ದೇವನಗೂಲ್‌: ಅಂಗನವಾಡಿ ಕೇಂದ್ರಕ್ಕೆ ಬೇಕು ಕಾಯಕಲ್ಪ

7
ನಾಗರಹಾವು ಕಂಡು ಭೀತರಾದ ಮಕ್ಕಳು

ದೇವನಗೂಲ್‌: ಅಂಗನವಾಡಿ ಕೇಂದ್ರಕ್ಕೆ ಬೇಕು ಕಾಯಕಲ್ಪ

Published:
Updated:
Deccan Herald

ಮೂಡಿಗೆರೆ: ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿರುವ ದೇವನಗೂಲ್‌ ಅಂಗನವಾಡಿ ಕೇಂದ್ರವು ಅವ್ಯವಸ್ಥೆಯ ಆಗರವಾಗಿದ್ದು, ಕಟ್ಟಡಕ್ಕೆ ಕಾಯಕಲ್ಪ ಅಗತ್ಯವಾಗಿದೆ. ಕೊಟ್ಟಿಗೆಹಾರ ಬಸ್‌ ನಿಲ್ದಾಣದ ಪಕ್ಕದಲ್ಲಿರುವ ಹಳೆಯ ಕಟ್ಟಡದಲ್ಲಿ ದೇವನಗೂಲ್‌ ಅಂಗನವಾಡಿ ಕೇಂದ್ರ ಹಾಗೂ ಸಾರ್ವಜನಿಕ ಗ್ರಂಥಾಲಯವು ಕಾರ್ಯನಿರ್ವಹಿಸುತ್ತಿದ್ದು, ಅತ್ಯಂತ ಹಳೆಯದಾಗಿರುವ ಕಟ್ಟಡವು ಯಾವಾಗ ಕುಸಿಯುತ್ತದೆ ಎಂಬ ಜೀವ ಭಯದಲ್ಲಿ ಪುಟಾಣಿ ಮಕ್ಕಳು ಬಾಲ್ಯವನ್ನು ಕಳೆಯುವಂತಾಗಿದೆ.

ಅಂಗನವಾಡಿ ಕೇಂದ್ರಕ್ಕೆ ಕಾಂಪೌಂಡ್‌ ರಕ್ಷಣೆಯಿಲ್ಲದ ಕಾರಣ, ಹಾವುಗಳು ಸೇರಿದಂತೆ ವಿಷ ಜಂತುಗಳು ಅಂಗನವಾಡಿ ಕೇಂದ್ರಗಳಿಗೆ ಬರುತ್ತಿದ್ದು, ಕಟ್ಟಡದಲ್ಲಿ ನಿರ್ಮಾಣವಾಗಿರುವ ದೊಡ್ಡ ದೊಡ್ಡ ಬಿಲದೊಳಗೆ ವಾಸಿಸುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಜೀವ ಭಯದಲ್ಲಿ ದಿನ ದೂಡುವಂತಾಗಿದೆ.

ಇತ್ತೀಚೆಗೆ ಅಂಗನವಾಡಿ ಕೇಂದ್ರದಲ್ಲಿ ನಾಗರ ಹಾವೊಂದು ಕಾಣಿಸಿಕೊಂಡಿದ್ದು, ಸ್ನೇಕ್‌ ಆರೀಫ್‌ ಬಂದು ಹಾವನ್ನು ಹಿಡಿಯುವ ಪ್ರಯತ್ನ ಮಾಡಿದರೂ, ಗೋಡೆಯೊಳಗಿರುವ ಬಿಲದೊಳಗೆ ಸೇರಿಕೊಂಡ, ಹಾವು ಹೊರಗೆ ಬರದೇ ಮಕ್ಕಳನ್ನು ಪಕ್ಕದ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸುವಂತಾಗಿತ್ತು.

ತಾಲ್ಲೂಕಿನ ಬಿಳಗುಳದಲ್ಲಿ ಕಳೆದ ಎಂಟು ತಿಂಗಳ ಹಿಂದೆ ಅಂಗನವಾಡಿಯಲ್ಲಿ ವಿಷಜಂತು ಕಚ್ಚಿ ಅಂಗನವಾಡಿಯ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಮಾಸುವ ಮುನ್ನವೇ, ದೇವನಗೂಲ್‌ ಅಂಗನವಾಡಿ ಕೇಂದ್ರದಲ್ಲಿ ನಾಗರಹಾವು ಕಾಣಿಸಿಕೊಂಡಿರುವುದು ಮಕ್ಕಳಿಗಷ್ಟೇ ಅಲ್ಲದೇ, ಪೋಷಕರಲ್ಲೂ ಭಯ ಮೂಡಿಸಿದ್ದು, ಅಂಗನವಾಡಿ ಕೇಂದ್ರಕ್ಕೆ ಸೂಕ್ತ ರಕ್ಷಣೆ ಅಗತ್ಯವಾಗಿದೆ.

ಅಂಗನವಾಡಿ ಕೇಂದ್ರ ಹಾಗೂ ಸಾರ್ವಜನಿಕ ಗ್ರಂಥಾಲಯವು ಬಸ್‌ ನಿಲ್ದಾಣದ ಶೌಚಾಲಯಕ್ಕೆ ಹೊಂದಿಕೊಂಡಂತಿದ್ದು, ಅಂಗನವಾಡಿ ಮಕ್ಕಳು ಹಾಗೂ ಗ್ರಂಥಾಲಯದಲ್ಲಿ ಓದುಗರು, ಇಡೀ ದಿನ ಶೌಚಾಲಯದ ವಾಸನೆಯ ನಡುವೆ ಕಾಲ ಕಳೆಯುವಂತಾಗಿದೆ. ಕೂಡಲೇ ಅಂಗನವಾಡಿ ಕೇಂದ್ರಕ್ಕೆ ಸೂಕ್ತ ರಕ್ಷಣೆ ಒದಗಿಸುವುದರ ಜತೆಗೆ, ಶೌಚಾಲಯವನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕು ಎಂಬುದು ಪೋಷಕರ ಒತ್ತಾಯವಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !