ಕಣ್ಗಾವಲಿಗೆ ಸಿ.ಸಿ ಟಿವಿ ಕ್ಯಾಮೆರಾ ಇಲ್ಲ!

7
ಚಿಕ್ಕಮಗಳೂರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ

ಕಣ್ಗಾವಲಿಗೆ ಸಿ.ಸಿ ಟಿವಿ ಕ್ಯಾಮೆರಾ ಇಲ್ಲ!

Published:
Updated:
Deccan Herald

ಚಿಕ್ಕಮಗಳೂರು: ಪ್ರತಿನಿತ್ಯ ಬರೋಬ್ಬರಿ ಒಂದು ಸಾವಿರ ಬಸ್ಸುಗಳು, 50 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುವ ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಕಣ್ಗಾವಲಿಗೆ ಸಿ.ಸಿ.ಟಿವಿ ಕ್ಯಾಮೆರಾ ಇಲ್ಲ!

ನಿಲ್ದಾಣದಲ್ಲಿ ಸರಗಳ್ಳತನ, ಜೇಬಿನಿಂದ ಹಣ ಕಳವು(ಪಿಕ್‌ ಪಾಕೆಟ್‌), ಜಗಳ, ಕುಡುಕರ ಹಾವಳಿ, ಪೋಲಿಗಳ ಕಾಟದಂಥ ಜಂಜಡಗಳು ಇದ್ದೇ ಇರುತ್ತವೆ. ಸಿ.ಸಿ.ಟಿವಿ ಕ್ಯಾಮೆರಾ ಕಣ್ಗಾವಲು ಇದ್ದರೆ ಇಂಥ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ, ಪತ್ತೆಗೆ ನೆರವಾಗುತ್ತದೆ. ಸಿ.ಸಿ.ಟಿವಿ ಅಳವಡಿಸದಿರುವುದು ದುಷ್ಕರ್ಮಿಗಳು ತಪ್ಪಿಸಿಕೊಳ್ಳಲು ಅನುಕೂಲವಾಗಿದೆ.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರೆಕುಡಿಗೆ ಶಿವಣ್ಣಗೆ ನಿಲ್ದಾಣದಲ್ಲಿ ಹಿಗ್ಗಾಮುಗ್ಗಾ ಥಳಿಸಿರುವುದು, ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ನಿಲ್ದಾಣದಲ್ಲಿ ತಡರಾತ್ರಿಯಲ್ಲಿ ಮಚ್ಚು ಹಿಡಿದು ಓಡಾಡಿ ಭೀತಿ ಸೃಷ್ಟಿರುವ ಘಟನೆಗಳು ಕೆಲದಿನಗಳ ಹಿಂದೆ ನಡೆದಿವೆ. ಈ ಘಟನೆಗಳು ಜನರಲ್ಲಿ ಆತಂಕಕ್ಕೆ ಎಡೆಮಾಡಿದೆ.
ಜಿಲ್ಲಾ ಕೇಂದ್ರದ ಈ ನಿಲ್ದಾಣವು ಹಗಲಿರುಳು ಪ್ರಯಾಣಿಕರು ಗಿಜಿಗುಡುತ್ತದೆ. ಧರ್ಮಸ್ಥಳ, ಸುಬ್ರಹ್ಮಣ್ಯ, ಶೃಂಗೇರಿ, ಕಳಸ, ಹೊರನಾಡು ಮೊದಲಾದ ಧಾರ್ಮಿಕ ಕ್ಷೇತ್ರಗಳು ಮತ್ತು ವಿವಿಧೆಡೆಗಳಿಗೆ ತೆರಳುವ ಪ್ರಯಾಣಿಕರ ದಟ್ಟಣೆ ಇದ್ದೇ ಇರುತ್ತದೆ.

‘ನಮ್ಮದು ಮೂಡಿಗೆರೆ. ಕಾಲೇಜಿಗೆ ಚಿಕ್ಕಮಗಳೂರಿಗೆ ಬರುತ್ತೇನೆ. ನಿಲ್ದಾಣದಲ್ಲಿ ಕಳ್ಳಕಾಕರ ಕಾಟ ಇದೆ. ಸ್ವಲ್ಪ ಯಾಮರಿದರೂ ಪರ್ಸು, ಬ್ಯಾಗು, ಸರ ಇತ್ಯಾದಿ ಎಗರಿಸಿಬಿಡುತ್ತಾರೆ. ಪುಂಡರ ಉಪಟಳವೂ ಇದೆ. ನಿಲ್ದಾಣದಲ್ಲಿ ಪೊಲೀಸರು ಇದ್ದರೂ ಅವರಿಗೂ ಚಳ್ಳೆಹಣ್ಣು ತಿನ್ನಿಸಿ ಕಳವು ಮಾಡುವ ಚಾಲಾಕಿಗಳು ಇಲ್ಲಿದ್ದಾರೆ. ಬಹಳ ಹುಷಾರಾಗಿಬೇಕು’ ಎಂದು ಐಡಿಎಸ್‌ಜಿ ಕಾಲೇಜಿನ ವಿದ್ಯಾರ್ಥಿನಿ ಪೂರ್ಣಿಮಾ ಹೇಳುತ್ತಾರೆ.

‘ನಿಲ್ದಾಣದಲ್ಲಿ ಮಹಿಳೆ ಮಾರಕಾಸ್ತ್ರ ಹಿಡಿದು ಓಡಾಡಿದ್ದ ವಿಡಿಯೊ ತುಣಕು ವ್ಯಾಟ್ಸಪ್‌ನಲ್ಲಿ ವೈರಲ್‌ ಆಗಿತ್ತು. ಅದನ್ನು ನೋಡಿದರೆ ಎಂಥವರೂ ಬೆಚ್ಚಿಬೀಳುವಂತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜನರ ಸುರಕ್ಷತೆ ಇಲ್ಲದಂತಾಗಿದೆ’ ಎಂದು ಕಡೂರಿನ ವರ್ತಕ ಸುಬ್ರಹ್ಮಣ್ಯ ಆಕ್ರೋಶ ವ್ಯಕ್ತಪಡಿಸುತ್ತಾರೆ. 

ಪುಡಾರಿಗಳು, ವ್ಯಸನಿಗಳು ಗುಟ್ಕಾ ತಿಂದು ನಿಲ್ದಾಣದ ಕೆಲವೆಡೆ ಗೋಡೆಗಳ ಮೇಲೆ ಉಗಿದಿದ್ದಾರೆ. ನಿಲ್ದಾಣದ ಆಸುಪಾಸಿನಲ್ಲಿ ನಿರಾಂತಕವಾಗಿ ಬೀಡಿ, ಸಿಗರೇಟು ಸೇದುತ್ತಾರೆ. ಕುಡುಕರು, ನಿರ್ಗತಿಕರ ಕಿರಿಕಿರಿ ಇದೆ. ಇದಾವುದಕ್ಕೂ ಕಡಿವಾಣ ಬಿದ್ದಿಲ್ಲ.
‘ನಿಲ್ದಾಣದಲ್ಲಿ ಕಾವಲಿಗೆ ಪೊಲೀಸರು ಇರುತ್ತಾರೆ. ಅಪಾರ ಜನಸಂದಣಿಯನ್ನೂ ನಿಭಾಯಿಸುವುದು ಅವರಿಗೂ ಸವಾಲು. ಅಪರಾಧ ಕೃತ್ಯಗಳ ನಿಗಾ ನಿಟ್ಟಿನಲ್ಲಿ ಕಡ್ಡಾಯವಾಗಿ ಸಿ.ಸಿ.ಟಿವಿ ಅಳವಡಿಸಬೇಕು. ನಿಲ್ದಾಣದಲ್ಲಿ ರಾತ್ರಿ ಗಸ್ತಿಗೆ ಹೆಚ್ಚು ಪೊಲೀಸರನ್ನು ನಿಯೋಜಿಸಬೇಕು’ ಎಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿಯೊಬ್ಬರು ಹೇಳುತ್ತಾರೆ.

‘ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಕೆಗೆ ಪ್ರಸ್ತಾವ’
‘ನಿಲ್ದಾಣದಲ್ಲಿ ಸಿ.ಸಿ. ಅಳವಡಿಸಲು ಕ್ರಮವಹಿಸುವಂತೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರಿಗೆ ಮನವಿ ಮಾಡಲಾಗಿದೆ’ ಎಂದು ಚಿಕ್ಕಮಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಅನಿಲ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿಲ್ದಾಣದಲ್ಲಿ ಈಚೆಗೆ ನಡೆದ ಎರಡು ಘಟನೆಗಳು, ‘ಪಿಕ್‌ಪಾಕೆಟ್‌’, ಸರಗಳ್ಳತನ ಇತರ ಅಪರಾಧ ಪ್ರಕರಣಗಳು ವರದಿಯಾಗಿರುವುದನ್ನು ಉಲ್ಲೇಖಿಸಿ ಪತ್ರ ಬರೆಯಲಾಗಿದೆ. ನಿಲ್ದಾಣದ ವಿವಿಧೆಡೆ ಕನಿಷ್ಠ 12ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸುವ ಅಗತ್ಯ ಇದೆ. ಜಿಲ್ಲಾಕೇಂದ್ರಗಳ ಕೆಲ ನಿಲ್ದಾಣಗಳಲ್ಲಿ ಸಿ.ಸಿ. ಟಿವಿ ಕ್ಯಾಮೆರಾ ಇಲ್ಲ. ಜಿಲ್ಲಾಕೇಂದ್ರಗಳ ಎಲ್ಲ ನಿಲ್ದಾಣಗಳಲ್ಲಿ ಅಳವಡಿಸಲು ಟೆಂಡರ್‌ ಆಹ್ವಾನಕ್ಕೆ ಕೇಂದ್ರ ಕಚೇರಿಯಲ್ಲಿ ಪ್ರಕ್ರಿಯೆ ನಡೆದಿದೆ’ ಎಂದು ತಿಳಿಸಿದರು.

 

 

 

 

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !