ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಂಟ್ ಹಾಕಿ ನಿವೇಶನ ರಹಿತರ ಪ್ರತಿಭಟನೆ

ನಿವೇಶನ ಹಂಚಿಕೆಗೆ ತಿಂಗಳ ಗಡುವು ನೀಡಿದ ಶಾಸಕ ರಾಜೇಗೌಡ
Last Updated 1 ನವೆಂಬರ್ 2022, 7:09 IST
ಅಕ್ಷರ ಗಾತ್ರ

ಕೊಪ್ಪ: ತಾಲ್ಲೂಕಿನ ಹರಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ರಹಿತ ಬಡವರು ಮನೆಕಟ್ಟಿಕೊಳ್ಳಲು ನಿವೇಶನ ಗುರುತಿಸಿಕೊಡುವಂತೆ ಹಕ್ಕೊತ್ತಾಯ ಮಾಡಿ ನಿವೇಶನ ಮಂಜೂರಾಗಿರುವ ಸ್ಥಳದಲ್ಲಿ ಟೆಂಟ್ ಹಾಕಿ ಸೋಮವಾರ ಪ್ರತಿಭಟಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಟಿ.ಡಿ.ರಾಜೇಗೌಡ ಅವರು ವಸತಿ ರಹಿತರೊಂದಿಗೆ ಮಾತನಾಡಿ, ‘ಒಟ್ಟು 316 ಮಂದಿ ಅರ್ಜಿದಾರರಿದ್ದಾರೆ. ಲಭ್ಯ ಇರುವ ಜಾಗದಲ್ಲಿ 120 ಮಂದಿಗೆ ನಿವೇಶನ ನೀಡಬಹುದು. ಉಳಿದವರಿಗೂ ನಿವೇಶನ ನೀಡಲು ಜಾಗ ಮಂಜೂತಿಗೆ ಕ್ರಮ ವಹಿಸಲಾಗುವುದು. ರಸ್ತೆ ಪಕ್ಕದಲ್ಲಿ ಜಾಗ ಮಂಜೂರಿಗೆ ಅವಕಾಶ ನೀಡದೆ, ಇಳಿಜಾರು ಪ್ರದೇಶ ಮಂಜೂರಾಗಿದೆ’ ಎಂದು ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ಒಂದು ತಿಂಗಳೊಳಗಾಗಿ ಫಲಾನುಭವಿಗಳನ್ನು ಪಕ್ಷಾತೀತವಾಗಿ ಆಯ್ಕೆ ಮಾಡಿ, ಮುಂದಿನ ಕ್ರಮ ಕೈಗೊಳ್ಳಬೇಕು. ಸರ್ಕಾರದಿಂದ ವಸತಿ ಯೋಜನೆಯಡಿ, ಶಾಸಕರ ಪ್ರದೇಶಾಭಿವೃದ್ಧಿ ಅಡಿಯಲ್ಲಿಯೂ ಅನುದಾನ ಒದಗಿಸಲಾಗುತ್ತದೆ. ಪಕ್ಷತೀತವಾಗಿ ಒಂದು ತಿಂಗಳೊಳಗೆ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳದಲ್ಲಿದ್ದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್.ಹರೀಶ್ ಅವರಿಗೆ ಶಾಸಕರು ಸೂಚಿಸಿದರು.

ವಸತಿ ರಹಿತ ಹೋರಾಟಗಾರರು ಮಾತನಾಡಿ, ‘ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ನಮ್ಮ ಸಮಸ್ಯೆಗೆ ಸ್ಪಂದಿಸದೆ ವಿನಾಕಾರಣ ಮುಂದೂಡುತ್ತಿದ್ದಾರೆ. ಮತ ಕೇಳಲು ಮಾತ್ರ ನಮ್ಮ ಬಳಿಗೆ ಬರುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ‘ತಿಂಗಳ ಒಳಗಾಗಿ ಕ್ರಮ ವಹಿಸದಿದ್ದಲ್ಲಿ, ಇದೇ ಸ್ಥಳದಲ್ಲಿ ಗುಡಿಸಲು ಹಾಕಿಕೊಂಡು ವಾಸ ಮಾಡುತ್ತೇವೆ’ ಎಂದು ಎಚ್ಚರಿಸಿದರು.

ಸಂಜೆ ಹೊತ್ತಿಗೆ ಭೇಟಿ ನೀಡಿದ ತಾಲ್ಲೂಕು ಪಂಚಾಯಿತಿ ಇಒ ಜಿ.ಆರ್.ಹರೀಶ್ ಅವರು, ಸ್ಥಳ ಪರಿಶೀಲಿಸಿದರು. ರಸ್ತೆ ಪಕ್ಕದಲ್ಲಿನ ಸಮತಟ್ಟು ಜಾಗವನ್ನು ಮಂಜೂರು ಮಾಡದೆ ಇಳಿಜಾರು ಪ್ರದೇಶದಲ್ಲಿ ಮಂಜೂರು ಮಾಡಿರುವುದರಿಂದ ಅದನ್ನು ಸಮತಟ್ಟು ಮಾಡಲು ಸಾಕಷ್ಟು ಅನುದಾನ ಬೇಕಾಗುತ್ತದೆ. ವಸತಿ ರಹಿತರ ಸಂಕಷ್ಟ ಅರಿವಿಗೆ ಬಂದಿದೆ, ಸಮಸ್ಯೆಗೆ ಸ್ಪಂದಿಸಲಾಗುವುದು ಎಂದು ತಿಳಿಸಿದರು.

ಹರಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕರಿಯಪ್ಪ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಚೇತನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ಸಾಮಾಜಿಕ ಕಾರ್ಯಕರ್ತ ಜಯಪುರದ ಎಂ.ಯೂಸುಫ್ ಪಟೇಲ್, ಡಿಎಸ್ಎಸ್ ಮುಖಂಡ ರಾಜಶಂಕರ್, ವಿಜಯ್, ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT