ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಿಗಿಂತ ಹೃದಯ ಶ್ರೀಮಂತಿಕೆ ದೊಡ್ಡದು

ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ
Last Updated 19 ಅಕ್ಟೋಬರ್ 2020, 1:58 IST
ಅಕ್ಷರ ಗಾತ್ರ

ಬಾಳೆಹೊನ್ನೂರು: ‘ಮೋಡದಿಂದ ಸ್ವಲ್ಪ ಕಾಲ ಸೂರ್ಯ ಕಾಣದಿರಬಹುದು. ಆದರೆ, ಸೂರ್ಯನ ಅದ್ಭುತ ಶಕ್ತಿಯನ್ನು ಯಾರೂ ತಡೆಹಿಡಿಯಲಾಗದು. ದಾರಿ ಯಲ್ಲಿ ಮುಳ್ಳು ಬಿದ್ದಾಗ ಬದಿಯಲ್ಲಿ ಸರಿದು ಹೋಗುವುದು ಬುದ್ಧಿವಂತಿಕೆ. ಅದನ್ನು ಪಕ್ಕಕ್ಕೆ ತೆಗೆದು ಹಾಕಿ ಹೋಗುವುದು ಹೃದಯವಂತಿಕೆ. ಬುದ್ಧಿಗಿಂತ ಹೃದಯ ಶ್ರೀಮಂತಿಕೆ ದೊಡ್ಡದೆಂದು ಹಿರಿಯರು ಹೇಳಿದ್ದುಂಟು’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು.

ಪೀಠದಲ್ಲಿ ನಡೆಯುತ್ತಿರುವ 29ನೇ ವರ್ಷದ ಶರನ್ನವರಾತ್ರಿ ದಸರಾ ಆಚರಣೆಯ 2ನೇ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ‘ಬೆಸೆಯುವ ಸೇತುವೆ ಮತ್ತು ಬೇರ್ಪಡಿಸುವ ಗೋಡೆ ಎರಡಕ್ಕೂ ಮೂಲ ವಸ್ತುಗಳು ಒಂದೇ. ಹೆಚ್ಚು ಸೇತುವೆ ನಿರ್ಮಿಸುವ ಕೆಲಸ ಮಾಡಬೇಕಲ್ಲದೇ ಗೋಡೆ ಕಟ್ಟುವ ಕೆಲಸವಾಗಬಾರದು. ಶಕ್ತಿ ವಿಶಿಷ್ಟನಾದ ಪರಮಾತ್ಮ- ಜೀವಾತ್ಮರ ಸಂಬಂಧವನ್ನು ಸಾರುವುದೇ ವೀರಶೈವ ಧರ್ಮ ಸಿದ್ಧಾಂತದ ಗುರಿಯಾಗಿದೆ. ಸಮಾಜದಲ್ಲಿ ಸಾತ್ವಿಕ ಶಕ್ತಿಗಳು ಬೆಳೆಯುವುದು ನಿಧಾನ. ಆದರೆ, ದುಷ್ಟ ಶಕ್ತಿಗಳು ಬೇಗ ಬೆಳೆದು ನಾಶಗೊಳ್ಳುತ್ತವೆ. ದ್ವೇಷ ಅಸೂಯೆಗಳು ನಿರ್ನಾಮಗೊಂಡು ಸ್ನೇಹ ಸಾಮರಸ್ಯ ಬೆಳೆಯಬೇಕಾಗಿದೆ’ ಎಂದರು.

ಮಾಜಿ ಸಚಿವ ಡಿಎನ್. ಜೀವರಾಜ್ ಅವರು ‘ರೇಣುಕ ಗೀತೆ’ ಎಂಬ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿ, ‘ಆರೋಗ್ಯಕರ ಸಮಾಜ ನಿರ್ಮಾಣಗೊಳ್ಳಲು ಧರ್ಮ ಪೀಠಗಳ ಮಾರ್ಗದರ್ಶನ ಅವಶ್ಯಕ. ನವರಾತ್ರಿ ನಾಡ ಹಬ್ಬದಲ್ಲಿ ಆದಿಶಕ್ತಿಯನ್ನು ಆರಾಧಿಸಿ ಕೃತಾರ್ಥರಾಗುವ ಪವಿತ್ರ ಕಾಲ. ದುಷ್ಟರ ಸಂಹಾರ ಒಳ್ಳೆಯವರ ಸಂರಕ್ಷಣೆಗಾಗಿಯೇ ದೇವಿಯ ಅವತಾರವಾಗಿದೆ. ರಂಭಾಪುರಿ ಪೀಠ ಮಾನವ ಧರ್ಮದ ಮೂಲಕ ಸಾಮರಸ್ಯ ಸದ್ಭಾವ ಬೆಳೆಸುವ ಕೆಲಸ ಮಾಡುತ್ತಿದೆ’ ಎಂದರು.

ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ, ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಮಳಲಿ ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಎಂ.ಎಸ್. ಚನ್ನಕೇಶವ, ಶಿವಮೊಗ್ಗದ ಶಾಂತಾ ಆನಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT