ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರಪಟ್ಟಿ ಅಳವಡಿಸಲು ಮೀನಮೇಷ

ಜಿಲ್ಲೆಯ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ನಿಯಮ ಆಟಕ್ಕುಂಟು ಲೆಕ್ಕಕ್ಕಿಲ್ಲ!
Last Updated 20 ಅಕ್ಟೋಬರ್ 2020, 3:11 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದರಪಟ್ಟಿ ಫಲಕ ಅಳವಡಿಸಿಲ್ಲ. ದರ ಫಲಕ ಪ್ರದರ್ಶಿಸಬೇಕು ಎಂಬ ನಿಯಮ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.

ವೈದ್ಯರ ತಪಾಸಣೆ ಮತ್ತು ಚಿಕಿತ್ಸೆ ಶುಲ್ಕ, ವಿವಿಧ (ರಕ್ತ, ಮೂತ್ರ, ಗಂಟಲ ದ್ರವ…) ಪರೀಕ್ಷೆ ದರ, ವಾರ್ಡ್‌ (ಜನರಲ್‌, ಸೆಮಿ ಸ್ಪೆಷಲ್‌, ಸ್ಪೆಷಲ್‌, ತೀವ್ರ ನಿಗಾ ಘಟಕ (ಐಸಿಯು)... ) ದರ ವಿವರವನ್ನು ಎದ್ದು ಕಾಣುವಂತೆ ಪ್ರಕಟಿಸಬೇಕು ಎಂಬ ನಿಯಮ ಇದೆ. ಅದರೆ, ಬಹಳಷ್ಟು ಆಸ್ಪತ್ರೆಗಳು ಈ ನಿಯಮ ಪಾಲಿಸುತ್ತಿಲ್ಲ. ಆಸ್ಪತ್ರೆಯವರು ವಿಧಿಸಿದ ದರವನ್ನು ಸಾರ್ವಜನಿಕರು ಪಾವತಿಸಬೇಕಾಗಿದೆ.

ಆಸ್ಪತ್ರೆಯಲ್ಲಿ ಲಭ್ಯವಿರುವ ಚಿಕಿತ್ಸೆ, ಸೌಕರ್ಯಗಳ ಫಲಕ, ವೈದ್ಯರು, ತಜ್ಞ ವೈದ್ಯರ ಪಟ್ಟಿ, ಆರೋಗ್ಯ ವಿಮೆ ಮಾಹಿತಿಯನ್ನು ಎದ್ದು ಕಾಣುವಂತೆ ಅಳವಡಿಸಿರುತ್ತಾರೆ.

‘ಕೆಲವಾರು ಖಾಸಗಿ ಆಸ್ಪತ್ರೆಗಳವರು ಹಣ ಪೀಕುವುದನ್ನು ‘ಕರಗತ’ ಮಾಡಿಕೊಂಡಿದ್ದಾರೆ. ಇಡೀ ಆಸ್ಪತ್ರೆ ಹುಡುಕಿದರೂ ಎಲ್ಲಿಯೂ ಚಿಕಿತ್ಸೆ ದರ ಪಟ್ಟಿ ಕಾಣಿಸಲ್ಲ. ಆಸ್ಪತ್ರೆಯವರು ವಿಧಿಸಿದಷ್ಟು ದರ ಪಾವತಿಸದೆ ವಿಧಿ ಇಲ್ಲ ಎಂಬಂತಾಗಿದೆ’ ಎಂದು ಖಾಸಗಿ ಆಸ್ಪತ್ರೆಯಲ್ಲಿ ಈಚೆಗೆ ಚಿಕಿತ್ಸೆ ಪಡೆದ ಮಹಿಳೆಯೊಬ್ಬರು ಸಂಕಷ್ಟ ತೋಡಿಕೊಂಡರು.

ನಿಯಮ ಪಾಲಿಸದಿದ್ದರೆ ಕರ್ನಾಟಕ ಪ್ರೈವೆಟ್‌ ಮೆಡಿಕಲ್‌ ಎಸ್ಟಾಬ್ಲಿಷ್‌ಮೆಂಟ್‌ (ಕೆಪಿಎಂಇ) ಕಾಯ್ದೆಯಡಿ ಕ್ರಮ ಕೈಗೊಳ್ಳಲು ಜಿಲ್ಲಾ ಮಟ್ಟದ ನೋಂದಣಿ ಸಮಿತಿಗೆ ಅಧಿಕಾರ ಇದೆ. ಜಿಲ್ಲಾಧಿಕಾರಿ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಆರೋಗ್ಯಾಧಿಕಾರಿ
ಕಾರ್ಯದರ್ಶಿಯಾಗಿರುತ್ತಾರೆ. ನೋಡೆಲ್‌ ಅಧಿಕಾರಿ ಸಹಿತ ಸಮಿತಿಯಲ್ಲಿ ಐವರು ಇರುತ್ತಾರೆ. ಸಮಿತಿಯು ಈವರೆಗೆ ಕ್ರಮ ಜರುಗಿಸಿದ ನಿದರ್ಶನ ಇಲ್ಲ.

‘ಚಿಕಿತ್ಸೆ ದರ ಪಟ್ಟಿ ಪ್ರಕಟಿಸದಿ ರುವುದು ಮೆಡಿಕಲ್‌ ಲಾಬಿಗಳಲ್ಲಿ ಒಂದು. ನಿಯಮ ಪಾಲಿಸದ ಆಸ್ಪತ್ರೆಗಳ ವಿರುದ್ಧ ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಕ್ರಮ ಜರುಗಿಸಲು ಮುಂದಾಗಬೇಕು, ಮುಲಾಜಿಗೆ ಒಳಗಾಗಬಾರದು’ ಎಂದು ಕಾಂಗ್ರೆಸ್‌ ಕೋವಿಡ್‌ ಕಾರ್ಯಪಡೆ ಜಿಲ್ಲಾ ಘಟಕದ ಮುಖ್ಯಸ್ಥ ಎಂ.ಎಲ್‌.ಮೂರ್ತಿ ಹೇಳುತ್ತಾರೆ.

‘ದರಪಟ್ಟಿ ಅಳವಡಿಸದ ಆಸ್ಪತ್ರೆಗೆ ನೋಟಿಸ್‌’

‘ದರ ಪಟ್ಟಿ ಅಳವಡಿಸದ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್‌ ಜಾರಿ ಮಾಡುತ್ತೇವೆ. ಆಸ್ಪತ್ರೆಗಳಿಗೆ ತೆರಳಿ ಪರಿಶೀಲನೆ ಮಾಡುತ್ತೇವೆ’ ಎಂದು ಜಿಲ್ಲಾ ಮಟ್ಟದ ನೋಂದಣಿ ಸಮಿತಿ ನೋಡಲ್‌ ಅಧಿಕಾರಿ ಡಾ.ಅಶ್ವತ್ಥ್‌ ಬಾಬು ತಿಳಿಸಿದರು.

‘ಕೆಲ ಆಸ್ಪತ್ರೆಗಳಲ್ಲಿ ಎಲ್ಲೋ ಮೂಲೆಯಲ್ಲಿ ದರಪಟ್ಟಿ ಅಳವಡಿಸಿರುತ್ತಾರೆ. ಜಿಲ್ಲೆಯಲ್ಲಿ ನರ್ಸಿಂಗ್ ಹೋಂ, ಲ್ಯಾಬ್‌, ಕ್ಲಿನಿಕ್‌ ಸಹಿತ 286 ಖಾಸಗಿ ಆಸ್ಪತ್ರೆಗಳಿವೆ. ಈ ಪೈಕಿ ಹಲವು ಆಸ್ಪತ್ರೆಗಳು ಫಲಕ ಅಳವಡಿಸಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT