ಶನಿವಾರ, ಡಿಸೆಂಬರ್ 7, 2019
22 °C
ಮೂಡಿಗೆರೆ ತಾಲ್ಲೂಕಿನ ಅತಿವೃಷ್ಟಿ ಹಾನಿ ಪ್ರದೇಶಕ್ಕೆ ಕಂದಾಯ ಸಚಿವ ಆರ್.ಅಶೋಕ್ ಭೇಟಿ

ಬದಲಿ ಕೃಷಿ ಭೂಮಿಗೆ ಸಂತ್ರಸ್ತರ ಮೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡಿಗೆರೆ: ತಾಲ್ಲೂಕಿನ ಮಳೆಹಾನಿ ಪ್ರದೇಶಕ್ಕೆ ಗುರುವಾರ ಕಂದಾಯ ಸಚಿವ ಆರ್. ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಮಧ್ಯಾಹ್ನ ಬಿದರಹಳ್ಳಿ ಗ್ರಾಮದ ಮುಗ್ರಹಳ್ಳಿ ಯಲ್ಲಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಕೇಂದ್ರದಲ್ಲಿರುವ ಆಲೇಖಾನ್ ಹೊರಟ್ಟಿ ಗ್ರಾಮದ ನಿರಾಶ್ರಿತರೊಂದಿಗೆ ಮಾತುಕತೆ ನಡೆಸಿದರು.

‘ಕೃಷಿ ಭೂಮಿ ಕಳೆದುಕೊಂಡಿರುವ ನಾವೆಲ್ಲರೂ, ಜೀವನ ಸಾಗಿಸುವುದೇ ಕಷ್ಟಕರವಾಗಿದ್ದು, ಭೂ ಕುಸಿತ ಸಂಭವಿಸಿ ಕೃಷಿ ಭೂಮಿ ಹಾನಿಯಾಗಿರುವ ರೈತರಿಗೆ ಬದಲಿ ಕೃಷಿ ಭೂಮಿಯನ್ನು ನೀಡಬೇಕು’ ಎಂದು ನಿರಾಶ್ರಿತರು ಒಕ್ಕೊರಲಿನಿಂದ ಮನವಿ ಮಾಡಿದರು.

ನಿರಾಶ್ರಿತರ ಮನವಿ ಆಲಿಸಿದ ಬಳಿಕ ಸಚಿವ ಆರ್. ಅಶೋಕ್ ಮಾತನಾಡಿ, ‘ತಾಲ್ಲೂಕಿನಲ್ಲಿ ಲಭ್ಯವಿರುವ ಕಂದಾಯ ಭೂಮಿಯನ್ನು ಗುರುತು ಮಾಡಲು ಸೂಚಿಸಿದ್ದು, ಈಗಾಗಲೇ 374 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ಮಳೆಯಿಂದ ಹಾನಿಗೊಳಗಾದವರಿಗೆ ಸೂಕ್ತ ಪರಿಹಾರ ನೀಡುವ ಸಲುವಾಗಿ, ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಲಾ ಗಿದ್ದು, ಭಾಗಶಃ ಹಾನಿ ಹಾಗೂ ಸಂಪೂರ್ಣ ಹಾನಿಯ ಬಗ್ಗೆ ಪಟ್ಟಿ ತಯಾರಿಸಿ, ಸಂಪೂರ್ಣ ಮನೆಗಳು ಹಾನಿಯಾಗಿರುವ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು ₹ 5 ಲಕ್ಷ ಪರಿ ಹಾರವನ್ನು ನೀಡಲಾಗುತ್ತಿದೆ’ ಎಂದರು.

‘ಮನೆಗೆ ಭಾಗಶಃ ಹಾನಿಯಾದವರಿಗೆ ಎರಡು ವಿಧಗಳ ಅಡಿಯಲ್ಲಿ ಪರಿಹಾರ ನೀಡಲು ಈಗಾಗಲೇ ಮುಂದಾಗಿದ್ದು, ಅಧಿಕಾರಿಗಳ ವರದಿಯನ್ವಯ ಪರಿಹಾರ ನೀಡಲಾಗುತ್ತಿದೆ. ಮನೆ ಹಾನಿಗೊಳಗಾದ ಎಲ್ಲಾ ಫಲಾನುಭವಿಗಳಿಗೂ ಪರಿಹಾರ ಸಿಗಲಿದೆ. ನಿರಾಶ್ರಿತರಿಗೆ ನರೇಗಾ ದಲ್ಲಿ ಉದ್ಯೋಗ, ಆರೋಗ್ಯ, ನಿರಾಶ್ರಿತರ ಮಕ್ಕಳಿಗೆ ಶಿಕ್ಷಣ ಹಾಗೂ ಮಕ್ಕಳ ಆರೋಗ್ಯಕ್ಕೂ ಕ್ರಮ ಕೈಗೊಳ್ಳಲಾಗುವುದು. ಪರಿಹಾರ ಕೇಂದ್ರದಲ್ಲಿ ಸಂಪೂರ್ಣ ಅವಲೋಕನ ನಡೆಸಿದ್ದು, ಯಾವುದೇ ಸವಲತ್ತುಗಳನ್ನು ಕಡಿತಗೊಳಿಸದಂತೆ ಸೂಚಿಸಲಾಗಿದೆ. ರಸ್ತೆ ಅಭಿವೃದ್ಧಿಗೂ ಅನುದಾನ ಬಿಡುಗಡೆ ಮಾಡಲಾಗಿದೆ’ ಎಂದರು.

ಬಳಿಕ ಬಣಕಲ್ ಮಾರ್ಗವಾಗಿ ಸಬ್ಲಿ, ಚೆನ್ನಡ್ಲು ಮೂಲಕ ಸುಂಕಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಧುಗುಂಡಿ ಗ್ರಾಮಕ್ಕೆ ಭೇಟಿ ನೀಡಿ, ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು.

ಶಾಸಕ ಎಂ.ಪಿ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಮಾಜಿ ಸಚಿವ ಡಿ.ಎನ್.ಜೀವರಾಜ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಸಿ.ರತನ್, ಜಿಲ್ಲಾಧಿಕಾರಿ ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ. ಅಶ್ವತಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಂಜನ್ ಅಜಿತ್ ಕುಮಾರ್, ಕಾಂಗ್ರೆಸ್ ಮುಖಂಡ ಬಿ.ಎಸ್.ಜಯರಾಂ, ಜಿಲ್ಲಾ ಪಂಚಾಯಿತಿ ಸದಸ್ಯೆ ಸುಧಾ ಯೋಗೇಶ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಭಾರತೀ ರವೀಂದ್ರ ಇದ್ದರು.

ಮಳೆಯ ನಡುವೆ ಭೇಟಿ: ಗುರುವಾರ ಮಧ್ಯಾಹ್ನದ ಬಳಿಕ ಮಳೆ ಪ್ರಾರಂಭವಾಗಿದ್ದು, ಸಂಜೆಯವರೆಗೂ ತುಂತುರು ಮಳೆಯಾಗುತ್ತಿತ್ತು. ತುಂತುರು ಮಳೆಯ ನಡುವೆಯೇ ಪರಿಹಾರ ಕೇಂದ್ರಕ್ಕೆ ಬಂದ ಸಚಿವರು, ಅಲ್ಲಿಯೇ ಭೋಜನ ಸವಿದು, ಮಳೆಹಾನಿ ಪ್ರದೇಶವನ್ನು ವೀಕ್ಷಿಸಿದರು.

ಪ್ರತಿಕ್ರಿಯಿಸಿ (+)