ಬಸ್ ನಿಲ್ದಾಣ
ನರಸಿಂಹರಾಜಪುರ ಬಸ್ ನಿಲ್ದಾಣ
ತರೀಕೆರೆ ಬಸ್ ನಿಲ್ದಾಣ
ತರೀಕೆರೆ ಬಸ್ ನಿಲ್ದಾಣ
ಶೃಂಗೇರಿ ಬಸ್ ನಿಲ್ದಾಣದ ಕಟ್ಟಡದಲ್ಲಿ ಗಿಡಗಳು ಬೆಳೆದಿರುವುದು
ಶೃಂಗೇರಿ ಬಸ್ ನಿಲ್ದಾಣದ ಕಟ್ಟಡದಲ್ಲಿ ಗಿಡಗಳು ಬೆಳೆದಿರುವುದು

ಕುಡಿಯಲು ನೀರಿಲ್ಲ ಸ್ವಚ್ಛತೆ ಇಲ್ಲ

ತರೀಕೆರೆ: ತರೀಕೆರೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರತಿನಿತ್ಯ ಸುಮಾರು 500ಕ್ಕೂ ಹೆಚ್ಚು ಬಸ್ಸುಗಳು ಸಂಚರಿಸುತ್ತಿವೆ. ಈ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಸ್ವಚ್ಛತೆಯಂತೂ ಮರೀಚಿಕೆ.ಪ್ರಯಾಣಿಕರು ತಮ್ಮ ದ್ವಿಚಕ್ರ ವಾಹನ ನಿಲ್ಲಿಸಲು ಸರಿಯಾದ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ರಾತ್ರಿ ವೇಳೆ ಕಾರ್ಯನಿರ್ವಹಿಸಲು ಸಿಬ್ಬಂದಿ ಇಲ್ಲದೆ ಬಸ್ ನಿಲ್ದಾಣದ ಒಳಗೆ ಬಸ್ಸುಗಳು ಬರುತ್ತಿಲ್ಲ. ಇದರಿಂದ ಪ್ರಯಾಣಿಕರಿಗೆ ರಕ್ಷಣೆ ಇಲ್ಲದಂತಾಗಿದೆ. ಸಿಬ್ಬಂದಿಯನ್ನು ನಿಯೋಜಿಸಿ ರಾತ್ರಿ ಸಮಯದಲ್ಲೂ ಬಸ್ಸುಗಳು ನಿಲ್ದಾಣದ ಒಳಗಡೆ ಬರಬೇಕೆಂದು ಸಾರ್ವಜನಿಕರು ಬಯಸುತ್ತಿದ್ದಾರೆ. ಬಸ್‌ ನಿಲ್ದಾಣದ ಒಳಗೆ ಸಾಗುವಾನಿ ಮರಗಳು ಇದ್ದು ಇವುಗಳಲ್ಲಿ ಹಲವಾರು ಮರಗಳು ಬಹಳ ದಿನಗಳ ಹಿಂದೆ ಬಿದ್ದಿವೆ. ಈ ಬಗ್ಗೆ ನಿಗಮದ ಅಧಿಕಾರಿಗಳು ನಿರ್ಲಕ್ಷತನ ತೋರುತ್ತಿರುವುದು ಕಂಡುಬರುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಈ ಬಸ್ ನಿಲ್ದಾಣದಲ್ಲಿ ಕೆಲವು ಸಂದರ್ಭದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು ಸೂಕ್ತ ಸೆಕ್ಯೂರಿಟಿ ಗಾರ್ಡ್ ಅಥವಾ ರಕ್ಷಣಾ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿ ಸಾರ್ವಜನಿಕರು ಪತ್ರಿಕೆಗೆ ತಿಳಿಸಿದ್ದಾರೆ. 

ಕೂರಲು ಆಸನಗಳೇ ಇಲ್ಲ

ಮೂಡಿಗೆರೆ: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವು ಅವ್ಯವಸ್ಥೆಗಳ ತಾಣವಾಗಿದ್ದು ನಿಲ್ದಾಣದಲ್ಲಿ ಕನಿಷ್ಠ ಅಗತ್ಯಪ್ರಮಾಣದ ಆಸನಗಳ ವ್ಯವಸ್ಥೆಯಿಲ್ಲದೇ ಪ್ರಯಾಣಿಕರು ನಿಂತುಕೊಂಡೇ ಬಸ್ ಕಾಯಬೇಕಾದ ಸ್ಥಿತಿ ಇದೆ. ಒಂಬತ್ತು ವರ್ಷಗಳ ಹಿಂದೆ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಹೊಸ ನಿಲ್ದಾಣವನ್ನು ಸ್ಥಾಪಿಸಿದ್ದು ನಿಲ್ದಾಣದಲ್ಲಿ ಅಗತ್ಯಪ್ರಮಾಣದ ಆಸನಗಳ ವ್ಯವಸ್ಥೆಗಳಿಲ್ಲದೇ ಬಸ್‌ಗಾಗಿ ಕಾಯುವ ವೃದ್ಧರು ಮಹಿಳೆಯರು ನೆಲದ ಮೇಲೆಯೇಕುಳಿತುಕೊಳ್ಳಬೇಕಾಗಿದೆ. ನಿಲ್ದಾಣದಲ್ಲಿ ಖಾಲಿ ಪ್ರದೇಶವಿದ್ದರೂ ಆಸನಗಳ ವ್ಯವಸ್ಥೆ ಕಲ್ಪಿಸದಿರುವುದಕ್ಕೆ ಪ್ರಯಾಣಿಕರು ಹಿಡಿಶಾಪಹಾಕುತ್ತಿದ್ದಾರೆ. ರಾಜ್ಯದ ವಿವಿಧೆಡೆ ಬಸ್‌ಗಳು ಪ್ರತಿ ದಿನ ಈ ಬಸ್ ನಿಲ್ದಾಣಕ್ಕೆ ಬಂದು ಹೋಗುತ್ತಿದ್ದು ಹಲವು ಬಸ್‌ಗಳು ರಾತ್ರಿ ವೇಳೆಇಲ್ಲಿಯೇ ತಂಗುತ್ತವೆ. ಬಸ್ ನಿಲ್ದಾಣದಲ್ಲಿ ತಂಗಿದ ಬಸ್‌ಗಳ ಚಾಲಕರು ಹಾಗೂ ನಿರ್ವಾಹಕರಿಗೆ ಸೂಕ್ತ ವ್ಯವಸ್ಥೆಗಳಿಲ್ಲದ ಕಾರಣನಿಲ್ದಾಣದಲ್ಲಿ ಅಳವಡಿಸಿರುವ ಕುಡಿಯುವ ನೀರಿನ ಮೂಲದಲ್ಲಿಯೇ ಮುಖ ತೊಳೆಯಬೇಕಾಗಿದೆ. ನಿಲ್ದಾಣದಲ್ಲಿ ಸ್ವಚ್ಛತೆಯಂತೂ ಮರೀಚಿಕೆಯಾಗಿದೆ. ಶೌಚಾಲಯದ ತ್ಯಾಜ್ಯ ಸಂಗ್ರಹಣೆ ಅವೈಜ್ಞಾನಿಕವಾಗಿದ್ದು ಪ್ರತಿ ದಿನವೂ ನಿಲ್ದಾಣದವರೆಗೂ ಶೌಚಾಳಯದ ದುರ್ನಾತ ಬೀರುತ್ತದೆ. ನಿಲ್ದಾಣದಿಂದ ಬೆಂಗಳೂರು ಹಾಗೂ ಮಂಗಳೂರಿಗೆ ಬೆಳಿಗ್ಗೆ ಅರ್ಧಗಂಟೆಗೊಂದು ಮಧ್ಯಾಹ್ನದ ಸಮಯದಲ್ಲಿ ಒಂದು ಗಂಟೆಗೆ ಒಂದು ಬಸ್‌ಗಳಿವೆ. ಈ ಭಾಗಗಳಿಗೆ ತೆರಳುವ ಪ್ರಯಾಣಿಕರು ಗಂಟೆಗಟ್ಟಲೇ ನಿಲ್ದಾಣದಲ್ಲಿ ಕಾಯಬೇಕಿದೆ. ನಿಲ್ದಾಣದಲ್ಲಿ ಮಹಿಳಾ ವಿಶ್ರಾಂತಿ ಕೊಠಡಿಯಿದ್ದು ಅಲ್ಲಿಯೂ ವಿದ್ಯಾರ್ಥಿನಿಯರು ಮಹಿಳೆಯರು ಕುಳಿತುಕೊಳ್ಳುವುದರಿಂದ ಅಲ್ಲಿಯೂ ಸರಿಯಾದ ಆಸನ ವ್ಯವಸ್ಥೆಯಿಲ್ಲ. ಹೊರ ಭಾಗದಲ್ಲಿರುವ ಆಸನಗಳಲ್ಲಿ ಮಹಿಳೆಯರು ವಿದ್ಯಾರ್ಥಿನಿಯರು ಕುಳಿತರೆ ಸದಾ ನಿಲ್ದಾಣದಲ್ಲಿಯೇ ಇರುವ ಕೆಲವು ಪುಂಡರು ಹಿಂಬದಿ ಕುಳಿತುಕೊಳ್ಳುವುದು ವಿನಾಕಾರಣ ಮಾತನಾಡಿಸಿ ತೊಂದರೆ ಕೊಡುವುದು ನಡೆಯುತ್ತಿದೆ. ಇಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರಾದ ವೀಣಾ ಹೇಳಿದರು.

ಬಸ್ ನಿಲ್ದಾಣವೇ ಇಲ್ಲ!

ಕಳಸ: ಹೆಸರಿಗೆ ತಾಲ್ಲೂಕು ಕೇಂದ್ರವಾಗಿರುವ ಕಳಸದಲ್ಲಿ ಇಲ್ಲದಿರುವ ಹಲವಾರು ಪ್ರಮುಖ ಸೌಲಭ್ಯಗಳ ಪಟ್ಟಿಯಲ್ಲಿ ಬಸ್ ನಿಲ್ದಾಣದ ಕೊರತೆ ದೊಡ್ಡ ಹೆಸರು ಪಡೆದಿದೆ. 3 ದಶಕದ ಹಿಂದೆ ಆಗಿನ ಚಿತ್ರಮಂದಿರದ ಬಳಿ ಬಸ್ ನಿಲ್ದಾಣ ಆರಂಭಗೊಂಡಿತ್ತು. ಆದರೆ ಆಗಿನಿಂದಲೂ ಊರಿಗೆ ಹೊರಗೆ ಇರುವ ಕಾರಣಕ್ಕೆ ಬಸ್ ನಿಲ್ದಾಣಕ್ಕೆ ಬಸ್‍ಗಳು ಮತ್ತು ಪ್ರಯಾಣಿಕರು ಬರುವುದನ್ನೇ ನಿಲ್ಲಿಸಿದ್ದರು. ಆಗಿನಿಂದ ಬಸ್ ನಿಲ್ದಾಣ ಪಾಳು ಬಿದ್ದಿದೆ. ಸದ್ಯಕ್ಕೆ ಅಲ್ಲಿ ಅಡುಗೆ ಅನಿಲದ ವಿತರಣೆ ನಡೆಯುತ್ತಿದೆ. ಕಳಸ ಪಟ್ಟಣದ ನಡುವೆ 4-5 ಕಡೆ ಬಸ್‍ಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಲ್ಲುತ್ತವೆ. ಇದರಿಂದ ಆ ಅವಧಿಯಲ್ಲಿ ಸುಗಮ ಸಂಚಾರಕ್ಕೆ ಸಂಚಕಾರ ಆಗುತ್ತಿದೆ. ಇದನ್ನು ಗಮನಿಸಿಯೂ ಪಟ್ಟಣದಲ್ಲಿ ಸೂಕ್ತ ಸ್ಥಳದಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಯಾವ ಪ್ರಯತ್ನವೂ ನಡೆದಿಲ್ಲ. ತಾಲ್ಲೂಕಿನಲ್ಲಿ ಶೇ 90 ಖಾಸಗಿ ಬಸ್‍ಗಳು ಇರುವುದರಿಂದ ಖಾಸಗಿ ಬಸ್ ನಿಲ್ದಾಣದ ಅಗತ್ಯ ಇದೆ. ಮಂಜಿನಕಟ್ಟೆ ಬಳಿ ಇರುವ ಹಲವಾರು ಸರ್ಕಾರಿ ಕಟ್ಟಡ ತೆರವು ಮಾಡಿ ಬಸ್ ನಿಲ್ದಾಣ ನಿರ್ಮಾಣ ಮಾಡಿದರೆ ಎಲ್ಲರಿಗೂ ಅನುಕೂಲ ಎಂಬ ಅಭಿಪ್ರಾಯ ಇದೆ.

ನಿಲ್ದಾಣ: ಕೊರತೆಗಳ ತಾಣ

ಕಡೂರು: ಪಟ್ಟಣದ ಸರ್ಕಾರಿ ಬಸ್ ನಿಲ್ದಾಣ ಮೇಲ್ನೋಟಕ್ಕೆ ಎಲ್ಲ ಸರಿಯಿದೆ ಎನಿಸಿದರೂ ಒಂದಿಷ್ಟು ಕೊರತೆಗಳು ಉಳಿದುಕೊಂಡಿವೆ. ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಬಸ್ ನಿಲ್ದಾಣದ ಮುಂಭಾಗ ಪಾರ್ಕಿಂಗ್ ವ್ಯವಸ್ಥೆಯಿದ್ದು ಅದರ ನಿರ್ವಹಣೆ ವ್ಯವಸ್ಥಿತವಾಗಿಲ್ಲ. ಚಿಕ್ಕಮಗಳೂರು ಮುಂತಾದೆಡೆ ಪ್ರತಿದಿನ ಪ್ರಯಾಣಿಸುವವರು ತಮ್ಮ ವಾಹನಗಳನ್ನು ಅಡ್ಡಾ ದಿಡ್ಡಿ‌ ನಿಲ್ಲಿಸಿ ಹೋಗುತ್ತಾರೆ. ಅವರಿಗೆ ವ್ಯವಸ್ಥಿತವಾಗಿ ಹಣ ಪಡೆಯುವ ರಸೀತಿ ನೀಡುವ ಕಾರ್ಯವಾಗುತ್ತಿಲ್ಲ. ಬಹು ಮುಖ್ಯವಾಗಿ ಬಸ್ ನಿಲ್ದಾಣದೊಳಗಿರುವ ಉಪಹಾರ ಗೃಹದ ತ್ಯಾಜ್ಯದ ನೀರು ಪಾರ್ಕಿಂಗ್ ಜಾಗದಲ್ಲಿ ಹೊರಭಾಗದಲ್ಲಿ ಯಾವಾಗಲೂ ಹರಿಯುತ್ತಿರುತ್ತದೆ. ಸಾರ್ವಜನಿಕರು ಅದನ್ನು ತುಳಿದುಕೊಂಡೇ ಓಡಾಡುವ ಪರಿಸ್ಥಿತಿಯಿದೆ. ಇದನ್ನು ತಪ್ಪಿಸಬೇಕಾದ ಅಗತ್ಯವಿದೆ. ಶೌಚಾಲಯದ ವ್ಯವಸ್ಥೆ ತೃಪ್ತಿಕರವಾಗಿದೆ. ಈಗಿರುವ ಬಸ್ ನಿಲ್ದಾಣ ಚಿಕ್ಕದಾಗಿರುವುದರಿಂದ ಮತ್ತು ಕಟ್ಟಡಗಳೂ ಹಳೆಯದಾಗಿರುವುದರಿಂದ ಹೊಸ ಬಸ್ ನಿಲ್ದಾಣ ನಿರ್ಮಾಣಕ್ಕೆ ಶಾಸಕ ಕೆ.ಎಸ್.ಆನಂದ್ ಆಸಕ್ತಿ ವಹಿಸಿದೆ. ಈಗಾಗಲೇ ₹12 ಕೋಟಿ ವೆಚ್ಚದ ಅಂದಾಜು ಪಟ್ಟಿ ಸಲ್ಲಿಕೆಯಾಗಿ ಮಂಜೂರಾತಿ ದೊರೆತಿದೆ. ಶೀಘ್ರದಲ್ಲೆ ನೂತನ ಬಸ್ ನಿಲ್ದಾಣದ ಕಾಮಗಾರಿ ಆರಂಭವಾಗಲಿದೆ. ಮೊದಲ ಹಂತದಲ್ಲಿ ₹6 ಕೋಟಿ ಬಿಡುಗಡೆಯಾಗಿ ಟೆಂಡರ್ ಹಂತದಲ್ಲಿದೆ. ಹಳೆಯ ಕಟ್ಟಡಗಳನ್ನು ಕೆಡವಿ ಸುಸಜ್ಜಿತವಾದ ಮತ್ತು ಅಗತ್ಯ ಮೂಲ ಸೌಕರ್ಯವನ್ನೊಳಗೊಂಡ ನಿಲ್ದಾಣ ನಿರ್ಮಾಣಗೊಳ್ಳಲಿದೆ.

ನ್ಯೂನತೆಗಳ ಆವರಣ

ಕೊಪ್ಪ: ಪಟ್ಟಣದಲ್ಲಿ 2000ನೇ ಇಸವಿಗೆ ನಿರ್ಮಾಣಗೊಂಡ ಸುಸಜ್ಜಿತ ಬಸ್ ನಿಲ್ದಾಣ ಇದೀಗ ಹಲವು ನ್ಯೂನ್ಯತೆಗಳಿಂದ ಕೂಡಿದ್ದು ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಬಸ್ ನಿಲ್ದಾಣದಲ್ಲಿ ಕುಡಿಯಲು ನೀರಿನ ವ್ಯವಸ್ಥೆ ಇಲ್ಲ. ಬೋರ್ಡ್‌ಗಳಲ್ಲಿನ ಬರಹ ಅಳಿಸಿ ಹೋಗುತ್ತಿವೆ. ಕೆಲವು ಊರುಗಳ ಹೆಸರೇ ಕಣ್ಮರೆಯಾಗಿವೆ. ನೆಲಕ್ಕೆ ಹಾಸಿರುವ ಟೈಲ್ಸ್‌ಗಳು ಕಿತ್ತು ಬಂದಿವೆ. ಚಾವಣಿ ಶೀಟುಗಳು ಹಳೆಯದಾಗಿದ್ದು ಅಲ್ಲಲ್ಲಿ ಸೋರುತ್ತದೆ ಎಂಬ ದೂರಿದೆ. ನಿಲ್ದಾಣದ ಆವರಣದಲ್ಲಿ ಖಾಸಗಿ ವಾಹನಗಳ ನಿಲುಗಡೆ ಹೆಚ್ಚಾಗಿದೆ. ಇದಕ್ಕೆ ಸಾರ್ವಜನಿಕರಿಂದಲೂ ಆಕ್ಷೇಪ ವ್ಯಕ್ತವಾಗಿದೆ. ಸುಸಜ್ಜಿತ ಬಸ್ ನಿಲ್ದಾಣದ ಕಟ್ಟಡವನ್ನು 2012 ರ ಹೊತ್ತಿಗೆ ತೆರವುಗೊಳಿಸಲು ಮುಂದಾಗಿದ್ದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿ ಪ್ರಕರಣ ನ್ಯಾಯಾಲಯದಲ್ಲಿತ್ತು. ಈ ಪ್ರಕರಣ ಇತ್ಯರ್ಥಗೊಂಡು 6 ವರ್ಷಗಳು ಕಳೆದಿವೆ. ಪಟ್ಟಣ ಪಂಚಾಯಿತಿಗೆ ಆದಾಯ ತಂದುಕೊಡಬಹುದಾಗಿದ್ದ ನಿಲ್ದಾಣದ ಕಟ್ಟಡದಲ್ಲಿರುವ 20 ಮಳಿಗೆಗಳ ಬಾಗಿಲು ಮುಚ್ಚಿದ್ದು ಈವರೆಗೂ ಅದನ್ನು ತೆರೆಯುವ ಪ್ರಯತ್ನ ಮಾಡಲಿಲ್ಲ ಎಂಬ ಆರೋಪವಿದೆ.

ಸಮಸ್ಯೆಗಳ ಆಗರ

ನರಸಿಂಹರಾಜಪುರ: ಪಟ್ಟಣದ ಹೃದಯ ಭಾಗದಲ್ಲಿ 1998ರಲ್ಲಿ ಪಟ್ಟಣ ಪಂಚಾಯಿತಿಯಿಂದ ನಿರ್ಮಿಸಿದ ಬಸ್ ನಿಲ್ದಾಣ ಹಲವು ಸಮಸ್ಯೆಗಳ ಆಗರವಾಗಿದೆ. ಪ್ರಮುಖವಾಗಿ ಬಸ್ ನಿಲ್ದಾಣದಲ್ಲಿ ಇರುವ ಕುಡಿಯುವ ನೀರಿನ ಘಟಕ ಅವ್ಯವಸ್ಥಿತವಾಗಿದೆ. ಮೇಲ್ಛಾವಣಿ ಸಾಕಷ್ಟು ಉದ್ಧವಾಗಿಲ್ಲ. ಇದರಿಂದ ಮಳೆಗಾಲದಲ್ಲಿ ನೀರು ಬಸ್ ನಿಲ್ದಾಣದ ಒಳಗೆ ಬರುತ್ತಿದೆ. ಬಸ್‌ಗೆ ಕಾಯುವ ಪ್ರಾಮಾಣಿಕರ ಮೇಲೆ ಹಾರುತ್ತದೆ. ಪಟ್ಟಣದ ಬಸ್ ನಿಲ್ದಾಣವನ್ನು ನವೀಕರಣ ಮಾಡಿ ವ್ಯವಸ್ಥಿತವಾಗಿ ನಿರ್ಮಿಸಲು ನಗರೋತ್ಥಾನ ಯೋಜನೆಯಡಿ ₹75 ಲಕ್ಷ ಅನುದಾನ ಮೀಸಲಿಡಲಾಗಿದೆ ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ತಿಳಿಸಿದರು.

ಅವ್ಯವಸ್ಥೆಯ ಆಗರ

ಶೃಂಗೇರಿ:  ರಾಷ್ಟ್ರಕವಿ ಕುವೆಂಪು ಹೆಸರಿನ ಬಸ್ ನಿಲ್ದಾಣವು ವಿವಿಧ ಸಮಸ್ಯಗಳಿಂದ ಕೂಡಿದ ಅವ್ಯವಸ್ಥೆಗಳ ಆಗರವಾಗಿದೆ. ಬಸ್ ನಿಲ್ದಾಣದ ಪಕ್ಕದಲ್ಲೇ ವಿದ್ಯುತ್ ಪರಿವರ್ತಕ ಅಳವಡಿಸಿರುವುದರಿಂದ ಜನರಿಗೆ ಸುರಕ್ಷತೆ ದೃಷ್ಟಿಯಿಂದ ಅಪಾಯಕಾರಿಯಾಗಿ ಗೋಚರಿಸಿದೆ. ದೂರದ ಪ್ರಯಾಣಿಕರಿಗೆ ಸಮಯ ನೋಡಿಕೊಂಡು ಬಸ್ ಹತ್ತುವ ಸಲುವಾಗಿ ಸರಿಯಾದ ಗಡಿಯಾರವಿಲ್ಲ. ಭಾಗಗಳ ಕಡೆಗೆ ತೆರಳುವ ಬಸ್‌ಗಳ ನಿಲ್ಲುವ ಸ್ಥಳದ ಕುರಿತು ಇರುವ ಸೂಚನಾ ಫಲಕದಲ್ಲಿ ಊರುಗಳ ಹೆಸರುಗಳೇ ಅಳಿಸಿ ಹೋಗಿವೆ. ಪ್ರಯಾಣಿಕರಿಗೆ ಬಸ್ ನಿಲ್ದಾಣದ ಆವರಣದಲ್ಲಿ ಕುಳಿತುಕೊಳ್ಳುವ ಆಸನಗಳು ಮುರಿದು ಹೋಗಿದ್ದು ಅವುಗಳು ಮೂಲೆ ಸೇರಿವೆ. ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಮುಚ್ಚಳವಿಲ್ಲದೇ ಕಸ ಕಡ್ಡಿಗಳು ಬಿದ್ದು ಮಲಿನಗೊಂಡಿವೆ. ಅವುಗಳನ್ನು ಸ್ವಚ್ಛಗೊಳಿಸುವ ಗೊಡವೆಗೆ ಅಧಿಕಾರಿಗಳು ಹೋಗಿಲ್ಲ. ಕುಡಿದ ನೀರಿನ ಬಾಟಲಿಗಳು ಎಲ್ಲೆಂದರಲ್ಲಿ ಬಿದ್ದಿದ್ದು ನಿಗದಿತ ಸ್ಥಳದಲ್ಲಿ ಕಸ ಹಾಕುವ ವ್ಯವಸ್ಥೆಯನ್ನೇ ಕಲ್ಪಿಸಿಲ್ಲ. ಮದ್ಯ ಕುಡಿದು ಕಾಲಿ ಬಾಟಲಿಗಳನ್ನು ಬಸ್ ನಿಲ್ದಾಣದ ಆವರಣದೊಳಗೇ ಎಸೆದಿದ್ದಾರೆ. ಆವರಣದ ಸುತ್ತಲಿನ ಪ್ರದೇಶದಲ್ಲಿ ಕೊಳಚೆ ನೀರು ಹೋಗುವ ತೆರೆದ ಚರಂಡಿ ಇದ್ದು ಇದರಿಂದ ಗಬ್ಬು ವಾಸನೆ ಮೂಗಿಗೆ ಬಡಿಯುತ್ತಿದೆ. ಬಸ್ ನಿಲ್ದಾಣದ ಆವರಣದಲ್ಲಿ ಪಾರ್ಕಿಂಗ್ ಮಾಡಬಾರದು ಎಂಬ ಸೂಚನಾ ಫಲಕ ಹೆಸರಿಗಷ್ಟೇ ಇದೆ.

ಪೂರಕ ಮಾಹಿತಿ: ಕೆ.ನಾಗರಾಜ್, ಕೆ.ವಿ.ನಾಗರಾಜ್, ಬಾಲು ಮಚ್ಚೇರಿ, ರವಿಕುಮಾರ್ ಶೆಟ್ಟಿಹಡ್ಲು,  ರಾಘವೇಂದ್ರ ಕೆ.ಎನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT