ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ಮಾಣಿಕ್ಯಧಾರಾ ಮಾಲಿನ್ಯಕ್ಕೆ ಇಲ್ಲ ಕಡಿವಾಣ

Published 23 ನವೆಂಬರ್ 2023, 5:56 IST
Last Updated 23 ನವೆಂಬರ್ 2023, 5:56 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತದ ತುದಿಯಿಂದ ವಜ್ರದ ಹರಳಿನಂತೆ ಸುರಿಯುವ ಮಾಣಿಕ್ಯಧಾರಾ ಜಲಪಾತ ಮಲೀನಕ್ಕೆ ಕಡಿವಾಣವೇ ಇಲ್ಲವಾಗಿದ್ದು, ಎಲ್ಲೆಲ್ಲೂ ಬಟ್ಟೆಗಳ ರಾಶಿ ಬೀಳುವಂತಾಗಿದೆ.

ಮುಳ್ಳಯ್ಯನಗಿರಿ ಸಾಲಿನ ಪ್ರಕೃತಿ ವಿಸ್ಮಯಗಳನ್ನು ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರು ಮಾಣಿಕ್ಯಧಾರಾ ಜಲಪಾತಕ್ಕೂ ಭೇಟಿ ನೀಡುತ್ತಾರೆ. ವರ್ಷವಿಡೀ ಜಲಪಾತದಿಂದ ನೀರು ಧುಮ್ಮಿಕ್ಕುತ್ತದೆ. ಮಳೆ ಇಲ್ಲದಿದ್ದರೂ ಜಲಧಾರೆ ನಿಲ್ಲುವುದಿಲ್ಲ.

ಬರುವ ಪ್ರವಾಸಿಗರು ವಜ್ರದ ಹರಳಿನಂತೆ ಸುರಿಯುವ ನೀರಿಗೆ ಮೈಯೊಡ್ಡಿ ನಿಲ್ಲುವುದು ಸಾಮಾನ್ಯ. ಈ ಜಲಪಾತದಲ್ಲಿ ಮಿಂದು ದೇವರಿಗೆ ಪೂಜೆ ಸಲ್ಲಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯೂ ಹಲವರಲ್ಲಿದೆ.

ಧರಿಸಿದ್ದ ಬಟ್ಟೆಗಳನ್ನು ‌ಸ್ನಾನ ಮಾಡಿದ ನಂತರ ಅಲ್ಲಿಯೇ ಬಿಸಾಡಿ ಹೋಗುವುದು ಮಾತ್ರ ತಪ್ಪಿಲ್ಲ. ಬಟ್ಟೆಗಳನ್ನು ಎಸೆಯಬಾರದು ಎಂದು ಫಲಕಗಳನ್ನು ಹಾಕಿದ್ದು, ಆ ಫಲಕದ ಪಕ್ಕದಲ್ಲೆ ಬಟ್ಟೆ ಬಿಸಾಡಿ ಹೋಗುತ್ತಾರೆ. ಇದರಿಂದ ಇಡೀ ವಾತಾವರಣ ಕಲುಷಿತಗೊಂಡಂತೆ ಕಾಣಿಸುತ್ತದೆ.

ಜಲಪಾತದ ಸುತ್ತ ಬಿದ್ದಿರುವ ಬಟ್ಟೆಗಳನ್ನು ನಿರ್ವಹಣೆ ಹೊಣೆ ಹೊತ್ತವರು ಆಗೊಮ್ಮೆ ಈಗೊಮ್ಮೆ ಸಂಗ್ರಹಿಸುತ್ತಾರೆ. ಆದರೆ, ಅದನ್ನು ಹೊರಕ್ಕೆ ತಂದು ಬೇರೆಡೆ ವಿಲೇವಾರಿ ಮಾಡುವುದಿಲ್ಲ. ಅವುಗಳನ್ನು ಚೀಲದಲ್ಲಿ ತುಂಬಿ ಜಲಪಾತದಿಂದ ಮುಂದಕ್ಕೆ ನೀರು ಹರಿಯುವ ಪ್ರಪಾತಕ್ಕೆ ಬಿಸಾಡಾಲಾಗುತ್ತದೆ. 

ಸಮುದ್ರ ಮಟ್ಟದಿಂದ ಸುಮಾರು 3 ಸಾವಿರ ಅಡಿ ಎತ್ತರದಲ್ಲಿರುವ ಈ ಜಲಪಾತದಿಂದ ಪ್ರಪಾತಕ್ಕೆ ಎಸೆಯಲ್ಪಡುವ ಬಟ್ಟೆಗಳು ಮುಂದೆ ನೀರಿನಲ್ಲಿ ಹರಿದು ಸಾಗುತ್ತವೆ. ವರ್ಷಕ್ಕೊಮ್ಮೆ ದೀಪಾವಳಿ ಸಂದರ್ಭದಲ್ಲಿ ದೇವಿರಮ್ಮನ ಬೆಟ್ಟ ಹತ್ತುವ ಭಕ್ತರು ಅರಿಶಿಣಗುಪ್ಪೆ ಕಡೆಯಿಂದ ಹೋದರೆ ಈ ಜಲಪಾತದಿಂದ ಹರಿದು ಬರುವ ನೀರು ದಾಟಿಯೇ ಸಾಗಬೇಕು.

ಸಾವಿರಾರು ಅಡಿ ಮೇಲಿರುವ ಜಲಪಾತದಿಂದ ಎಸೆಯುವ ಬಟ್ಟೆಗಳು ಬೆಟ್ಟದ ಬುಡದಲ್ಲೂ ರಾಶಿಯಾಗಿ ಸಿಗುತ್ತವೆ. ಇಡೀ ಜಲಪಾತದ ನೀರು ಹರಿದು ಸಾಗುವ ಮಾರ್ಗದಲ್ಲಿ ಕಿಲೋ ಮೀಟರ್ ಗಟ್ಟಲೆ ಈ ಬಟ್ಟೆಗಳು ಕಾಣಸಿಗುತ್ತವೆ. ದೇವಿರಮ್ಮನ ದರ್ಶನಕ್ಕೆ ಹೋಗುವ ಭಕ್ತರು ಕೂಡ ಈ ಬಟ್ಟೆಗಳನ್ನು ಕಂಡು ಬೇಸರ ವ್ಯಕ್ತಪಡಿಸುವುದು ಸಾಮಾನ್ಯವಾಗಿತ್ತು.

ಪ್ರವೇಶಕ್ಕೆ ₹5 ಶುಲ್ಕ: ನಿರ್ವಹಣೆ ಶೂನ್ಯ

ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರಿಂದ ತಲಾ ₹5 ಪ್ರವೇಶ ಶುಲ್ಕ ಕೂಡ ಪಡೆಯಲಾಗುತ್ತಿದೆ. ಆದರೆ ನಿರ್ವಹಣೆ ಮಾತ್ರ ಇಲ್ಲವಾಗಿದೆ. ಧಾರ್ಮಿಕ ದತ್ತಿ ಇಲಾಖೆ ಶ್ರೀ ಗುರುದ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆ ಎಂದು ಮುದ್ರಿಸಿರುವ ಚೀಟಿ ಕೂಡ ನೀಡಲಾಗುತ್ತದೆ. ‘ಪ್ಲಾಸ್ಟಿಕ್ ಬಳಿಕೆ ನಿಷೇಧ ಸ್ವಚ್ಛತೆ ಕಾಪಾಡಿ’ ಎಂದೂ ಬರೆಯಲಾಗಿದೆ.  ಆದರೆ ನಿರ್ವಹಣೆ ಮಾತ್ರ ಇಲ್ಲವಾಗಿದ್ದು ಜಲಪಾತ ವೀಕ್ಷಣೆಗೆ ದೂರದ ಊರುಗಳಿಂದ ಬರುವ ಪ್ರವಾಸಿಗರು ಅಲ್ಲಲ್ಲಿ ಬಿದ್ದಿರುವ ಬಟ್ಟೆ ಕಂಡು ಬೇಸರ ವ್ಯಕ್ತಪಡಿಸುತ್ತಾರೆ.

ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರಿಂದ ಪಡೆಯುವ ಶುಲ್ಕದ ರಸೀದಿ
ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರಿಂದ ಪಡೆಯುವ ಶುಲ್ಕದ ರಸೀದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT