ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೃಂಗೇರಿ | ಬಾವುಟ ಕಟ್ಟಲು ಅನುಮತಿ ಅಗತ್ಯ: ಎಎಸ್ಪಿ

ಶೃಂಗೇರಿ: ಮೂರು ಗಲಾಟೆ ಪ್ರಕರಣಗಳ ಆರೋಪಿ ಗಡಿಪಾರಿಗೆ ಕ್ರಮ
Last Updated 9 ನವೆಂಬರ್ 2022, 6:52 IST
ಅಕ್ಷರ ಗಾತ್ರ

ಶೃಂಗೇರಿ: ‘ಸಾರ್ವಜನಿಕ ಸ್ಥಳಗಳಲ್ಲಿ ಬಾವುಟಗಳನ್ನು ಕಟ್ಟುವಾಗ ಅನುಮತಿ ಪಡೆಯಬೇಕು. ಯಾರಿಗೂ ತೊಂದರೆಯಾಗದಂತೆ ಕಾರ್ಯನಿರ್ವಹಿಸುವಲ್ಲಿ ಪೊಲೀಸರು ನೆರವಾಗುತ್ತಾರೆ’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಹೇಳಿದರು.

ಶೃಂಗೇರಿಯ ಪೊಲೀಸ್ ಠಾಣೆಯಲ್ಲಿ ಹಿಂದುತ್ವ ಪರ ಸಂಘಟನೆ ಮತ್ತು ಮುಸ್ಲಿಂ ಪರ ಸಂಘಟನೆ ಮುಖಂಡರೊಂದಿಗೆ ನಡೆದ ತುರ್ತು ಶಾಂತಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ಜಾಗೃತ ನಾಗರಿಕ ಸಮುದಾಯಗಳಲ್ಲಿ ಪರಸ್ಪರ ಸಂತೋಷದ ಕೊಡು-ಕೊಳ್ಳುವಿಕೆ ಇದ್ದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಇರುವುದಿಲ್ಲ. ಯಾವುದೇ ಧರ್ಮದ ಆಚರಣೆ ಮತ್ತು ಸಿದ್ಧಾಂತಗಳು ಮತ್ತೊಂದು ಧರ್ಮೀಯರಿಗೆ ನೋವು ತರುವಂತೆ ಇರಬಾರದು. ಸಾರ್ವಜನಿಕರು ಪೊಲೀಸರಿಗೆ ಸಹಕರಿಸಬೇಕು. ಶೃಂಗೇರಿ ಧಾರ್ಮಿಕ ಕ್ಷೇತ್ರವಾಗಿದ್ದು, ಎಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕು. ಕಾರ್ಯಕ್ರಮ ಚಿಕ್ಕದಿರಲಿ, ದೊಡ್ಡ ಮಟ್ಟದಲ್ಲಿರಲಿ ಅಚ್ಚುಕಟ್ಟಾಗಿ ಗೊಂದಲವಿಲ್ಲದೆ ನಡೆಸುವ ಪ್ರಮುಖ ಜವಾಬ್ದಾರಿ ಸಾರ್ವಜನಿಕರ ಮೇಲಿದೆ’ ಎಂದರು.

ಯಾವುದೇ ವ್ಯಕ್ತಿಯ ಮೇಲೆ ಗಲಾಟೆಯ ಮೂರು ಪ್ರಕರಣಗಳು ದಾಖಲಾಗಿದ್ದರೆ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಲು ಅವಕಾಶವಿದೆ. ಇದಕ್ಕೆ ಯಾರೂ ಸಹ ಅವಕಾಶ ಮಾಡಿಕೊಡಬಾರದು ಎಂದರು.

ಆಸ್ಪತ್ರೆಯ ಒಳಗೆ ಚಿಕಿತ್ಸೆಗೆ ದಾಖಲಾಗಿರುವ ಶ್ರೀರಾಮ ಸೇನೆಯ ಮುಖಂಡ ಅರ್ಜುನ್‍ಗೆ ಡಿವೈಎಸ್ಪಿ ಗುಂಜನ್ ಆರ್ಯ ಅವರು ಕಾಲರ್‌ ಪಟ್ಟಿಗೆ ಕೈ ಹಾಕಿ ಎಳೆದು ವಿಚಾರಣೆ ಮಾಡುವುದು ತಪ್ಪು ಎಂದು ಪಟ್ಟಣ ಪಂಚಾಯಿತಿ ಸದಸ್ಯ ವೇಣುಗೋಪಾಲ್ ಆರೋಪಿಸಿದರು.

ಠಾಣೆಯಲ್ಲಿ ಡಿವೈಎಸ್ಪಿ ಗುಂಜನ್ ಆರ್ಯ ಮತ್ತು ಹಿಂದುತ್ವ ಪರ ಸಂಘಟನೆಯವರ ನಡುವೆ ಮಾತಿನ ಚಕಮಕಿ ನಡೆಯಿತು. ತುರ್ತು ಸಭೆಯಲ್ಲಿ ಡಿವೈಎಸ್ಪಿ ಗುಂಜನ್ ಆರ್ಯ, ಆಲ್ದೂರು ಠಾಣೆಯ ಇನ್‍ಸ್ಪೆಕ್ಟರ್ ಸತ್ಯನಾರಾಯಣ, ಶೃಂಗೇರಿ ಠಾಣೆಯ ಸಬ್ ಇನ್‍ಸ್ಪೆಕ್ಟರ್ ಅಶೋಕ್ ಕುಮಾರ್, ಭರ್ಮಪ್ಪ ಬೆಳಗಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT