ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ | ಸಮುದಾಯ ಶೌಚಾಲಯಗಳು ದುಃಸ್ಥಿತಿಗೆ

ಸಮುದಾಯ ಶೌಚಾಲಯಗಳು ದುಃಸ್ಥಿತಿಗೆ; ಜನರ ಪರದಾಟ
Published 12 ಮೇ 2023, 15:52 IST
Last Updated 12 ಮೇ 2023, 15:52 IST
ಅಕ್ಷರ ಗಾತ್ರ

ಮೂಡಿಗೆರೆ: ಪಟ್ಟಣದಲ್ಲಿರುವ ಸಮುದಾಯ ಶೌಚಾಲಯಗಳು ದುಃಸ್ಥಿತಿಗೆ ತಲುಪಿದ್ದು ಪಟ್ಟಣಕ್ಕೆ ಬರುವ ಜನರು ವಿಶೇಷವಾಗಿ ಮಹಿಳೆಯರು ಶೌಚಾಲಯಕ್ಕೆ ತೆರಳಲು ಮುಜುಗರ ಪಡುವ ಸ್ಥಿತಿ ಉಂಟಾಗಿದೆ.

ಪಟ್ಟಣದಲ್ಲಿ ಬಸ್ ನಿಲ್ದಾಣ, ತಾಲ್ಲೂಕು ಕಚೇರಿ, ಸಂತೆ ಮೈದಾನದಲ್ಲಿ ಸಮುದಾಯ ಶೌಚಾಲಯವನ್ನು ನಿರ್ಮಿಸಲಾಗಿದೆ. ಆದರೆ, ಸಂತೆ ಮೈದಾನದ ಹೊಸ ಶೌಚಾಲಯವೂ ಸೇರಿದಂತೆ, ಎಲ್ಲಾ ಶೌಚಾಲಯಗಳು ನಿರ್ವಹಣೆಯಿಲ್ಲದೇ ಗಬ್ಬುನಾರುತ್ತಿದ್ದು, ಅವುಗಳ ಒಳಗೆ ಪ್ರವೇಶಿಸುವುದೇ ಸವಾಲಾಗಿದೆ. ಬಸ್ ನಿಲ್ದಾಣದೊಳಗಿನ ಶೌಚಾಲಯ ನಿರ್ವಹಣೆಗೆ ಸಿಬ್ಬಂದಿಯನ್ನು ನಿಯೋಜಿಸಿದ್ದರೂ, ಸ್ವಚ್ಛತೆ ಮರೀಚಿಕೆಯಾಗಿದ್ದು, ಹೆಣ್ಣುಮಕ್ಕಳು, ಮಹಿಳೆಯರ ಸಂಕಷ್ಟ ಹೇಳತೀರದಾಗಿದೆ.

ಪೊಲೀಸ್ ಠಾಣೆ ಮುಂಭಾಗದಲ್ಲಿದ್ದ ಶೌಚಾಲಯವನ್ನು ಐದು ವರ್ಷಗಳ ಹಿಂದೆಯೇ ಬಾಗಿಲು ಮುಚ್ಚಲಾಗಿದೆ. ಆದರೆ ಮಹಿಳೆಯರ ವಿಭಾಗದ ಬಾಗಿಲನ್ನು ಒಡೆದು ತೆಗೆದಿದ್ದು, ರಾತ್ರಿ ವೇಳೆ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ. ಕೆ.ಎಂ ರಸ್ತೆಯ ಇಂದಿರಾಗಾಂಧಿ ವಾಣಿಜ್ಯ ಮಳಿಗೆಯ ಬಳಿ ನಿರ್ಮಿಸಿದ್ದ ಶೌಚಾಲಯವನ್ನು ನೆಲಸಮಗೊಳಿಸಲಾಗಿದೆ. ಶೌಚಾಲಯ ಇಲ್ಲದಿರುವುದರಿಂದ ಖಾಲಿ ನಿವೇಶನಗಳು, ವಾಣಿಜ್ಯ ಕಟ್ಟಡಗಳಲ್ಲಿರುವ ಗಲ್ಲಿಗಳು ಮಲ ಮೂತ್ರ ವಿಸರ್ಜನೆಯ ಕೇಂದ್ರವಾಗುತ್ತಿವೆ.

ಶೌಚಾಲಯಗಳ ಕೊರತೆ ಕೂಡ ಈ ಬಾರಿಯ ಚುನಾವಣೆಯಲ್ಲಿ ಸದ್ದು ಮಾಡಿದೆ. ಪಟ್ಟಣದಲ್ಲಿ ಮಹಿಳೆಯರಿಗೆ ಸೂಕ್ತ ಶೌಚಾಲಯ ವ್ಯವಸ್ಥೆಯೂ ಇಲ್ಲದ ಪರಿಸ್ಥಿತಿ ಇರುವುದು ನಾಚಿಕೆಗೇಡಿನ ಸ್ಥಿತಿ ಎಂದು ಹಲವರು ಸಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟ್ಟಣದಲ್ಲಿ ಜನಸಂದಣಿ ಹೆಚ್ಚಿರುವ ಇಂದಿರಾ ಕ್ಯಾಂಟೀನ್ ರಸ್ತೆ, ಗಂಗನಮಕ್ಕಿ, ಮೇಗಲಪೇಟೆ, ಬೇಲೂರು ರಸ್ತೆ, ಹ್ಯಾಂಡ್ ಪೋಸ್ಟ್‌ಗಳಲ್ಲಿ ಸಾರ್ವಜನಿಕ ಶೌಚಾಲಯಗಳ ಅಗತ್ಯವಿದೆ.

‘ತಾಲ್ಲೂಕು ಕಚೇರಿ ಬಳಿಯಿರುವ ಶೌಚಾಲಯಕ್ಕೆ ಮೂಗು ಮುಚ್ಚಿಕೊಂಡು ಹೋಗಬೇಕಾದ ಸ್ಥಿತಿಯಿದೆ. ಇಡೀ ಚುನಾವಣಾ ಪ್ರಕ್ರಿಯೆ ನಡೆದ ತಾಲ್ಲೂಕು ಕಚೇರಿ ಆವರಣದಲ್ಲಿಯೇ ಇಂತಹ ಸ್ಥಿತಿಯಾದರೆ ಬೇರೆ ಕಡೆಗಳಲ್ಲಿನ ಪರಿಸ್ಥಿತಿ ಹೇಗೆ ಸುಧಾರಿಸುತ್ತದೆ, ಶೌಚಾಲಯದ ಬೇಡಿಕೆಯನ್ನು ಹಗುರವಾಗಿ ಪರಿಗಣಿಸಿರುವುದರ ಪರಿಣಾಮವೇ ಈ ಸ್ಥಿತಿಗೆ ಕಾರಣವಾಗಿದೆ’ ಎನ್ನುತ್ತಾರೆ ಶಿಕ್ಷಕಿ ಇಂದಿರಾ.

ಇರುವ ಶೌಚಾಲಯಗಳನ್ನು ದುರಸ್ತಿ ಪಡಿಸಿ, ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಂಡು ಮಹಿಳೆಯರಿಗಾಗುತ್ತಿರುವ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Highlights - ತಾಲ್ಲೂಕು ಕಚೇರಿ ಆವರಣದಲ್ಲಿಯೇ ಗಬ್ಬು ವಾಸನೆ ಶೌಚಾಲಯ ಕೊರತೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹಲವೆಡೆ ಅಗತ್ಯವಿದೆ ಶೌಚಾಲಯದ ಅಗತ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT