ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು - ನಿರ್ವಹಣೆ ಕೊರತೆ:‌ ನಲುಗಿದ ಉದ್ಯಾನ

ಚಿಕ್ಕಮಗಳೂರು ನಗರದಲ್ಲಿ 142 ಉದ್ಯಾನಗಳು l ಮದ್ಯವ್ಯಸನಿಗಳ ತಾಣವಾಗಿ ಮಾರ್ಪಾಡು
Last Updated 11 ಅಕ್ಟೋಬರ್ 2021, 2:03 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದಲ್ಲಿ 142 ಉದ್ಯಾನಗಳಿವೆ. ಬಹುತೇಕ ಉದ್ಯಾನ ಗಳು ನಿರ್ವಹಣೆ ಕೊರತೆಯಿಂದ ನಲುಗುತ್ತಿವೆ. ಉದ್ಯಾನಗಳಲ್ಲಿ ಕುರುಚಲು ಗಿಡ, ಗಂಟಿಗಳು ಬೆಳೆದಿವೆ. ಅನೈತಿಕ ಚಟುವಟಿಕೆಗಳ ಕೇಂದ್ರ ಗಳಾಗಿವೆ. ಕೆಲವಂತೂ ‘ಉದ್ಯಾನ’ ಹೆಸರಿಗೆ ಕಪ್ಪುಚುಕ್ಕೆಯಂತೆ ಇವೆ.

ನಗರದ ಕೋಟೆ ಬಡವಾಣೆಯ ಕುವೆಂಪು ಉದ್ಯಾನದೊಳಗೆ ಕಾಲಿಡುತ್ತಿದ್ದಂತೆ ಬಲಭಾಗದಲ್ಲಿ ಕಸದ ರಾಶಿ ಸ್ವಾಗತಿಸುತ್ತದೆ. ಎಡ ಭಾಗದಲ್ಲಿ ಮಕ್ಕಳ ಆಟಿಕೆಗಳು ಮುರಿದು ಬಿದ್ದಿರುವುದು ಕಾಣುತ್ತದೆ. ಮಾತ್ರವಲ್ಲ, ಬಿಡಾಡಿ ನಾಯಿಗಳ ಆವಾಸ ಸ್ಥಾನವೂ ಆಗಿದೆ. ಕುವೆಂಪು ಪುತ್ಥಳಿಯಲ್ಲಿ ಅಲ್ಲಲ್ಲಿ ಬಣ್ಣ ಹೋಗಿದ್ದು, ಬಿಳಿ ಮಚ್ಚೆಯಂತೆ ಕಾಣುತ್ತಿದೆ. ಪುತ್ಥಳಿಯಿರುವ ಕಟ್ಟೆಯ ಟೈಲ್ಸ್‌ಗಳು ಕಿತ್ತುಹೋಗಿವೆ.

ಕೋಟೆ ಬಡಾವಣೆಯ ಕುಡಿಯುವ ನೀರಿನ ಟ್ಯಾಂಕ್ ಇರುವ ಉದ್ಯಾನದಲ್ಲಿನ ಅರಳಿಕಟ್ಟೆ ಕಸದ ತೊಟ್ಟಿಯಂತಾಗಿದೆ. ಚರಂಡಿ ಹಾಗೂ ವಾಕಿಂಗ್‌ ಟ್ರ್ಯಾಕ್‌ನಲ್ಲಿ ಸಂಪೂರ್ಣವಾಗಿ ಪಾರ್ಥೇನಿಯಂ ಗಿಡಗಳು ಬೆಳೆದಿವೆ. ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು, ತಿನಿಸುಗಳ ಪ್ಲಾಸ್ಟಿಕ್ ಪೊಟ್ಟಣಗಳು ಬಿದ್ದಿವೆ. ಟ್ಯಾಂಕಿನ ಎಡಬದಿ ನೀರು ನಿಂತು ಕೆರೆಯಂತಾಗಿದೆ.

ರಾಮೇಶ್ವರ ನಗರದ ಆರಂಭದಲ್ಲಿ ಸಿಗುವ ಸಣ್ಣ ಉದ್ಯಾನವನ್ನು ಮಕ್ಕಳು ಕ್ರಿಕೆಟ್ ಆಡಲು ಬಳಸುತ್ತಿದ್ದಾರೆ. ಮಳೆ ಬಂದರೆ ನಿಲ್ಲಲು ಅನುಕೂಲವಾಗುವಂತೆ ಒಂದು ಗುಡಾರವನ್ನು ನಿರ್ಮಿಸಿ ಕೊಂಡಿದ್ದಾರೆ. ಉದ್ಯಾನದಲ್ಲಿ ಆಲಂಕಾರಿಕ ಗಿಡಗಳು, ವಾಕಿಂಗ್ ಟ್ರ್ಯಾಕ್, ಬೆಂಚ್‌ಗಳು ಇಲ್ಲ.

ರಾಮೇಶ್ವರ ನಗರದ ಐಶ್ವರ್ಯ ಉದ್ಯಾನ ಪಾಳು ಬಿದ್ದಿದೆ. ಉದ್ಯಾನದಲ್ಲಿ ಆಳೆತ್ತರಕ್ಕೆ ಗಿಡ, ಗಂಟಿಗಳು ಬೆಳೆದಿದ್ದು, ನಗರದೊಳಗಿನ ಕಾಡಿನಂತಾಗಿದೆ. ಮರದ ರೆಂಬೆಗಳು, ಬಳ್ಳಿಗಳು ಉದ್ಯಾನದ ಪ್ರವೇಶ ದ್ವಾರದ ಅರ್ಧ ಭಾಗವನ್ನೇ ಮುಚ್ಚಿಹಾಕಿವೆ. ಹುಳ, ಸರೀಸೃಪಗಳ ಆವಾಸ ಕೇಂದ್ರವಾಗಿ ಮಾರ್ಪಟ್ಟಿದೆ. ಉದ್ಯಾನದೊಳಗೆ ಹೆಚ್ಚು ಪೊದೆಗಳಿದ್ದು, ಜನರು ತೆರಳಲು ಸಾಧ್ಯವಾಗದ ಪರಿಸ್ಥಿತಿ ಇದೆ.

ಗೌರಿ ಕಾಲುವೆಯ 60 ಅಡಿ ರಸ್ತೆ ಪಕ್ಕದ ನಗರಸಭೆ ಉದ್ಯಾನವು ಗಿಡ, ಮರಗಳಿಲ್ಲದೆ ಮೈದಾನದಂತಿದೆ. ಉದ್ಯಾನದೊಳಗೆ ಅಂಗನವಾಡಿ ಕೇಂದ್ರ ಇದೆ. ಉದ್ಯಾನದ ಮಧ್ಯದಲ್ಲಿನ ಧ್ವಜ ಸ್ತಂಭ ಕುಸಿದಿದೆ. ಮಕ್ಕಳ ಆಟಿಕೆಗಳು ನೆಪ ಮಾತ್ರಕ್ಕೆ ಇವೆ. ಜೋಕಾಲಿಗಳಲ್ಲಿ ಕಂಬಿ ಮಾತ್ರ ಇವೆ. ಜೋಕಾಲಿಯೇ ಇಲ್ಲ. ಏತ–ಪಾತ ಆಟಿಕೆಯಲ್ಲಿ ಕೂರುವ ಪ್ಲೇಟ್‌ ಇಲ್ಲ. ಜಾರುಬಂಡೆಯಲ್ಲಿನ ಕಬ್ಬಿಣದ ತಗಡು ತುಂಡಾಗಿ ಎದ್ದಿದೆ. ಅದನ್ನು ಗಮನಿಸಿದೆ ಮಕ್ಕಳು ಜಾರಿದಲ್ಲಿ ಅಪಾಯ ಎದುರಾಗುವ ಸಾಧ್ಯತೆ ಇದೆ. ಈ ಉದ್ಯಾನದಲ್ಲಿ ಸಂಜೆಯಿಂದಲೇ ಪುಂಡರು ಗುಂಪುಗೂಡುತ್ತಾರೆ.

ಹಿರೇಮಗಳೂರಿನ 4ನೇ ಹಂತದ ವಸತಿ ಬಡಾವಣೆಯಲ್ಲಿನ ತ್ರಿಭುಜಾ ಕಾರದ ಉದ್ಯಾನದ ದಡಗಳಲ್ಲಿ ಮರಗಳಿವೆ. ಉದ್ಯಾನದ ಮಧ್ಯ ದಲ್ಲಿನ ಕಾರಂಜಿ ತಳದಲ್ಲಿ ಕೊಳಚೆ ನೀರು ನಿಂತಿದ್ದು, ಹುಲ್ಲು, ಗಿಡಗಳು ಬೆಳದುಕೊಂಡಿವೆ. ಪ್ಲಾಸ್ಟಿಕ್ ಬಾಟಲಿಗಳು ಬಿದ್ದಿವೆ. ಸೊಳ್ಳೆಗಳ ಉತ್ಪತ್ತಿ ಸ್ಥಳವಾಗಿದೆ.

ಎಐಟಿ ವೃತ್ತದ ಸಮೀಪದ ಗೃಹ ಮಂಡಳಿ ಬಡಾವಣೆಯಲ್ಲಿನ ಉದ್ಯಾನ ಗೋಮಾಳದಂತಾಗಿದೆ. ಉದ್ಯಾನದ ಸುತ್ತ ಮರಗಳು ಬೆಳೆದಿವೆ. ಉದ್ಯಾನದ ಮುಖ್ಯದ್ವಾರ ದೊಡ್ಡದಾಗಿದೆ. ನಾಲ್ಕು ಚಕ್ರದ ವಾಹನಗಳು, ದನ–ಕರುಗಳು ಸರಾಗವಾಗಿ ಒಳ ಪ್ರವೇಶಿಸಬಹುದು. ಕೆಲವರು ದ್ವಿಚಕ್ರವಾಹನಗಳನ್ನು ಉದ್ಯಾನದೊಳಗೆ ಕೊಂಡೊಯ್ಯುತ್ತಾರೆ. ಶಾಲಾ–ಕಾಲೇಜು ವಿದ್ಯಾರ್ಥಿಗಳು ಉದ್ಯಾನದ ಮಧ್ಯದಲ್ಲಿ ಕ್ರಿಕೆಟ್ ಆಡುತ್ತಾರೆ. ಉಳಿಕೆ ಜಾಗದಲ್ಲಿ ಬಿಡಾಡಿ ಹಸುಗಳ ದಂಡು ಇರುತ್ತದೆ.

ನಗರಸಭೆ ಆವರಣದ ಉದ್ಯಾನ ಹಾಗೂ ವಿಜಯಪುರದ ತಿಲಕ್‌ ಉದ್ಯಾನದಲ್ಲಿ ಪ್ರೇಮಿಗಳ ಕಾರುಬಾರು ಹೆಚ್ಚು. ಕೆಲವೊಮ್ಮೆ ಪ್ರೇಮಿಗಳು ಸಭ್ಯತೆ ಎಲ್ಲೆ ಮೀರು ವರ್ತಿಸುತ್ತಾರೆ. ಸಾರ್ವಜನಿಕರಿಗೆ ಇರಿಸು–ಮುರಿಸು ಉಂಟಾಗುತ್ತದೆ. ಪೊಲೀಸ್ ಬೀಟ್ ಹೆಚ್ಚಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

‘₹2.5 ಕೋಟಿ ವೆಚ್ಚದಲ್ಲಿ ನವೀಕರಣ’

ನಗರದ ಉದ್ಯಾನಗಳ ದುರಸ್ತಿ ಹಾಗೂ ಅಭಿವೃದ್ಧಿಗೆ ಹತ್ತು ವರ್ಷಗಳಿಂದ ಹಣ ವ್ಯಯಿಸಲಾಗಿದೆ. ಆದರೆ, ಉದ್ಯಾನಗಳ ಪೂರ್ಣ ಅಭಿವೃದ್ಧಿಯಾಗಿಲ್ಲ. ನಗರವನ್ನು ಸುಂದರವಾಗಿಸಬೇಕು. ಪ್ರವಾಸಿಗರನ್ನು ಸೆಳೆಯಬೇಕು ಎನ್ನುವ ಉದ್ದೇಶದಿಂದ ನಗರಸಭೆ ಉದ್ಯಾನವನ್ನು ₹2.5 ಕೋಟಿ ವೆಚ್ಚದಲ್ಲಿ ನವೀಕರಿಸಲಿದೆ. ಈಗಾಗಲೇ ₹1 ಕೋಟಿ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಅದಾದ ನಂತರ ನಗರದ ಉದ್ಯಾನಗಳನ್ನು ಒಂದೊಂದಾಗಿ ದುರಸ್ತಿ ಹಾಗೂ ನವೀಕರಣ ಮಾಡಲಾಗುವುದು. ಅವುಗಳ ನಿರ್ವಹಣೆಗೆ ನೂತನ ಸಮಿತಿ ರಚಿಸಲಾಗುವುದು ಎನ್ನುತ್ತಾರೆ ನಗರಸಭೆ ಆಯುಕ್ತ ಬಸವರಾಜ್.

‘ಶೀಘ್ರ ದುರಸ್ತಿಗೊಳಿಸಿ’

60 ಅಡಿ ರಸ್ತೆ ಬದಿಯ ಉದ್ಯಾನದೊಳಗೆ ಅಂಗನವಾಡಿ ಕೇಂದ್ರ ಇದೆ. ಉದ್ಯಾನದೊಳಗೆ ಅಳವಡಿಸಿರುವ ಮಕ್ಕಳ ಆಟಿಕೆಗಳು ಹಾಳಾಗಿ ಐದು ವರ್ಷಗಳಾಗಿವೆ. ಅವುಗಳನ್ನು ಶೀಘ್ರ ದುರಸ್ತಿಗೊಳಿಸಬೇಕು. ಉದ್ಯಾನ ವಿಂಗಡಿಸಿ, ಬಗೆ ಬಗೆಯ ಹೂ, ಆಲಂಕಾರಿಕ ಗಿಡಗಳನ್ನು ಬೆಳೆಸಬೇಕು.

ಎನ್.ಶೋಭಾ, 60 ಅಡಿ ರಸ್ತೆ ನಿವಾಸಿ

‘ಟ್ರ್ಯಾಕ್‌, ಚರಂಡಿ ಸ್ವಚ್ಛಗೊಳಿಸಿ’

ಕೋಟೆ ಬಡವಾಣೆಯ ಕುಡಿಯುವ ನೀರಿನ ಟ್ಯಾಂಕ್ ಇರುವ ಉದ್ಯಾನದೊಳಗೆ ನೀರು ನಿಲ್ಲದಂತೆ ಮಣ್ಣು ಹಾಕಬೇಕು. ವಾಕಿಂಗ್ ಟ್ರ್ಯಾಕ್‌, ಚರಂಡಿ ಸ್ವಚ್ಛಗೊಳಿಸಬೇಕು. ಕುವೆಂಪು ಉದ್ಯಾನದಲ್ಲಿ ಕುವೆಂಪು ಪುತ್ಥಳಿಗೆ ಹೊಂದಿಕೊಂಡಂತಿರುವ ಬೆಂಚನ್ನು ತೆರವುಗೊಳಿಸಬೇಕು. ಪುತ್ಥಳಿಗೆ ಬಣ್ಣ ಬಳಿಯಬೇಕು. ಅದರ ಕಟ್ಟೆ ದುರಸ್ತಿಗೊಳಿಸಬೇಕು.

ಮಲ್ಲೇಶ್, ಕೋಟೆ ನಿವಾಸಿ

‘ನಿರ್ವಹಣೆಗೆ ಒತ್ತು ನೀಡಿ’

ನಗರದಲ್ಲಿನ ಬಹುತೇಕ ಉದ್ಯಾನಗಳನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ತೆರವು ಕಾರ್ಯಚರಣೆ ನಡೆಸಬೇಕು. ಉದ್ಯಾನಗಳ ನಿರ್ವಹಣೆಗೆ ಒತ್ತು ನೀಡಬೇಕು.

ಪುಟ್ಟಸ್ವಾಮಿ, ಹಿರೇಮಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT