ಶುಕ್ರವಾರ, ನವೆಂಬರ್ 22, 2019
20 °C
ಸ್ಫೋಟಕಗಳ ಉಗ್ರಾಣ ನಿರ್ಮಾಣಕ್ಕೆ ವಿರೋಧ

ಪರವಾನಗಿ ರದ್ದುಗೊಳಿಸಲು ಒತ್ತಾಯ

Published:
Updated:
Prajavani

ಚಿಕ್ಕಮಗಳೂರು: ತಾಲ್ಲೂಕಿನ ಲಕ್ಯಾ ಹೋಬಳಿಯ ಸರಪನಹಳ್ಳಿ ಸರ್ವೇ ನಂಬರ್‌ 42ರಲ್ಲಿ ಸ್ಫೋಟಕಗಳ ಉಗ್ರಾಣ ನಿರ್ಮಿಸಲು ಖಾಸಗಿ ಸಂಸ್ಥೆಗೆ ನೀಡಿರುವ ಪರವಾನಗಿಯನ್ನು ಜಿಲ್ಲಾಡಳಿತ ರದ್ದುಗೊಳಿಸಬೇಕು ಎಂದು ರೈತ ಮುಖಂಡ ಗುರುಶಾಂತಪ್ಪ ಇಲ್ಲಿ ಬುಧವಾರ ಒತ್ತಾಯಿಸಿದರು.

ಸರಪನಹಳ್ಳಿಯ ಈ ಸರ್ವೇ ನಂಬರ್‌ನ ಮೂರು ಎಕರೆ ಜಾಗದಲ್ಲಿ ಖಾಸಗಿ ಸಂಸ್ಥೆಯವರು ಸ್ಫೋಟಕಗಳ ದಾಸ್ತಾನು ಮತ್ತು ಸರಬರಾಜು ಮಾಡಲು ಮುಂದಾಗಿದ್ದಾರೆ. ಈ ಜಾಗದ ಸಮೀಪ ಚುರ್ಚೆಗುಡ್ಡ ಕಾವಲು ಅರಣ್ಯ, ಕೋಡಿಕಟ್ಟೆ, ಕೃಷಿ ಜಮೀನು ಮತ್ತು ಅದರಲ್ಲಿ ವಾಸದ ಮನೆಗಳಿವೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ಸ್ಫೋಟಕಗಳ ಉಗ್ರಾಣ ನಿರ್ಮಾಣಕ್ಕೆ ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ಬಿಳೇಕಲ್ಲಹಳ್ಳಿ ಪಂಚಾಯಿತಿ ಗ್ರಾಮಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಧ್ಯಕ್ಷರು, ಸದಸ್ಯರ ಗಮನಕ್ಕೆ ತಾರದೇ, ಉಗ್ರಾಣ ನಿರ್ಮಾಣಕ್ಕೆ ನಿರಪೇಕ್ಷಣಾ ಪತ್ರ ನೀಡಿದ್ದಾರೆ. ಈ ಸ್ಥಳಕ್ಕೆ ರಾಜಸ್ವ ನೀರೀಕ್ಷಕರು ಗ್ರಾಮಸ್ಥರಲ್ಲದವರನ್ನು ಕರೆತಂದು ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರ ಸಹಿ ನಕಲು ಮಾಡಿದ್ದಾರೆ. ಉಗ್ರಾಣ ನಿರ್ಮಾಣಕ್ಕೆ ಅನುಮತಿ ನೀಡಬಹುದೆಂದು ಸರ್ಕಾರಕ್ಕೆ ಅಭಿಪ್ರಾಯ ತಿಳಿಸಿದ್ದಾರೆ. ಅವರಿಬ್ಬರ ವಿರುದ್ಧ ಜಿಲ್ಲಾಡಳಿತ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಸ್ಫೋಟಕಗಳ ಉಗ್ರಾಣ ನಿರ್ಮಿಸಲು ನೀಡಿರುವ ಪರವಾನಗಿ ರದ್ದುಗೊಳಿಸಬೇಕು. ಇಲ್ಲವಾದಲ್ಲಿ ಬಿಳೇಕಲ್ಲಹಳ್ಳಿ ಗ್ರಾಮಸ್ಥರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುಖಂಡ ರವೀಶ್ ಕ್ಯಾತನಬೀಡು ಮಾತನಾಡಿ, ಈ ಸಂಸ್ಥೆಯವರು ಮೊದಲು ಅಜ್ಜಂಪುರದಲ್ಲಿ ಉಗ್ರಾಣ ಸ್ಥಾಪಿಸಲು ಮುಂದಾಗಿದ್ದರು. ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು ಎಂದರು.

ಸಿಪಿಐ ಮುಖಂಡ ಬಿ.ಅಮ್ಜದ್, ಬಿಳೇಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭರತ್, ಗ್ರಾಮಸ್ಥರಾದ ಹಾಲಪ್ಪ, ಪ್ರಸನ್ನ, ಯೋಗೀಶ್ ಇದ್ದರು.

ಪ್ರತಿಕ್ರಿಯಿಸಿ (+)