ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಲ ಸಿದ್ಧತೆ; ಮತದಾನಕ್ಕೆ ಕ್ಷಣಗಣನೆ: ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿರುವ ಮತದಾರ

Last Updated 17 ಏಪ್ರಿಲ್ 2019, 14:13 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಇದೇ 18ರಂದು ಮತದಾನ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ.

ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಜಿಲ್ಲೆಯಲ್ಲಿ 1222ಮತಗಟ್ಟೆಗಳಿವೆ. 319 ಸೂಕ್ಷ್ಮ ಮತ್ತು 191 ಅತಿಸೂಕ್ಷ್ಮ ಮತಗಟ್ಟೆಗಳು ಇವೆ. ಜಿಲ್ಲೆಯಲ್ಲಿ ಒಟ್ಟು 20 ಸಖಿ ಮತಗಟ್ಟೆಗಳು ಇವೆ. 5400 ಸಿಬ್ಬಂದಿ ನಿಯೋಜಿಸಲಾಗಿದ್ದು ಈ ಪೈಕಿ 1350 ಪ್ರಿಸೈಡಿಂಗ್‌ ಆಫೀಸರ್‌ (ಪಿಆರ್‌ಒ), 1350 ಸಹಾಯಕ ಪ್ರಿಸೈಡಿಂಗ್‌ ಆಫೀಸರ್ಸ್‌ (ಪಿಆರ್‌ಒ) ಹಾಗೂ 2700 ಪೋಲಿಂಗ್‌ ಆಫೀಸರ್ಸ್‌ಗಳು ಇದ್ದಾರೆ. ಭದ್ರತೆಗೆ 4500 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮತದಾನ ನಿಟ್ಟಿನಲ್ಲಿ ಚುನಾವಣಾ ವಿಭಾಗ ಸಕಲ ಸಿದ್ಧತೆ ಕೈಗೊಂಡಿದೆ.

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಮಸ್ಟರಿಂಗ್ ಪ್ರಕ್ರಿಯೆಯು ನಗರದ ಐಡಿಎಸ್‌ಜಿ ಕಾಲೇಜಿನಲ್ಲಿ ಬುಧವಾರ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 3.30ರವರೆಗೆ ನಡೆಯಿತು. ಚುನಾವಣಾ ಸಿಬ್ಬಂದಿ ಮಂತಯಂತ್ರಗಳು, ಚುನಾವಣಾ ಸಾಮಗ್ರಿಗಳನ್ನು ಪಡೆದು ಮತಕೇಂದ್ರಗಳಿಗೆ ವಾಹನಗಳಲ್ಲಿ ತೆರಳಿದರು.

‘ಅಧಿಕಾರಿಗಳು, ಸಿಬ್ಬಂದಿ ಚುನಾವಣೆ ಕಾರ್ಯವನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು. ಗೊಂದಲ ಮಾಡಿಕೊಳ್ಳದೆ ಕಾರ್ಯನಿರ್ವಹಿಸಬೇಕು. ಏನಾದರೂ ಸಮಸ್ಯೆಯಾದರೆ ತಕ್ಷಣವೇ ಸೆಕ್ಟರ್‌ ಅಧಿಕಾರಿ ಗಮನಕ್ಕೆ ತರಬೇಕು. ಯಾರಾದರೂ ತೊಂದರೆ ಮಾಡಿದರೆ ಪೊಲೀಸರಿಗೆ ತಿಳಿಸಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಅವರು ಸಿಬ್ಬಂದಿಗೆ ತಿಳಿಸಿದರು.

ನಕ್ಸಲ್‌ ಬಾಧಿತ, ದುರ್ಗಮ ಪ್ರದೇಶಗಳ ಮತಗಟ್ಟೆಗಳಲ್ಲಿ ನಿಗಾ ವಹಿಸಲಾಗಿದೆ. ಇಲ್ಲಿ ಕೇಂದ್ರೀಯ ಸಶಸ್ತ್ರ ಮೀಸಲು ಪಡೆ ತುಕಡಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ತುಕಡಿಗಳನ್ನು ನಿಯೋಜಿಸಲಾಗಿದೆ.

ಜಿಲ್ಲೆಯಾದ್ಯಂತ ನಿಷೇಧಾಜ್ಞೆ (ಸೆಕ್ಷನ್‌144) ಜಾರಿಗೊಳಿಸಲಾಗಿದೆ. ಮತದಾನದಂದು ಮತಗಟ್ಟೆಯ 200 ಮೀಟರ್‌ ವ್ಯಾಪ್ತಿಯಲ್ಲಿ ಯಾವುದೇ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. 100 ಮೀಟರ್‌ ವ್ಯಾಪ್ತಿಯಲ್ಲಿ ಪ್ರಚಾರ ಮಾಡುವುದನ್ನು ನಿರ್ಬಂಧಿಸಲಾಗಿದೆ.
ಹಾಸನ ಲೋಕಸಭಾ ಕ್ಷೇತ್ರದಲ್ಲಿ 16,51,391 ಮತದಾರರು, ಚಿಕ್ಕಮಗಳೂರು– ಉಡುಪಿ ಕ್ಷೇತ್ರದಲ್ಲಿ 15,13,231 ಮತದಾರರು ಇದ್ದಾರೆ. ಚಿಕ್ಕಮಗಳೂರು– ಉಡುಪಿ ಕ್ಷೇತ್ರದಲ್ಲಿ ಮಹಿಳಾ ಮತದಾರರು (7,74,674) ಹೆಚ್ಚು ಇದ್ದಾರೆ.

ಜಿಲ್ಲೆಯ ಕಡೂರು ವಿಧಾನ ಸಭಾ ಕ್ಷೇತ್ರವು ಹಾಸನ ಲೋಕಸಭಾ ಕ್ಷೇತ್ರವ್ಯಾಪ್ತಿಗೆ ಒಳಪಟ್ಟಿದೆ. ತರೀಕೆರೆ, ಶೃಂಗೇರಿ, ಮೂಡಿಗೆರೆ ಹಾಗೂ ಚಿಕ್ಕಮಗಳೂರು ಕ್ಷೇತ್ರಗಳು ಚಿಕ್ಕಮಗಳೂರು– ಉಡುಪಿ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದೆ. ಚಿಕ್ಕಮಗಳೂರು– ಉಡುಪಿ ಲೋಕಸಭಾ ಕ್ಷೇತ್ರ ಕರಾವಳಿ, ಮಲೆನಾಡು, ಬಯಲುಸೀಮೆ ಭೌಗೋಳಿಕ ವೈಶಿಷ್ಟ್ಯದ ಕ್ಷೇತ್ರವಾಗಿದೆ.

ಹಾಸನ ಲೋಕಸಭಾ ಕ್ಷೇತ್ರದ ಕಣದಲ್ಲಿ 6 ಅಭ್ಯರ್ಥಿಗಳು ಹಾಗೂ ಚಿಕ್ಕಮಗಳೂರು– ಉಡುಪಿ ಕ್ಷೇತ್ರದ ಕಣದಲ್ಲಿ 12 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಘಟಾನುಘಟಿಗಳ ಕಣದಲ್ಲಿದ್ದು, ಕ್ಷೇತ್ರಗಳು ಗಮನ ಸೆಳೆದಿವೆ.

ಚುನಾವಣೆಗೆ 280 ಕೆಎಸ್‌ಆರ್‌ಟಿಸಿ ಬಸ್ಸು ಬಳಕೆ, ಪ್ರಯಾಣಿಕರಿಗೆ ತೊಂದರೆ

ಚಿಕ್ಕಮಗಳೂರು ಕೆಎಸ್‌ಆರ್‌ಟಿಸಿ ವಿಭಾಗದ 280 ಬಸ್ಸುಗಳನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಹಾಸನ ಕ್ಷೇತ್ರ ಹಾಗೂ ಉಡುಪಿ–ಚಿಕ್ಕಮಗಳೂರು ಕ್ಷೇತ್ರಕ್ಕೆ ತಲಾ 140 ಬಸ್ಸುಗಳನ್ನು ಬಳಸಿಕೊಳ್ಳಲಾಗಿದೆ. ಕೆಲವಾರು ಮಾರ್ಗದ ಬಸ್ಸುಗಳು ಇಲ್ಲದೆ ಪ್ರಯಾಣಿಕರು ಬುಧವಾರ ತೊಂದರೆ ಅನುಭವಿಸಿದರು.

ಮಾರ್ಗದಲ್ಲಿ ನಿಯಮಿತವಾಗಿ ಸಂಚರಿಸುವ ಬಸ್ಸುಗಳು ಇಲ್ಲದೆ ಪ್ರಯಾಣಿಕರು ನಿಲ್ದಾಣದಲ್ಲಿ ಕಾಯುವಂತಾಯಿತು. ಮತ್ತೆ ಕೆಲವರು ಬಸ್ಸುಗಳಿಲ್ಲದೇ ಜೀಪು, ಆಟೊ, ಲಗೇಜ್‌ ಆಟೊ ಇತ್ಯಾದಿಗಳಲ್ಲಿ ತೆರಳಿದರು.

ವಿಭಾಗೀಯ ನಿಯಂತ್ರಣಾಧಿಕಾರಿ ಅನಿಲಕುಮಾರ್ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ ‘ವಿಭಾಗದಲ್ಲಿ ಒಟ್ಟು 560 ಬಸ್ಸುಗಳು ಇವೆ. ಈ ಪೈಕಿ 280 ಬಸ್ಸುಗಳನ್ನು ಚುನಾವಣೆಗೆ ಬಳಸಿಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಚುನಾವಣೆ ಇಲ್ಲ. ಆ ಕಡೆಗೆ ಸಂಚರಿಸುವ ಬಸ್ಸುಗಳನ್ನು ನೀಡಲಾಗಿದೆ. ಪ್ರಯಾಣಿಕರಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ’ ಎಂದು ತಿಳಿಸಿದರು.

‘ಡಿಪೋದಲ್ಲಿ ನಿರ್ವಹಣೆ ಇತ್ಯಾದಿ ನಿಟ್ಟಿನಲ್ಲಿ ಬಸ್ಸುಗಳನ್ನು ನಿಲ್ಲಿಸಿಲ್ಲ. ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT