ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಕ್ರೋ ಫೈನಾನ್ಸ್‌ ವಿರುದ್ಧ ಮಹಿಳೆಯರ ಪ್ರತಿಭಟನೆ

ಋಣಮುಕ್ತ ಕಾಯ್ದೆಯಡಿ ಸಾಲ ಮನ್ನಾಮಾಡಲು ಒತ್ತಾಯ
Last Updated 16 ನವೆಂಬರ್ 2019, 13:31 IST
ಅಕ್ಷರ ಗಾತ್ರ

ಚಿಕ್ಕಮಗಳೂರು:ಮೈಕ್ರೋ ಫೈನಾನ್ಸ್‌ಗಳಲ್ಲಿ ಬಡ ಮಹಿಳೆಯರು ಪಡೆದಿರುವ ಸಾಲವನ್ನು ಋಣಮುಕ್ತ ಕಾಯ್ದೆಯಡಿ ಮನ್ನಾಮಾಡಬೇಕು ಎಂದು ಜಿಲ್ಲಾಋಣಮುಕ್ತ ಹೋರಾಟ ಸಮಿತಿ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ತಾಲ್ಲೂಕು ಕಚೇರಿ ಆವರಣದಿಂದ ಆಜಾದ್ ಪಾರ್ಕ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಘೋಷಣೆ ಕೂಗಿದರು.

ರಾಷ್ಟ್ರೀಕೃತ ಬ್ಯಾಂಕುಗಳಿಂದ ಬಡವರಿಗೆ ಶೇ 3ರ ಬಡ್ಡಿದರದಲ್ಲಿ ₹1ಲಕ್ಷ ಸಾಲ ನೀಡಬೇಕು. ಈ ಬ್ಯಾಂಕುಗಳು ಮೈಕ್ರೋ ಫೈನಾನ್ಸ್‌ಗಳಿಗೆ ಸಾಲ ನೀಡುವುದನ್ನು ನಿಲ್ಲಿಸಬೇಕು. ಸಣ್ಣ ಹಣಕಾಸು ಸಂಸ್ಥೆಗಳ ಪರವಾನಗಿ ಪಡೆದು ದೊಡ್ಡ ವ್ಯವಹಾರ ನಡೆಸುತ್ತಿರುವ ಮೈಕ್ರೋ ಫೈನಾನ್ಸ್‌ಗಳ ವಿರುದ್ಧಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರೀಕೃತ ಬ್ಯಾಂಕುಗಳ ಶಾಖೆಗಳು ಹೆಚ್ಚಾಗುತ್ತಿವೆ. ಆದರೆ ಆ ಬ್ಯಾಂಕುಗಳು ಬಡವರಿಗೆ ಸಾಲ ನೀಡುತ್ತಿಲ್ಲ. ಅದನ್ನೇ ಬಂಡವಾಳ ಶಾಹಿ ಕಂಪೆನಿಗಳು, ಮೈಕ್ರೋ ಫೈನಾನ್ಸ್‌ಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಈ ಸಂಸ್ಥೆಗಳು ಬಡವರ ಅಭಿವೃದ್ಧಿ ಹೆಸರಿನಲ್ಲಿ ನಬಾರ್ಡ್‌ನಿಂದ ಶೇ4 ರ ಬಡ್ಡಿ ದರದಲ್ಲಿ ಸಾಲ ಪಡೆಯುತ್ತವೆ. ಬಡವರಿಗೆ ಶೇ 30ರವರೆಗೆ ಬಡ್ಡಿ ವಿಧಿಸುತ್ತಿವೆ ಎಂದು ದೂರಿದರು.

ಇಂದಿರಾಗಾಂದಿ ಬಡಾವಣೆಯ ಜಯಂತಿ ಮಾತನಾಡಿ, ಅತಿವೃಷ್ಟಿಯಿಂದ ತೋಟಗಳು ಹಾನಿಯಾಗಿವೆ. ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಕುಟುಂಬ ನಿರ್ವಹಣೆಯೆ ಕಷ್ಟವಾಗಿದೆ. ಈ ಪರಿಸ್ಥಿತಿಯಲ್ಲಿ ಸಾಲ ಮರುಪಾವತಿಗೆ ಮೈಕ್ರೋ ಫೈನಾನ್ಸ್‌ನವರು ಒತ್ತಾಯಿಸುತ್ತಿದ್ದಾರೆ. ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿದರು.

ಕಲ್ದೊಡ್ಡಿಯ ಗುಣವತಿ ಮಾತನಾಡಿ, ಮೈಕ್ರೋ ಫೈನಾನ್ಸ್‌ನವರು ಹಗಲು ರಾತ್ರಿ ಎನ್ನದೇ ಮನೆಗೆ ಬರುತ್ತಾರೆ. ಸಾಲ ಮರುಪಾವತಿಸುವಂತೆ ಪೀಡಿಸುತ್ತಾರೆ. ಮನೆಯಲ್ಲಿ ಸಂಬಂಧಿಕರು, ಸ್ನೇಹಿತರು ಯಾರಿದ್ದರೂ ಅವರ ಮುಂದೆ ಮಾನ ಕಳೆಯುತ್ತಾರೆ ಎಂದು ಆಪಾದಿಸಿದರು.

ಸಂಘದ ಮಹಮ್ಮದ್ ಅತೀಕ್, ಶ್ರೀನಿವಾಸ್, ಜಾಕೀರ್ ಖಾನ್, ಗುಲ್ಜಾರ್, ಬಲ್ಕೀಸ್ ಬೇಗ್, ಶಾಹಿನಾಬಾನು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT