ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೆ ಮೇರಿಯಮ್ಮ ಆರಾಧನೆ ಸಂಭ್ರಮ

ಹೊಸಕ್ಕಿ ಹಬ್ಬದ ಸಡಗರ, ತೆನೆ ನೀಡಿ ಆಶೀರ್ವಾದ, ಮಾತೆಗೆ ಹೂ ಹಾಕಿ ಗೌರವ ಸಹಪಂಕ್ತಿ ಭೋಜನ
Last Updated 9 ಸೆಪ್ಟೆಂಬರ್ 2022, 2:38 IST
ಅಕ್ಷರ ಗಾತ್ರ

ಕಳಸ: ತಾಲ್ಲೂಕಿನಾದ್ಯಂತ ಕ್ರೈಸ್ತರು ಗುರುವಾರ ಹೊಸಕ್ಕಿ ಹಬ್ಬದ ಸಡಗರದಲ್ಲಿ ಭಾಗವಹಿಸಿದರು.
ಏಸುಕ್ರಿಸ್ತರ ತಾಯಿ ಮೇರಿಯ ಜನ್ಮದಿನವನ್ನು ಹೊಸಕ್ಕಿ ಹಬ್ಬದ ರೂಪದಲ್ಲಿ ಕರಾವಳಿಯಲ್ಲಿ ಆಚರಿಸುವ ಪ್ರತೀತಿ ಇದೆ. ಕರಾವಳಿಯ ಗಾಢ ಪ್ರಭಾವ ಹೊಂದಿದ ಕಳಸ, ಹಿರೇಬೈಲ್ ಮತ್ತು ಸಂಸೆ ಚರ್ಚ್‌ಗಳಲ್ಲಿ ಅನುಸರಿಸಲಾಗುತ್ತಿದೆ.
ಚರ್ಚ್‌ನಲ್ಲಿ ಗುರುವಾರ ಧರ್ಮ ಗುರುಗಳು ಮಾತೆ ಮೇರಿಗೆ ಪೂಜೆ ಸಲ್ಲಿಸಿದ ನಂತರ ಭತ್ತದ ಕದಿರಿಗೂ ಪೂಜೆ ಸಲ್ಲಿಸಿದರು. ಆನಂತರ ಎಲ್ಲ ಕುಟುಂಬಗಳಿಗೂ ಒಂದೊಂದು ತೆನೆ ವಿತರಿಸಿದರು. ಹೊಸಕ್ಕಿ ಹಬ್ಬದ ಅಂಗ
ವಾಗಿ ಸಸ್ಯಾಹಾರ ಭೋಜನ ಸವಿದರು.

ಕೂದುವಳ್ಳಿ ಚರ್ಚ್‌ನಲ್ಲಿ ಹಬ್ಬ

ಆಲ್ದೂರು: ಸಮೀಪದ ಕೂದುವಳ್ಳಿ ಲೂರ್ದು ಮಾತೆ ಚರ್ಚ್‌ನಲ್ಲಿ ಮರಿಯಮ್ಮನ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ನವ ದಿನಗಳ ನೊವೆನಾ ಪ್ರಾರ್ಥನೆಯ ಸಿದ್ಧತೆಯೊಂದಿಗೆ ಚರ್ಚ್‌ ಮುಂಭಾಗದಲ್ಲಿರುವ ಮಾತೆ ಮರಿಯಮ್ಮನವರ ಗವಿಯ ಮುಂದೆ ಕಂದಮರಿಯ ಸ್ವರೂಪವನ್ನು ಪುಷ್ಪಾರ್ಚನೆ ಮಾಡಲಾಯಿತು. ನಂತರ ಮೆರವಣಿಗೆ ಮೂಲಕ ಬಂದು ದೇವಾಲಯದಲ್ಲಿ ಬಲಿ ಪೂಜೆ ನೆರವೇರಿಸಲಾಯಿತು.

ಧರ್ಮಗುರು ಡೆನ್ಜಿಲ್ ಲೋಬೊ ಹಾಗೂ ಕಪ್ಪುಚಿನ್ ಸಭೆಯ ಕದ್ರಿಮಿದ್ರಿಯ ಗುರು ಜಾನ್ ಬ್ಯಾಪ್ಟಿಸ್ಟ್ ಗೊನ್ಸಲ್ವಿಸ್ ಬಲಿ ಪೂಜೆ ನಡೆಸಿಕೊಟ್ಟರು.

ಬಳಿಕ ರಸಪ್ರಶ್ನೆ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಆಶೀರ್ವದಿಸಿದ ಹೊಸ ಪೈರಿನ ತೆನೆ ಮತ್ತು ಕಬ್ಬನ್ನುಕುಟುಂಬದ ಯಜಮಾನರಿಗೆ ನೀಡಲಾಯಿತು. ಹೊಸಪೈರಿನ ತೆನೆ ಹಾಕಿದ ಸಿಹಿಯನ್ನು ಎಲ್ಲರಿಗೂ ಹಂಚಲಾಯಿತು. ಕನ್ಯಾ ಸಹೋದರಿಯರು ಮತ್ತು ಕೂದುವಳ್ಳಿ ಲೂರ್ದು ಮಾತೆ ಚರ್ಚ್‌ ವ್ಯಾಪ್ತಿಯ ಹಳ್ಳಿಗಳಾದ ಬನ್ನೂರು, ಕೂದುವಳ್ಳಿ, ವಸ್ತಾರೆ, ಆಲ್ದೂರು, ತೋರಣ ಮಾವಿನ ಕ್ರೈಸ್ತರು ಪಾಲ್ಗೊಂಡಿದ್ದರು.

‘ಏಕತೆಯಿಂದ ಜೀವನ ನಡೆಸಿ’

ಕೊಟ್ಟಿಗೆಹಾರ: ‘ಕುಟುಂಬದಲ್ಲಿ ಏಕತೆಯಿಂದ ಹಾಗೂ ಸಹಬಾಳ್ವೆಯಿಂದ ಜೀವನ ನಡೆಸಿದರೆ ಉತ್ತಮ ಸ್ವಸ್ಥ್ಯ ಸಮಾಜ ನಿರ್ಮಾಣ ಸಾಧ್ಯ’ ಎಂದು ಉಜಿರೆ ದಯಾಳ್ ಬಾಗ್ ಚರ್ಚ್‌ ಧರ್ಮಗುರು ಜೋಯೆಲ್ ಲೋಪೆಸ್ ಹೇಳಿದರು.

ಅವರು ಬಣಕಲ್ ಬಾಲಿಕಾ ಮರಿಯ ಚರ್ಚ್‌ನಲ್ಲಿ ಮಾತೆ ಮರಿಯಮ್ಮನವರ ಹಬ್ಬದ (ಹೊಸಕ್ಕಿ ಹಬ್ಬ)ವಿಶೇಷ ಪೂಜೆ ಅರ್ಪಿಸಿ ಮಾತನಾಡಿದರು.

‘ಪ್ರಕೃತಿ ತಾಯಿಯನ್ನು ನಾವು ಪ್ರೀತಿಸಬೇಕು. ಆಗ ಮಾತ್ರ ಉತ್ತಮ ಫಲ ನಿರೀಕ್ಷೆ ಸಾಧ್ಯ. ಹಾಗೆಯೇ ನಮ್ಮ ತಂದೆ ತಾಯಿಯನ್ನು ಪ್ರೀತಿಸಬೇಕು. ಮಾತೆ ಮರಿಯಮ್ಮನವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಬೇಕು ಎಂದರು.

ಬಣಕಲ್, ಬಾಳೂರು, ಕೊಟ್ಟಿಗೆಹಾರ, ಜಾವಳಿ, ಕುಂದೂರು ಗ್ರಾಮಗಳ ಕ್ರೈಸ್ತರು ಬಣಕಲ್ ಚರ್ಚ್‌ನಲ್ಲಿ ಸಮಾವೇಶಗೊಂಡು ಸಹಪಂಕ್ತಿಯಲ್ಲಿ ಕುಳಿತು ಊಟ ಸೇವಿಸಿದರು. ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದವು. ಆಶೀರ್ವದಿಸಿದ ಭತ್ತದ ಹೊಸ ತೆನೆ, ಕಬ್ಬು, ಸಿಹಿ ವಿತರಿಸಲಾಯಿತು. ಧರ್ಮಗುರು ಫಾ.ಪ್ರೇಮ್ ಲಾರೆನ್ಸ್ ಡಿಸೋಜ, ಫಾ.ಎಡ್ವಿನ್ ರಾಕೇಶ್ ಡಿಸೋಜ ಇದ್ದರು.

ಕೆಳಗೂರು ಚರ್ಚ್‌ನಲ್ಲಿ ಧರ್ಮಗುರು ಡೇವಿಡ್ ಪ್ರಕಾಶ್ ಪೂಜೆ ನೆರವೇರಿಸಿ ಮಾತನಾಡಿ, ‘ಪ್ರತಿ ಕುಟುಂಬದ ತಾಯಿಯಂತೆ ಸಮಾಜಕ್ಕೆ ಮೇರಿಯಮ್ಮ ಪ್ರೇರಕರಾಗಿದ್ದಾರೆ’ ಎಂದರು. ಭತ್ತದ ತೆನೆಯನ್ನು ಧರ್ಮಗುರುಗಳು ಆಶೀರ್ವದಿಸಿ ನೆರೆದವರಿಗೆ ಹಂಚಿದರು. ನಂತರ ಸಿಹಿ ನೀಡಲಾಯಿತು.
ಕೂವೆ ಪವಿತ್ರ ಹೃದಯದ ಚರ್ಚ್‌ನಲ್ಲಿ ಧರ್ಮಗುರು ಲ್ಯಾನ್ನಿ ಪಿಂಟೊ ಸಂದೇಶ ನೀಡಿದರು. ಪೂಜೆಯ ನಂತರ ಸಿಹಿ ವಿತರಿಸಲಾಯಿತು. ವಿವಿಧ ಚರ್ಚ್‌ಗಳಲ್ಲಿ ಮಾತೆ ಮರಿಯಮ್ಮನವರಿಗೆ ಹೂ ಸಮರ್ಪಿಸುವ ಮೂಲಕ ಹಬ್ಬವನ್ನು ಸಂಭ್ರಮಿಸಲಾಯಿತು. ಪೂಜೆಯ ಮೊದಲು ಮೆರವಣಿಗೆಯನ್ನು ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT