ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು | ಉತ್ತಮ ಮಳೆ: ನದಿಗಳಿಗೆ ಜೀವಕಳೆ

ಮಲೆನಾಡಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ
Published 8 ಜುಲೈ 2024, 6:57 IST
Last Updated 8 ಜುಲೈ 2024, 6:57 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಉಗಮವಾಗುವ ನದಿಗಳ ಒಡಲು ಈ ಬಾರಿ ಮೈದುಂಬಿಕೊಂಡಿವೆ. ಮುಂಗಾರು ಮತ್ತು ಮುಂಗಾರು ಪೂರ್ವ ಮಳೆಗಳು ಈ ಬಾರಿ ವಾಡಿಕೆಯಷ್ಟಾಗಿದ್ದು, ಇಡೀ ಜಿಲ್ಲೆಗೆ ಜೀವಕಳೆ ಬಂದಿದೆ.

ಕಳೆದ ವರ್ಷ ಅತೀ ಕಡಿಮೆ ಮಳೆಯಾಗಿತ್ತು. ಮಲೆನಾಡಿನ ತಾಲ್ಲೂಕುಗಳೇ ಬರಗಾಲಕ್ಕೆ ತುತ್ತಾಗಿದ್ದವು. ಹತ್ತು ವರ್ಷಗಳಲ್ಲೇ ಅತೀ ಕಡಿಮೆ ಮಳೆ ದಾಖಲಾಗಿದ್ದರಿಂದ ನದಿಗಳ ಒಡಲು ತುಂಬದೆ ಖಾಲಿಯಾಗಿದ್ದವು. ಈ ಬಾರಿ ವರುಣ ಕೃಪೆ ತೋರಿರುವುದು ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ.

ಜನವರಿಯಿಂದ ಈವರೆಗೆ 60 ಸೆಂಟಿ ಮೀಟರ್ ಮಳೆಯಾಗಿದೆ. ಇದು ವಾಡಿಕೆಗೆ ಸಮವಾಗಿದೆ ಎಂಬುದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ(ಕೆಎಸ್‌ಎನ್‌ಡಿಎಂಸಿ) ಅಂದಾಜು. ಇಡೀ ಜಿಲ್ಲೆಯಲ್ಲಿ ಕಳಸ ತಾಲ್ಲೂಕಿನಲ್ಲಿ ಮಾತ್ರ ವಾಡಿಕೆಗಿಂತ ಶೇ 14ರಷ್ಟು ಕಡಿಮೆಯಾಗಿದೆ. ಉಳಿದೆಲ್ಲಾ ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಅತೀ ಹೆಚ್ಚು ಶೇ 60ರಷ್ಟು ಹೆಚ್ಚುವರಿ ಮಳೆಯಾಗಿದೆ. ಬಯಲು ಸೀಮೆಯ ಅಜ್ಜಂಪುರದಲ್ಲೂ ಶೇ 56ರಷ್ಟು ಹೆಚ್ಚುವರಿ ಮಳೆಯಾಗಿದೆ.

ತುಂಗಾ, ಭದ್ರ, ಹೇಮಾವತಿ, ನೇತ್ರಾವತಿ, ವೇದಾವತಿ ನದಿಗಳು ಜಿಲ್ಲೆಯಲ್ಲಿಯೇ ಜನ್ಮತಾಳುತ್ತವೆ. ಇವುಗಳ ಜತೆಗೆ ಸಣ್ಣ, ಸಣ್ಣ ಹೊಳೆಗಳು, ಉಪ ನದಿಗಳಿಗೂ ಇದೇ ಉಗಮ ಸ್ಥಾನ. ಈ ನದಿಗಳು ಭರ್ತಿಯಾಗಿ ಹರಿದರೆ ಅರ್ಧ ಕರ್ನಾಟಕಕ್ಕೆ ವರ್ಷವಿಡೀ ಸಮೃದ್ಧಿಯ ನೀರುಣಿಸುತ್ತವೆ.

ಎಲ್ಲಾ ನದಿಗಳು ಈಗ ಜೀವಕಳೆ ಪಡೆದುಕೊಂಡು ಹರಿಯುತ್ತಿವೆ. ಜುಲೈನಲ್ಲೂ ಹೆಚ್ಚಿನ ಮಳೆಯಾಗಬೇಕು ಎಂಬುದು ಜಿಲ್ಲೆಯ ಜನರ ನಿರೀಕ್ಷೆ.

ತುಂಬಿದ ಹೇಮಾವತಿ ಒಡಲು

ಮೂಡಿಗೆರೆ: ಹೇಮಾವತಿ ನದಿ ಪಾತ್ರದಲ್ಲಿ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಈ ಬಾರಿ ಮೈದುಂಬಿ ಹರಿಯುತ್ತಿದೆ.

2019ರಲ್ಲಿ ಸುರಿದ ಮಹಾಮಳೆಗೆ ಉಕ್ಕಿ ಹರಿದಿದ್ದ ಹೇಮಾವತಿಯು ನಂತರದ ವರ್ಷಗಳಲ್ಲಿ ನಿರಂತರ ಮಳೆಯ ಕೊರತೆಯಿಂದಾಗಿ ಆಗೊಮ್ಮೆ, ಈಗೊಮ್ಮೆ ಹರಿವಿನ ಮಟ್ಟವನ್ನು ಹೆಚ್ಚಿಸಿಕೊಂಡರೂ, ಮೂರ್ನಾಲ್ಕು ದಿನಗಳಲ್ಲಿಯೇ ನೀರಿನ ಹರಿವು ಕಡಿಮೆಯಾಗುತ್ತಿತ್ತು. ಈ ಬಾರಿ ವಾರದಿಂದಲೂ ನೀರಿನ ಮಟ್ಟ ಗರಿಷ್ಟ ಮಟ್ಟದಲ್ಲಿಯೇ ಇದ್ದು,  ಸಬ್ಬೇನಹಳ್ಳಿ, ಹೊರಟ್ಟಿ, ಮುಗ್ರಹಳ್ಳಿ, ಕಿತ್ತಲೆಗಂಡಿ, ಬೆಟ್ಟದಮನೆ ಮೈದುಂಬಿ ಹರಿಯುತ್ತಿದೆ.

ಕಳೆದ ಬಾರಿ ಮಳೆ ಕೊರತೆ ಯಾಗಿದ್ದರಿಂದ ಜುಲೈ ತಿಂಗಳಿನ ಲ್ಲಿಯೇ ನದಿಯ ಹರಿವು ಕನಿಷ್ಠ ಮಟ್ಟಕ್ಕೆ ತಲುಪಿತ್ತು. ಪರಿಣಾಮ ಬೇಸಿಗೆ ಪ್ರಾರಂಭಕ್ಕೂ ಮೊದಲೇ ಹೇಮಾವತಿ ಹರಿವನ್ನು ನಿಲ್ಲಿಸಿತ್ತು. ಜೂನ್ ಪ್ರಾರಂಭದಿಂ ದಲೂ ಉತ್ತಮವಾಗಿ ಮಳೆ ಸುರಿ ಯುತ್ತಿರುವುದರಿಂದ ಹೇಮಾವತಿ ಒಡಲು ತುಂಬಿದಂತಾಗಿದೆ.

ಈ ಬಾರಿಯೂ ಮಳೆ ನಿಂತ ಬಳಿಕ ನೀರು ಕಡಿಮೆಯಾಗದೇ ಜಲ ಉಕ್ಕಿ ಹರಿಯಲಿ ಎಂಬುದು ಪರಿಸರಸಕ್ತರ ಅಭಿಲಾಷೆ. 

ಮೈದುಂಬಿದ ತುಂಗಾ

ಶೃಂಗೇರಿ: ತಾಲ್ಲೂಕಿನಲ್ಲಿ ಈ ವರ್ಷ ಸುರಿದ ಮಳೆಯಿಂದ ತುಂಗಾ ನದಿ ತುಂಬಿ ಹರಿಯುತ್ತಿದೆ.

ತುಂಗಾ ನದಿ ಕುದುರೆಮುಖದ ಗಂಗಾ ಮೂಲದಲ್ಲಿ ಉಗಮವಾಗಿ ಕೂಡಲಿ ತನಕ ಮೈದುಂಬಿ ಹರಿಯುತ್ತದೆ. ಕಳೆದ ವರ್ಷ ಅನಾವೃಷ್ಟಿಯಿಂದ ಬಿತ್ತನೆ ಬೀಜ ಹಾಕದೆ, ಗದ್ದೆಗಳು ಸಾಗುವಳಿ ಮಾಡಬೇಕೋ ಬೇಡವೋ ಎಂಬ ಚಿಂತೆಯಲ್ಲಿ ರೈತರು ಇದ್ದರು. ಬೇಸಿಗೆಯಲ್ಲಿ ತೋಟಗಳಿಗೆ ನೀರು ಹೇಗೆ ಹಾಯಿಸುವುದು, ಕುಡಿಯುವ ನೀರಿಗೆ ಏನು ಮಾಡುವುದು ಎಂಬ ಚಿಂತೆಯಲ್ಲಿ ಇದ್ದರು. ಆದರೆ, ಈ ವರ್ಷ ವಾಡಿಕೆಗಿಂತ ಮಳೆ ಜಾಸ್ತಿಯಾಗಿದ್ದು, ಹಳ್ಳ– ಕೊಳ್ಳಗಳು, ತುಂಗಾನದಿ ತುಂಬಿ ಹರಿಯುತ್ತಿದೆ.

ಭತ್ತದ ಗದ್ದೆಗಳು, ತೋಟಗಳು ನೀರಿನಿಂದ ಆವೃತಗೊಂಡಿದೆ. ಈ ರೀತಿ ಮಳೆಯಾದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ, ಗದ್ದೆ ಸಾಗುವಳಿಗೆ ಮತ್ತು ತೋಟಕ್ಕೆ ನೀರು ಹಾಯಿಸಲು ತೊಂದರೆ ಆಗುವುದಿಲ್ಲ ಎನ್ನುತ್ತಾರೆ ರೈತರು.

ತುಂಬಿ ಹರಿಯುತ್ತಿರುವ ಹಳ್ಳಗಳು

ಕೊಪ್ಪ: ತಾಲ್ಲೂಕಿನಲ್ಲಿ ಈ ಬಾರಿ ಇಲ್ಲಿಯವರೆಗೆ ಉತ್ತಮ ಮಳೆಯಾಗಿದೆ. ತೊರೆ, ಹಳ್ಳಗಳು ತುಂಬಿ ಹರಿಯುತ್ತಿವೆ. ಶೃಂಗೇರಿ ಭಾಗದಲ್ಲಿ ಹೆಚ್ಚು ಮಳೆ ಸುರಿಯುತ್ತಿರುವುದರಿಂದ ತಾಲ್ಲೂಕಿನ ಹರಿಹರಪುರ ಬಳಿ ಹರಿಯುತ್ತಿರುವ ತುಂಗಾ ನದಿ ನೀರಿನ ಮಟ್ಟ ಏರಿಕೆಯಾಗಿದೆ. ನದಿ ತಟದಲ್ಲಿರುವ ತೋಟ, ಗದ್ದೆ, ಗ್ರಾಮೀಣ ರಸ್ತೆಯನ್ನು ಆಕ್ರಮಿಸುವ ರೀತಿಯಲ್ಲಿ ನೀರಿನ ಹರಿವು ಅಪಾಯ ಮಟ್ಟದಲ್ಲಿದೆ. ತುಂಗಾ ನದಿ ನೀರಿನ ಮಟ್ಟ ತೀವ್ರ ಹೆಚ್ಚಳವಾದಾಗ ಪ್ರತಿ ಬಾರಿ ತಾಲ್ಲೂಕಿನ ನಾರ್ವೆ ಸಮೀಪದ ಆರ್ಡಿಕೊಪ್ಪ ಬಳಿ ಕೊಪ್ಪ- ಜಯಪುರ ರಸ್ತೆ ಸಂಚಾರ ಸ್ಥಗಿತಗೊಳ್ಳುತ್ತದೆ. ಆಗ ಪರ್ಯಾಯ ಮಾರ್ಗವಾಗಿ ಅಂದಗಾರು, ಕಲ್ಕೆರೆ ಮೂಲಕ ಜಯಪುರ ಹೋಗಲು ಸೂಚಿಸಲಾಗುತ್ತದೆ.

ಸತತ ಮಳೆಗೆ ಮೈದುಂಬಿದ ಭದ್ರೆ

ಕಳಸ: ಕಳೆದ ವರ್ಷದ ಮಳೆಗಾಲದಲ್ಲಿ ಮಳೆ ಅಪರೂಪ ವಾಗಿದ್ದರಿಂದ ಭದ್ರಾ ನದಿ ಹರಿವು ಕಡಿಮೆಯಾಗಿತ್ತು. ಆದರೆ, ಈ ಬಾರಿ ಸತತ ಮಳೆಯ ಕಾರಣ ಭದ್ರೆ ಮೈದುಂಬಿಕೊಂಡಿದ್ದು, ಭದ್ರಾ ಕೊಳ್ಳದಲ್ಲಿ ರಮಣೀಯ ದೃಶ್ಯ ಕಂಡು ಬರುತ್ತಿದೆ. ಭದ್ರಾ ನದಿ ಉಗಮವಾಗುವ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಗಂಗಾ ಮೂಲ ಪ್ರದೇಶ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಒಂದು. ಕುದುರೆಮುಖ ರಾಷ್ಟ್ರೀಯ ಉದ್ಯಾನದ ಬಹುಪಾಲು ಪ್ರದೇಶ ಭದ್ರಾ ನದಿಯ ಅಚ್ಚುಕಟ್ಟು ಪ್ರದೇಶದಲ್ಲೇ ಇದೆ. ಅಲ್ಲಿ ಕಳೆದ 2 ತಿಂಗಳಿಂದ ಸತತ ಮಳೆಯಾಗುತ್ತಿದೆ. ಇದರಿಂದ ಭದ್ರೆಯ ಒಡಲು ತುಂಬಿದ್ದು, ಪ್ರತಿದಿನವೂ ನದಿ ಕೆಂಬಣ್ಣದ ನೀರಿನಿಂದ ಹರಿಯುತ್ತದೆ. ಇದರ ಜೊತೆಗೆ ಭದ್ರಾ ನದಿಗೆ ಮತ್ತಷ್ಟು ನೀರನ್ನು ಕುದುರೆಮುಖ, ಸಂಸೆ, ಬಲಿಗೆ, ಕಳಕೋಡು ಜೊತೆಗೆ ಕಳಸ ತಾಲ್ಲೂಕಿನ ವಿವಿಧ ಗ್ರಾಮಗಳು ಪೂರೈಸುತ್ತಿವೆ. ಇಲ್ಲಿ ಕೂಡ ಕಳೆದ 2 ತಿಂಗಳಿಂದ ಬಹಳಷ್ಟು ಮಳೆಯಾಗುತ್ತಿದ್ದು ಉಪ ನದಿಗಳಾದ ಲಕ್ಯಾ, ಸೋಮಾವತಿ, ಗುಗ್ಗರದ ಹಳ್ಳ, ಹೆಮ್ಮಕ್ಕಿ ಹಳ್ಳ, ಬೇಡಕ್ಕಿ ಹಳ್ಳ ರಭಸದಿಂದ ಹರಿದು ಭದ್ರೆಯ ಒಡಲು ಸೇರುತ್ತಿವೆ.

ಗಂಗಾಮೂಲದಲ್ಲಿ ಹನಿಗಳ ರೂಪದಲ್ಲಿ ಉಗಮವಾಗುವ ಭದ್ರಾ ನದಿ ಕಳಸ ತಲುಪುವ ವೇಳೆಗೆ ಪಡೆದುಕೊಳ್ಳುವ ರೂಪ  ಅಚ್ಚರಿ ಹುಟ್ಟಿಸುತ್ತದೆ. ಒಂದೇ ದಿನದ ಧಾರಾಕಾರ ಮಳೆ ಸುರಿದರೆ ಭದ್ರಾ ನದಿಯ ರೂಪವನ್ನೇ ಬದಲಿಸುವುದು ಇಲ್ಲಿನ ವಿಶೇಷ.

ಪೂರಕ ಮಾಹಿತಿ: ರವಿ ಕೆಳಂಗಡಿ, ರಾಘವೇಂದ್ರ ಕೆ.ಎನ್., ರವಿಕುಮಾರ್ ಶೆಟ್ಟಿಹಡ್ಲು.

ಮೂಡಿಗೆರೆ ತಾಲ್ಲೂಕಿನ ಹಂತೂರು ಗ್ರಾಮದ ಬಳಿ ಮೈದುಂಬಿ ಹರಿಯುತ್ತಿರುವ ಹೇಮಾವತಿ ನದಿ 
ಮೂಡಿಗೆರೆ ತಾಲ್ಲೂಕಿನ ಹಂತೂರು ಗ್ರಾಮದ ಬಳಿ ಮೈದುಂಬಿ ಹರಿಯುತ್ತಿರುವ ಹೇಮಾವತಿ ನದಿ 
ಶೃಂಗೇರಿ ಬಳಿ ತುಂಬಿ ಹರಿಯುತ್ತಿರುವ ತುಂಗಾ ನದಿ
ಶೃಂಗೇರಿ ಬಳಿ ತುಂಬಿ ಹರಿಯುತ್ತಿರುವ ತುಂಗಾ ನದಿ
ಕೊಪ್ಪ ತಾಲ್ಲೂಕಿನ ಹರಿಹರಪುರ ಬಳಿ ಹರಿಯುತ್ತಿರುವ ತುಂಗಾ ನದಿ
ಕೊಪ್ಪ ತಾಲ್ಲೂಕಿನ ಹರಿಹರಪುರ ಬಳಿ ಹರಿಯುತ್ತಿರುವ ತುಂಗಾ ನದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT