ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವು; ಶೇ 30ರಷ್ಟು ಹೆಚ್ಚು ಇಳುವರಿ

ರಸಪೂರಿ, ಬಾದಾಮಿ, ಸಿಂಧೂರ ಹಣ್ಣುಗಳಿಗೆ ಬೇಡಿಕೆ
Last Updated 4 ಏಪ್ರಿಲ್ 2021, 3:34 IST
ಅಕ್ಷರ ಗಾತ್ರ

ಅಜ್ಜಂಪುರ: ಹಣ್ಣುಗಳ ರಾಜನಾಗಿರುವ ಮಾವಿನ ಬೆಳೆ ತಾಲ್ಲೂಕಿನಲ್ಲಿ ಉತ್ತಮವಾಗಿದೆ. ಕಳೆದ ಬಾರಿಗಿಂತ ಇಳುವರಿ ಹೆಚ್ಚಳವಾಗಿರುವುದು, ರೈತರು ಮತ್ತು ವ್ಯಾಪಾರಸ್ಥರಲ್ಲಿ ಹರ್ಷ ಮೂಡಿಸಿದೆ.

ತಾಲ್ಲೂಕಿನ ಸೊಕ್ಕೆ, ತಿಮ್ಮಾಪುರ, ರಂಗಾಪುರ, ಕಲ್ಲುಶೆಟ್ಟಿಹಳ್ಳಿ, ಕರಡಿಪುರ, ಕಾರಣಘಟ್ಟ, ಹುಣಸಘಟ್ಟ ಭಾಗದಲ್ಲಿದೆ. ಇಲ್ಲಿನ ತೋಪುಗಳಲ್ಲಿ ಮಾವು ತುಂಬಿದ್ದು, ಕಣ್ಮನ ಸೆಳೆಯುತ್ತಿದೆ.

ರಸಪೂರಿ, ಬಾದಾಮಿ, ಸಿಂಧೂರ, ತೋತಾಪುರಿ, ನೀಲಂ, ಮಲಗೂಬಾ, ನಾಟಿ ಹಣ್ಣುಗಳು ಬಾಯಲ್ಲಿ ನೀರೂರಿಸುತ್ತಿವೆ. ಬೇರೆಲ್ಲ ಹಣ್ಣುಗಳಿಗಿಂತಲೂ ವಿಭಿನ್ನ ರುಚಿ ಹೊಂದಿರುವ ಮಾವು, ಗ್ರಾಹಕರನ್ನು ಸೆಳೆಯುತ್ತದೆ.
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇ 30ರಷ್ಟು ಇಳುವರಿ ಅಧಿಕವಾಗಿದೆ. ಅಕಾಲಿಕ ಮಳೆ, ಹೆಚ್ಚಿದ ಇಬ್ಬನಿಯಿಂದಾಗಿ ಹೂ ಕಳಚಿದ್ದರೂ, ಇಳುವರಿ ಮಾತ್ರ ಕೈಕೊಟ್ಟಿಲ್ಲ ಎನ್ನುತ್ತಾರೆ ಕರಡೀಪುರ ಮಾವು ಬೆಳೆಗಾರ ಉಮೇಶ್ ನಾಯ್ಕ.

‘ಮಾವು ಉತ್ತಮವಾಗಿದ್ದರೂ, ಹೆಚ್ಚಿನ ಆದಾಯ ತರುವುದಿಲ್ಲ. ರಸಪೂರಿ, ಬಾದಾಮಿ, ಸಿಂದೂರ ಹಣ್ಣುಗಳಿಗಷ್ಟೇ ಬೇಡಿಕೆ. ಉಳಿದ ಬಗೆಯ ಮಾವಿನ ಹಣ್ಣುಗಳಿಗೆ ಬೇಡಿಕೆ ಇಲ್ಲ. ಚೇಣಿದಾರರು ಪ್ರತಿ ಎಕರೆ ಮಾವಿನ ಹಣ್ಣನ್ನು ₹ 10-15 ಸಾವಿರಕ್ಕೆ ಚೇಣಿ ಪಡೆಯುತ್ತಿದ್ದಾರೆ. ಇದು ಹೇಳಿಕೊಳ್ಳುವಷ್ಟು ಆದಾಯವಲ್ಲ’ ಎನ್ನುತ್ತಾರೆ ಅವರು.

ಆದಾಯದ ಕೊರತೆ, ಲಾಭದ ಪ್ರಮಾಣದಲ್ಲಿ ಇಳಿಮುಖದಿಂದಾಗಿ ರೈತರು, ಮಾವು ಬೆಳೆಯಿಂದ ವಿಮುಖರಾಗಿದ್ದಾರೆ. ಅಡಿಕೆ ಕೃಷಿ ಯತ್ತ ಹೊರಳಿದ್ದಾರೆ. ಹಿಂಗಾರಿನಲ್ಲಿ ತಾಲ್ಲೂಕಿನ ಕೆಲ ರೈತರು, ಹತ್ತಾರು ಎಕರೆಯಲ್ಲಿನ ಮಾವು ತೆಗೆದು ಅಡಿಕೆ ಕೃಷಿಯಲ್ಲಿ ತೊಡಗಿದ್ದಾರೆ.

ಮಹಾರಾಷ್ಟ್ರದಲ್ಲಿ ಮಾವಿಗೆ ಉತ್ತಮ ಮಾರುಕಟ್ಟೆಯಿತ್ತು. ಕೋವಿಡ್-19 ಕಾರಣಕ್ಕೆ ಅಲ್ಲಿಗೆ ಹಣ್ಣು ಹೋಗುವುದು ಬಂದ್ ಆಗಿದೆ. ಸ್ಥಳೀಯವಾಗಿ ಮಾವು ಮಾರಾಟ ಮಾಡಬೇಕಾಗಿದೆ. ಬಿರು ಬೇಸಿಗೆಯಲ್ಲಿ ಮಾವು ತಿನ್ನಲು ಜನ ಹಿಂಜರಿಯುತ್ತಿದ್ದು, ಬೆಲೆ ಕುಸಿತದ ಭೀತಿ ಆವರಿಸಿದೆ ಎನ್ನುತ್ತಾರೆ ಮಾವಿನ ಚೇಣಿ ಮಾಡಿಕೊಂಡಿದ್ದ ಭದ್ರಾವತಿಯ ವ್ಯಾಪಾರಿ ಸಲೀಂ.

ಮಾರುಕಟ್ಟೆ ಕೊರತೆ, ಕಷ್ಟಕರವಾದ ಶೇಖರಣೆ, ಹೆಚ್ಚಿದ ಸಾಗಣೆ ವೆಚ್ಚ, ದಲ್ಲಾಳಿಗಳ ಹಾವಳಿಯಿಂದಾಗಿ ಮಾವು ಬೆಳೆ ನಿರ್ವಹಣೆ ಮತ್ತು ವ್ಯಾಪಾರ ರೈತರಿಗೆ ಹೊರೆಯಾಗಿದ್ದು, ಅನ್ಯ ಬೆಳೆಯತ್ತ ಸಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT