ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಭಾಪುರಿ ಪೀಠದಿಂದ ಸಾಮರಸ್ಯ ಬೋಧನೆ

ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ: ಸಿ.ಎಂ ಯಡಿಯೂರಪ್ಪ ಮೆಚ್ಚುಗೆ
Last Updated 7 ಮಾರ್ಚ್ 2020, 14:44 IST
ಅಕ್ಷರ ಗಾತ್ರ

ಬಾಳೆಹೊನ್ನೂರು (ಎನ್.ಆರ್.ಪುರ): ‘ಧರ್ಮಪೀಠಗಳಲ್ಲಿ ರಂಭಾಪುರಿ ಪೀಠ ಪ್ರಾಚೀನವಾಗಿದ್ದು, ಇದು ಸುಮಾರು 3,500 ವರ್ಷಗಳ ಇತಿಹಾಸ ಹೊಂದಿದೆ. ಈ ಪೀಠವು ಮಾನವ ಕುಲಕ್ಕೆ ಶಾಂತಿ, ಸಾಮರಸ್ಯದ ನೀತಿಯನ್ನು ಬೋಧಿಸುತ್ತಾ ಬಂದಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟರು.

ಇಲ್ಲಿನ ರಂಭಾಪುರಿ ಪೀಠದಲ್ಲಿ ಶನಿವಾರ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ರಥೋತ್ಸವದ ಅಂಗವಾಗಿ ನಡೆದ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಶಿವಾದಿತ್ಯ ಸಿದ್ಧಾಂತವನ್ನು ಬೋಧಿಸಿದ ಪ್ರಥಮ ಪೀಠ ಇದಾಗಿದೆ. ರೇಣುಕಾರ್ಯರು ಬೋಧಿಸಿದ ತತ್ವ ಸಿದ್ಧಾಂತ, ಸಾಮಾಜಿಕ ಚಿಂತನೆ ಎಲ್ಲಾ ವರ್ಗದ ಜನರಿಗೂ ದಾರಿದೀಪವಾಗಿದೆ. ಧರ್ಮಸೂತ್ರಗಳನ್ನು ಬೋಧಿಸುವ ಮೂಲಕ ಸುಸಂಸ್ಕೃತ, ಸದೃಢ ಸಮಾಜವನ್ನು ಕಟ್ಟಲು ಶ್ರಮಿಸಿದ ಕೀರ್ತಿ ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಈ ಪೀಠ ಎಲ್ಲರನ್ನೂ ಒಳಗೊಂಡ ಉತ್ತಮ ಆಚಾರ, ವಿಚಾರ ಮತ್ತು ಸಂಸ್ಕೃತಿಯನ್ನು ಸಮಾಜದ ಒಳಿತಾಗಿ ಬೋಧಿಸುತ್ತಿದೆ. ರಂಭಾಪುರಿ ಪೀಠದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಅಪೂರ್ವ ಸಾಂಸ್ಕೃತಿಕ ಕೇಂದ್ರವಾಗಿ ರೂಪಗೊಳ್ಳುತ್ತಿರುವುದು ಸಂತೋಷದ ಸಂಗತಿಯಾಗಿದೆ’ ಎಂದರು.

‘ರಾಜ್ಯದ ಆರುವರೆ ಕೋಟಿ ಜನರಿಗೆ, ರೈತರಿಗೆ ಅನುಕೂಲವಾಗುವ ಬಜೆಟ್ ಮಂಡಿಸಲಾಗಿದೆ. ನೀರಾವರಿಗೆ ಹೆಚ್ಚು ಆದ್ಯತೆ ನೀಡಲಾಗುವುದು. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನೀಡಲು ಶ್ರಮಿಸಲಾಗುವುದು. ಜಲಾಶಯಗಳ ನೀರಿನಿಂದ ಕೆರೆಕಟ್ಟೆಗಳನ್ನು ತುಂಬಿಸಿ ಅಂತರ್ಜಲ ಹೆಚ್ಚಿಸಲು ಆದ್ಯತೆ ನೀಡಿ ಕೃಷಿಗೆ ನೀರಾವರಿ ಪೂರೈಸಿ ರೈತರು ಸ್ವಾಭಿಮಾನದಿಂದ ಬದುಕಲು ಅವಕಾಶ ಕಲ್ಪಿಸಲಾಗುವುದು’ ಎಂದು ಯಡಿಯೂರಪ್ಪ ಹೇಳಿದರು.

ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ, ‘ರಂಭಾಪುರಿ ಬೆಳಗು’ ಸಂಚಿಕೆ ಬಿಡುಗಡೆ ಮಾಡಿ, ‘ವೀರಶೈವ ಮಠಗಳು ಮಾನವ ಜನಾಂಗದ ಸರ್ವರನ್ನೂ ಒಟ್ಟಾಗಿ ತೆಗೆದು ಕೊಂಡು ಹೋಗುತ್ತಿದ್ದು ಜಗತ್ತಿಗೆ ಶಾಂತಿಯನ್ನು ಬೋಧಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ’ ಎಂದರು.

‘ರೈಲ್ವೆ ಇಲಾಖೆ ಎಲ್ಲಾ ಪ್ರದೇಶಗಳನ್ನೂ ಜೋಡಿಸುವ ಕೆಲಸ ಮಾಡುತ್ತಿದೆ. ಮುಂದಿನ 10 ವರ್ಷಗಳಲ್ಲಿ ರೈಲ್ವೆ ಅಭಿವೃದ್ಧಿಗೆ ₹ 50ಲಕ್ಷ ಕೋಟಿ ವಿನಿಯೋಗ ಮಾಡಲಾಗುವುದು. ದೇಶದಲ್ಲಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಭೂಮಿಯನ್ನು ನೀಡಿ, ಶೇ 50ರಷ್ಟು ಅನುದಾನ ನೀಡಿದ ಏಕೈಕ ಮುಖ್ಯಮಂತ್ರಿ ಯಡಿಯೂರಪ್ಪ’ ಎಂದರು.

ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ವಿಶ್ವನಾಥ ಹಿರೇಮಠ, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಸಿ. ಮೃತ್ಯುಂಜಯಸ್ವಾಮಿ ಹಾಗೂ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಬಿ. ಗುರುಪ್ರಸಾದ್ ಅವರಿಗೆ ರಂಭಾಪುರಿ ಸ್ವಾಮೀಜಿ ಗುರುರಕ್ಷೆ ನೀಡಿ ಆಶೀರ್ವದಿಸಿದರು.

ಕನ್ನಡ ಸಂಸ್ಕೃತಿ ಸಚಿವ ಸಿ.ಟಿ. ರವಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಶಾಸಕ ಡಿ.ಎನ್.ಜೀವರಾಜ್, ಡಿ.ಎಸ್.ಸುರೇಶ್ ಎಡೆಯೂರು ರೇಣುಕ ಶಿವಾಚಾರ್ಯ, ಮಾದಿಹಳ್ಳಿ ಮಳೆಯೋಗೀಶ್ವರ ಶಿವಾಚಾರ್ಯ, ಶಿವಗಂಗೆಯ ಮಲಯ ಶಾಂತಮುನಿ ಶಿವಾಚಾರ್ಯ, ಎಂ.ಸಂಗಮೇಶ ಉತ್ತಂಗಿ ಅಖಿಲ ಭಾರತ ವೀರಶೈವ ಮಹಾಸಭಾದ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆರ್. ಗುರುದೇವ, ಶಿವಮೊಗ್ಗದ ಶಾಂತಾ ಆನಂದ ಇದ್ದರು.

ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು. ರಾತ್ರಿ ಗದಗದ ರಾಜಗುರು ಗುರುಸ್ವಾಮಿ ಕಲಕೇರಿ ಅವರಿಂದ ಸಂಗೀತ ಸೌರಭ ನಡೆಯಿತು. ನಂತರ ಹೊನ್ನಾಳಿ ತಾಲೂಕ ಕುಳಗಟ್ಟಿಯ ಕಲಾವಿದರಿಂದ ‘ಕಣ್ಣೀರಲ್ಲಿ ಕರಗಿದ ಮಾಂಗಲ್ಯ’ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT