ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಕುಮಾರಸ್ವಾಮಿಯಿಂದ ಮಲತಾಯಿ ಧೋರಣೆ: ಕೃಷ್ಣೇಗೌಡ

Last Updated 17 ಡಿಸೆಂಬರ್ 2018, 13:58 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ತಾಲ್ಲೂಕಿನ ಆವತಿ ಹೋಬಳಿ ದಾನಿಹಳ್ಳಿಗೆ ಮಂಜೂರಾಗಿದ್ದ ಅಂಬೇಡ್ಕರ್ ವಸತಿ ಶಾಲೆಯನ್ನು ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ರಾಜಕೀಯ ದುರುದ್ದೇಶದಿಂದ ಬೇರೆ ಹೋಬಳಿಗೆ ವರ್ಗಾಯಿಸಲು ಮುಂದಾಗಿದ್ದಾರೆ ಎಂದು ಜೆಡಿಎಸ್‌ ರಾಜ್ಯಘಟಕದ ಕಾರ್ಯದರ್ಶಿ ಎಚ್.ಎನ್.ಕೃಷ್ಣೇಗೌಡ ಇಲ್ಲಿ ಸೋಮವಾರ ಆರೋಪಿಸಿದರು.

ಬಿ.ಬಿ.ನಿಂಗಯ್ಯ ಅವರು ಶಾಸಕರಾಗಿದ್ದಾಗ ದಾನಿಹಳ್ಳಿಗೆ ಅಂಬೇಡ್ಕರ್ ವಸತಿ ಶಾಲೆ ಮಂಜೂರು ಮಾಡಿಸಿದ್ದರು. ತಹಶೀಲ್ದಾರ್ ನೇತೃತ್ವದಲ್ಲಿ 7.11 ಎಕರೆ ಜಮೀನನ್ನು ಗುರುತು ಮಾಡಲಾಗಿತ್ತು. ಜಾಗದ ಸರ್ವೇ ನಡೆಸಿ, ಅಂದಾಜು ಪಟ್ಟಯನ್ನು ಅಧಿಕಾರಿಗಳು ಸಿದ್ಧ ಪಡಿಸಿದ್ದರು. ಕಟ್ಟಡ ನಿರ್ಮಾಣಕ್ಕಾಗಿ ₹15 ಕೋಟಿ ಅನುದಾನವು ಬಿಡುಗಡೆಯಾಗಿತ್ತು. ಆದರೆ ಈಗಿನ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ರಾಜಕೀಯ ದ್ವೇಷಕ್ಕಾಗಿ ವಸತಿ ಶಾಲೆಯನ್ನು ಬೇರೆಡೆಗೆ ವರ್ಗಾಯಿಸಲು ಕುತಂತ್ರ ನಡೆಸುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.

ಆವತಿ ಹೋಬಳಿಯಲ್ಲಿ ಬಡವರು ಹೆಚ್ಚಾಗಿದ್ದಾರೆ. 40 ದಲಿತ ಕಾಲೋನಿಗಳು ಇವೆ. ದಾನಿಹಳ್ಳಿಯಲ್ಲಿ ವಸತಿ ಶಾಲೆ ಆರಂಭವಾಗುವುದರಿಂದ ಈ ಭಾಗದ ದಲಿತರು, ಬಡಜನರಿಗೆ ಅನುಕೂಲವಾಗುತ್ತದೆ. ಶಾಸಕರು ಅದನ್ನು ಅರ್ಥ ಮಾಡಿಕೊಳ್ಳಬೇಕು. ಮಲತಾಯಿ ಧೋರಣೆಯನ್ನು ಬಿಡಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್‌ ಎಸ್‌ಸಿ, ಎಸ್‌ಟಿ ವಿಭಾಗದ ಮೂಡಿಗೆರೆ ತಾಲ್ಲೂಕು ಘಟಕದ ಅಧ್ಯಕ್ಷ ಹುಣಸೆಮಕ್ಕಿ ಲಕ್ಷ್ಮಣ್ ಮಾತನಾಡಿ, ನಗರದ ಬೈಪಾಸ್‌ ರಸ್ತೆಯ ಖಾಸಗಿ ಕಟ್ಟಡದಲ್ಲಿ ಆವತಿ ಅಂಬೇಡ್ಕರ್ ವಸತಿ ಶಾಲೆಯನ್ನು ತಾತ್ಕಾಲಿಕವಾಗಿ ಆರಂಭಿಸಲಾಗಿದೆ. ಅದಕ್ಕೆ ಮಾಸಿಕ ₹88 ಸಾವಿರ ಬಾಡಿಗೆ ನೀಡಲಾಗುತ್ತಿದೆ.

100 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹೀಗಿರುವಾಗ ಶಾಲೆಯನ್ನು ಬೇರೆಡೆಗೆ ವರ್ಗಾಯಿಸುವುದು ಸರಿಯಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.

ಸಿಪಿಐ ಮುಖಂಡ ರಮೇಶ್, ಕಾಂಗ್ರೆಸ್ ಮುಖಂಡ ಈರೇಶ್, ಜೆಡಿಎಸ್ ಕಾರ್ಯಕರ್ತ ನಾಗೇಶ್‌ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT