ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ಕೆರೆ–ಕಟ್ಟೆಗಳು ಸಂಪೂರ್ಣ ಬರಿದು

ನಾಲ್ಕೈದು ಕೆರೆಗಳಲ್ಲಿ ಮಾತ್ರ ಶೇ 15ರಷ್ಟು ನೀರು
Published 6 ಮೇ 2024, 6:32 IST
Last Updated 6 ಮೇ 2024, 6:32 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮಳೆ ಕೊರತೆ ಮತ್ತು ಬಿರು ಬಿಸಿಲಿಗೆ ಮಲೆನಾಡು ಮತ್ತು ಬಯಲು ಸೀಮೆ ತತ್ತರಗೊಂಡಿವೆ. ಜಿಲ್ಲೆಯ ಕೆರೆಗಳು ಬಹುತೇಕ ಖಾಲಿಯಾಗಿದ್ದು, ಅಂತರ್ಜಲ ಮಟ್ಟವೂ ಪಾತಾಳ ಸೇರಿದೆ.

ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 124 ಕೆರೆಗಳಿವೆ. ಫೆಬ್ರವರಿ ತಿಂಗಳಲ್ಲೇ 22 ಕೆರೆಗಳಲ್ಲಿ ನೀರು ಸಂಪೂರ್ಣವಾಗಿ ಖಾಲಿಯಾಗಿತ್ತು. 40 ಕೆರೆಗಳಲ್ಲಿ ಶೇ 30ಕ್ಕಿಂತ ಕಡಿಮೆ ನೀರಿತ್ತು. ಈಗ ನಾಲ್ಕೈದು ಕೆರೆಗಳಲ್ಲಿ ಶೇ 150ರಷ್ಟು ನೀರಿದ್ದರೆ, ಉಳಿದ ಕೆರೆ–ಕಟ್ಟೆಗಳು ಸಂಪೂರ್ಣ ಖಾಲಿಯಾಗಿವೆ.

ಭದ್ರಾ ನಾಲೆಯಿಂದ ನೀರು ಪೂರೈಸಿರುವ ತರೀಕೆರೆ ಪಟ್ಟಣದ ಒಂದು ಕೆರೆ ಹೊರತಾಗಿ ಬೇರೆ ಯಾವ ಕೆರೆಗಳಲ್ಲೂ ನೀರಿಲ್ಲ. ಚಿಕ್ಕಮಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಹಿರೆಕೊಳಲೆ ಕೆರೆ ಬರಿದಾಗಿತ್ತು. ನಡುವೆ ಒಂದೆರಡು ದಿನ ಮಳೆಯಾಗಿದ್ದರಿಂದ ಕೊಂಚ ನೀರು ಬಂದಿರುವುದು ಸಮಾಧಾನದ ವಿಷಯ. ಅಲ್ಲಿಂದ ನಗರಕ್ಕೆ ನೀರು ಪೂರೈಕೆ ನಿರಂತರವಾಗಿ ಸಾಗಿದೆ.

ನಗರದ ಮಧ್ಯದಲ್ಲೇ ಇರುವ ದಂಟರಮಕ್ಕಿ ಬಸವನಹಳ್ಳಿ ಕೆರೆಗೆ ಈ ವರ್ಷ ನೀರೇ ಬಂದಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ಕೆರೆ ಪಾಳು ಬಿದ್ದ ಸ್ಥಿತಿಯಲ್ಲಿದೆ. ಜಿಲ್ಲೆಯ ದೊಡ್ಡ ಕೆರೆಗಳೆಂದರೆ ಕಡೂರು ತಾಲ್ಲೂಕಿನ ಮದಗದ ಕೆರೆ ಮತ್ತು ಸಖರಾಯಪಟ್ಟಣ ಬಳಿ ಇರುವ ಅಯ್ಯನಕೆರೆ ಈ ಎರಡು ಕೆರೆಗಳಲ್ಲಿ ನೀರು ತಳ ಸೇರಿದೆ.

ಅಯ್ಯನಕೆರೆಯಲ್ಲಿ ಫೆಬ್ರವರಿಯಲ್ಲಿ ಶೇ 85ರಷ್ಟು ನೀರಿತ್ತು. ಮಾರ್ಚ್ ಮತ್ತು ಏಪ್ರಿಲ್‌ ತಿಂಗಳ ಬಿರು ಬೇಸಿಗೆಗೆ ಅಷ್ಟೂ ನೀರು ಖಾಲಿಯಾಗಿದ್ದು, ಈಗ ಶೇ 10ರಷ್ಟು ಮಾತ್ರ ನೀರಿದೆ. ಅದು ಬಳಕೆಗೆ ಯೋಗ್ಯವಾದ ಮಟ್ಟದಿಂದ ಕೆಳಕ್ಕೆ ಇಳಿದಿದೆ. ಮದಗದ ಕೆರೆಯ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ.

ಮುಂಗಾರು ಪೂರ್ವ ಮಳೆ ಆರಂಭದಲ್ಲಿ ಸಮಾಧಾನ ಎನಿಸಿತು. ಅದರೆ, ಈಗ ಮತ್ತೆ ಮಳೆ ಮುಗಿಲು ಸೇರಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಕೆರೆಗಳಲ್ಲಿ ನೀರಿಲ್ಲದಿರುವುದರಿಂದ ಅಂತರ್ಜಲ ಸಂಪೂರ್ಣ ಕುಸಿದಿದ್ದು, ಇದು ಜನ–ಜಾನುವಾರುಗಳ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ.

ಪ್ರಜಾವಾಣಿ ತಂಡ: ವಿಜಯಕುಮಾರ್ ಎಸ್.ಕೆ., ಬಾಲು ಮಚ್ಚೇರಿ, ಜೆ.ಒ.ಉಮೇಶ್‌ಕುಮಾರ್, ಕೆ.ನಾಗರಾಜ್

ಐತಿಹಾಸಿಕ ಅಯ್ಯನಕೆರೆಯಲ್ಲಿ ನೀರು ತಳ ಸೇರಿರುವುದು
ಐತಿಹಾಸಿಕ ಅಯ್ಯನಕೆರೆಯಲ್ಲಿ ನೀರು ತಳ ಸೇರಿರುವುದು
ತರೀಕೆರೆ ಪಟ್ಟಣದ ಗಾಳಿಹಳ್ಳಿ ಕ್ರಾಸ್‌ನಲ್ಲಿರುವ ರಾಮನಾಯಕನ ಕೆರೆ ಸಂಪೂರ್ಣ ಬತ್ತಿ ಹೋಗಿರುವುದು
ತರೀಕೆರೆ ಪಟ್ಟಣದ ಗಾಳಿಹಳ್ಳಿ ಕ್ರಾಸ್‌ನಲ್ಲಿರುವ ರಾಮನಾಯಕನ ಕೆರೆ ಸಂಪೂರ್ಣ ಬತ್ತಿ ಹೋಗಿರುವುದು

ಒಣಗಿದ ಕೆರೆಗಳು ಕಡೂರು: ತಾಲ್ಲೂಕಿನಲ್ಲಿ 32 ಕೆರೆಗಳು ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿದ್ದು ಬಹುತೇಕ ಕೆರೆಗಳು ಸಂಪೂರ್ಣ ಒಣಗಿಹೋಗಿವೆ. ಹಕ್ಕಿ ಕುಡಿಯಲೂ ನೀರಿಲ್ಲದ ಸ್ಥಿತಿ ಎದುರಾಗಿದೆ. ಸಾವಿರಾರು ಎಕರೆ ಕೃಷಿ ಭೂಮಿಗೆ ನೀರುಣಿಸುವ ತಾಲ್ಲೂಕಿನ ಪ್ರಮುಖ ಜೀವನಾಡಿ ಕೆರೆಯಾದ ಮದಗದ ಕೆರೆಯಲ್ಲಿ ನೀರು ಬಹುತೇಕ‌ ಖಾಲಿಯಾಗಿ ಬಳಕೆಗೆ ಯೋಗ್ಯವಾದ ನೀರಿನ ಮಟ್ಟಕ್ಕಿಂತ ಕಡಿಮೆಗೆ ಕುಸಿದಿದೆ. ಸಖರಾಯಪಟ್ಟಣದ ಬಳಿಯಿರುವ ಮತ್ತೊಂದು ಜೀವನಾಡಿ ಕೆರೆಯಾದ ಅಯ್ಯನಕೆರೆಯಲ್ಲೂ ನೀರಿಲ್ಲ. ಸಖರಾಯಪಟ್ಟಣದ ಕುಡಿಯುವ ನೀರಿಗೆ ಈ ಕೆರೆಯೇ ಆಧಾರ. ಸದ್ಯ ಇರುವ ನೀರು ಕೂಡ ಬಿರು ಬಿಸಿಲಿಗೆ ಆವಿಯಾಗುತ್ತಿದೆ. ಉಳಿದ ಕೆರೆಗಳ ಪೈಕಿ ಯಗಟಿ ಕುಕ್ಕಸಮುದ್ರ ಚೌಳಹಿರಿಯೂರು ಕೆರೆಗಳಲ್ಲಿ ಅಲ್ಪ ಪ್ರಮಾಣದ ನೀರಿದೆ. ಕೆ.ಬಿದರೆ ಸಿಂಗಟಗೆರೆ ಕೆರೆಯಲ್ಲಿ ಶೇ 20 ನೀರಿದೆ. ಅಚ್ಚರಿ ಎಂದರೆ ವಿಷ್ಣು ಸಮುದ್ರ ಕೆರೆಯಲ್ಲಿ ಮಾತ್ರ ಶೇ 70ರಷ್ಟು ನೀರಿದೆ.

‘ಬರಿದಾದ ಬುಕ್ಕಾಂಬುಧಿ ಬುಕ್ಕರಾಯ ಕೆರೆ’ ಅಜ್ಜಂಪುರ: ಸಾವಿರಾರು ಎಕರೆಯಲ್ಲಿನ ಕೃಷಿಗೆ ಹತ್ತಾರು ಗ್ರಾಮಗಳ ಕುಡಿಯುವ ನೀರಿಗೆ ಆಧಾರವಾಗಿದ್ದ ಮತ್ತು ಜಲಚರಗಳಿಗೆ ಆಸರೆಯಾಗಿದ್ದ ರಾಜ್ಯದ 2ನೇ ಅತೀ ದೊಡ್ಡಕೆರೆಯಾಗಿರುವ ಬುಕ್ಕಾಂಬುಧಿ ಗ್ರಾಮದ ಬುಕ್ಕರಾಯನ ಕೆರೆ ಬರಿದಾಗಿದೆ. ಸುತ್ತಮುತ್ತಲ ಹಳ್ಳಿಗಳ ಜೀವನಾಡಿಯಾಗಿರುವ ಈ ಐತಿಹಾಸಿಕ ದೊಡ್ಡಕೆರೆಯಲ್ಲಿ ನೀರು ಖಾಲಿ ಆಗಿರುವುದರಿಂದ ಅಂತರ್ಜಲ ಪಾತಾಳ ಸೇರಿ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಅಡಿಕೆ ತೆಂಗು ಮಾವಿನ ಮರಗಳು ಒಣಗುತ್ತಿವೆ. ಜೀವನಕ್ಕೆ ಆಧಾರವಾಗಿದ್ದ ತೋಟ ಉಳಿಸಿಕೊಳ್ಳಲು ರೈತರು ಪರದಾಡುವಂತಾಗಿದೆ. ವಿಜಯನಗರ ಸಾಮ್ರಾಜ್ಯದ ಅರಸ ಬುಕ್ಕರಾಯ ದೊಡ್ಡಕರೆ ನಿರ್ಮಿಸಿದ್ದಾರೆ. ಆರಂಭದಲ್ಲಿ 890 ಎಕರೆ ವಿಸ್ತೀರ್ಣದಲ್ಲಿ ಇದ್ದ ಕೆರೆ ಈಗ ಕೇವಲ 530 ಎಕರೆಯಲ್ಲಿದೆ. 2001ರಲ್ಲಿ ಕೆರೆ ಖಾಲಿಯಾಗಿದ್ದಾಗ ಕೆರೆ ಹೂಳೆತ್ತಿದ್ದು ಹೊರತುಪಡಿಸಿದರೆ ಈವರೆಗೂ ಕೆರೆಯ ಹೂಳೆತ್ತಿಲ್ಲ. ಕನಿಷ್ಠ 6-7 ಅಡಿಯಷ್ಟು ಹೂಳು ತುಂಬಿದೆ. ಇದು ನೀರು ಸಂಗ್ರಹ ಸಾಮರ್ಥ್ಯ ಕ್ಷೀಣಿಸುವಂತೆ ಮಾಡಿದೆ. ಹೂಳು ತೆಗೆದಿದ್ದರೆ ಇನ್ನಷ್ಟು ನೀರು ಸಂಗ್ರಹಕ್ಕೆ ಅವಕಾಶ ಆಗುತ್ತಿತ್ತು. ಬೇಸಿಗೆಯಲ್ಲಿ ಅನುಕೂಲ ಆಗುತ್ತಿತ್ತು ಎಂದು ಸ್ಥಳೀಯರು ಹೇಳುತ್ತಾರೆ. ಕೆರೆಯಲ್ಲಿ ತುಂಬಿರುವ ಹೂಳು ತೆಗೆಸಬೇಕು. ಕೆರೆ ತುಂಬಲು ಸಹಕಾರಿಯಾದ ನೀರಿನ ಮಾರ್ಗಗಳನ್ನು ರಕ್ಷಿಸಬೇಕು. ಒಟ್ಟಾರೆ ಕೆರೆ ತುಂಬಿಸಿ ಜನ-ಜಾನುವಾರು ತೋಟಗಳ ಉಳಿವಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಖಂಡ ಸಂಗಪ್ಪ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT