ಚಿಕ್ಕಮಗಳೂರು: ಜುಲೈ ತಿಂಗಳ ಮಳೆಗೆ ಜಿಲ್ಲೆ ನಲುಗಿ ಹೋಗಿದೆ. ಹಲವರು ಸೂರು ಕಳೆದುಕೊಂಡಿದ್ದರೆ, ಇನ್ನೊಂದೆಡೆ ಶಾಲಾ, ಕಾಲೇಜು, ಅಂಗನವಾಡಿ ಕಟ್ಟಡಗಳು ಹಾನಿಗೀಡಾಗಿವೆ. ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ 438 ಶಾಲಾ– ಕಾಲೇಜು ಕಟ್ಟಡಗಳು ಹಾನಿಗೀಡಾಗಿದ್ದು, ಸೋರುವ ಶಾಲೆ, ಬಿದ್ದಿರುವ ಗೋಡೆ, ಶೀತದ ನೆಲದಲ್ಲೇ ಕುಳಿತು ಮಕ್ಕಳು ಪಾಠ ಕೇಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಬಿರುಗಾಳಿ ಸಹಿತ ಸುರಿದ ಮಳೆಗೆ ಬಹುತೇಕ ಕಡೆ ಶಾಲಾ ಕಟ್ಟಡಗಳ ಚಾವಣಿಗೆ ಹಾನಿಯಾಗಿವೆ. ಗೋಡೆಗಳು ಬಿರುಕು ಬಿಟ್ಟಿವೆ. ನೆಲ ಮತ್ತು ಗೋಡೆಗಳಿಗೆ ಏರಿರುವ ಶೀತದಿಂದ ಭಯದಲ್ಲೇ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಎಂಟು ಶೈಕ್ಷಣಿಕ ವಲಯಗಳ ಪೈಕಿ ಬೀರೂರು ವಲಯದಲ್ಲಿ ಅತಿ ಹೆಚ್ಚು 89 ಶಾಲಾ ಕಟ್ಟಡಗಳಿಗೆ ಹಾನಿಯಾಗಿದೆ. ಬಯಲು ಸೀಮೆಯಾದರೂ ಗಾಳಿ ಮಳೆ ರಭಸಕ್ಕೆ ಶಾಲಾ ಕಟ್ಟಡಗಳು ಹಾಳಾಗಿವೆ. ಬಯಲು ಸೀಮೆಯಲ್ಲಿ ಕಟ್ಟಡದ ಚಾವಣಿ ಹಾರಿ ಹೋಗಿರುವ ಸಂಖ್ಯೆಯೇ ಹೆಚ್ಚು. ಚಿಕ್ಕಮಗಳೂರು ವಲಯದಲ್ಲಿ 61 ಶಾಲೆಗಳಿಗೆ ಹಾನಿಯಾಗಿದೆ. ಒಟ್ಟಾರೆ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡಗಳೇ ಹೆಚ್ಚಿನ ಸಂಖ್ಯೆಯಲ್ಲಿ ಹಾಳಾಗಿವೆ.
ಸೋರುವ ಶಾಲೆಗಳಿಗೆ ಟಾರ್ಪಲ್ ಹೊದಿಕೆ ರೀತಿಯ ಹಲವು ತಾತ್ಕಾಲಿಕ ಕ್ರಮಗಳನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಕೈಗೊಂಡಿದ್ದಾರೆ. ಮಳೆಯಿಂದ ಹಾಳಾಗಿರುವ ಕಟ್ಟಡಗಳ ಕುರಿತು ವರದಿ ಸಿದ್ಧಪಡಿಸಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅನುದಾನ ದೊರೆತರೆ ಮಳೆ ನಿಂತ ಬಳಿಕ ದುರಸ್ತಿ ಕಾರ್ಯ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ.
24 ಪದವಿ ಪೂರ್ವ ಕಾಲೇಜಿಗೂ ಹಾನಿ ಜಿಲ್ಲೆಯ 24 ಪದವಿ ಪೂರ್ವ ಕಾಲೇಜು ಕಟ್ಟಡಗಳಿಗೂ ಮಳೆಯಿಂದ ಹಾನಿಯಾಗಿದೆ ಬಹುತೇಕ ಕಡೆಗಳಲ್ಲಿ ಚಾವಣಿ ಹಾರಿ ಹೋಗಿವೆ. ಚಿಕ್ಕಮಗಳೂರು ತಾಲ್ಲೂಕಿನಲ್ಲಿ 5 ಕಡೂರು 5 ತರೀಕೆರೆ 6 ಶೃಂಗೇರಿ 5 ಹಾಗೂ ಮಾಡಿಗೆರೆ ತಾಲ್ಲೂಕಿನ 3 ಕಾಲೇಜು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
145 ಅಂಗನವಾಡಿಗೆ ಹಾನಿ
ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಕಲಿಕೆಯ ತಾಣವಾಗಿರುವ ಅಂಗನವಾಡಿ ಕಟ್ಟಡಗಳಲ್ಲಿ 145 ಕಟ್ಟಡಗಳು ಕಷ್ಟಕ್ಕೆ ಸಿಲುಕಿವೆ. ಚಿಕ್ಕಮಗಳೂರು ತಾಲ್ಲೂಕಿನ 43 ಕಡೂರು 20 ಕೊಪ್ಪ 13 ಮೂಡಿಗೆರೆ 1 ನರಸಿಂಹರಾಜಪುರ 23 ತರೀಕೆರೆ 26 ಹಾಗೂ ಅಜ್ಜಂಪುರ ತಾಲ್ಲೂಕಿನ 18 ಅಂಗನವಾಡಿಗಳಿಗೆ ಹಾನಿಯಾಗಿದೆ.
ಶಿಥಿಲಾವಸ್ಥೆಗೆ ಶಾಲೆ
ಆಲ್ದೂರು: 68 ವರ್ಷಗಳಷ್ಟು ಹಳೆಯದಾದ ಇಲ್ಲಿನ ಸರ್ಕಾರಿ ಪ್ರೌಢಶಾಲೆ ಈಗ ಶಿಥಿಲಾವಸ್ಥೆ ತಲುಪಿದೆ. ಜುಲೈ ತಿಂಗಳಿನಲ್ಲಿ ಸುರಿದ ಮಳೆಗೆ ಕಟ್ಟಡದ ಚಾವಣಿ ಹಾಳಾಗಿ ಸೋರಿಕೆಯಾಗುತ್ತಿದೆ. ಸಂಪೂರ್ಣ ದುರಸ್ತಿಗೆ ₹20 ಲಕ್ಷ ಅನುದಾನ ಅಗತ್ಯವಿದ್ದು ಒದಗಿಸುವಂತೆ ಜಿಲ್ಲಾಧಿಕಾರಿ ಮತ್ತು ಶಾಸಕರಿಗೆ ಮನವಿ ಮಾಡಲಾಗಿದೆ ಎಂದು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಯು.ಇಬ್ರಾಹಿಂ ತಿಳಿಸಿದರು.
ಸೋರುವ ಶಾಲೆಗಳು
ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಹಲವು ಸರ್ಕಾರಿ ಶಾಲೆಯ ಕಟ್ಟಡಗಳು ಸೋರುತ್ತಿದ್ದು ಮಕ್ಕಳು ಜೀವ ಭಯದಲ್ಲಿ ಪಾಠ ಕೇಳುವ ಸ್ಥಿತಿಯಿದೆ. ಪಟ್ಟಣದ ಬಸ್ತಿಮಠದ ಸಮೀಪ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 115 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಕಟ್ಟಡ ಹಳೆಯದಾಗಿದ್ದು ಬಹುತೇಕ ಶಾಲಾ ಕೊಠಡಿಗಳು ಸೋರುತ್ತಿವೆ. ಒಂದು ಕೊಠಡಿಯಲ್ಲಿ ನೀರು ಸೋರಿಕೆಯಾಗಿ ಗೋಡೆ ಸಂಪೂರ್ಣ ಶಿಥಿಲದ ಹಂತ ತಲುಪಿದೆ. ಈ ಕೊಠಡಿಯ ಪಕ್ಕದ ಕೊಠಡಿಯಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಇದೇ ಶಾಲೆಯಲ್ಲಿ ಶೌಚಾಲಯವೂ ಶಿಥಿಲಾವಸ್ಥೆಗೆ ತಲುಪಿದೆ. ಶೌಚಾಲಯ ನಿರ್ಮಾಣಕ್ಕೆ ₹7 ಲಕ್ಷ ಅನುದಾನ ಮಂಜೂರಾಗಿತ್ತು. ಆದರೆ ಗ್ರಾಮ ಪಂಚಾಯಿತಿ ಅನುದಾನವನ್ನು ಹಿಂದಕ್ಕೆ ಪಡೆದಿದ್ದು ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರಾಥಮಿಕ ಶಾಲಾ ಕಟ್ಟಡ ನೂರು ವರ್ಷಕ್ಕೂ ಹಳೆಯದಾಗಿದ್ದು ಕೊಠಡಿ ಸೋರುತ್ತಿದೆ. ನೀರು ಸಂಗ್ರಹಕ್ಕೆ ಬಕೆಟ್ ಇಡಲಾಗಿದೆ. ಕಡಹಿನಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳದಮನೆ ಗ್ರಾಮದ ಸರ್ಕಾರಿ ಶಾಲೆಯ ಚಾವಣಿ ಸೋರುತ್ತಿದ್ದು ಟಾರ್ಪಲ್ ಅಳವಡಿಸಲಾಗಿದೆ. ಆದರೂ ಮಳೆ ಬಂದಾಗ ಸೋರುತ್ತದೆ. ಬಾಳೆಹೊನ್ನೂರಿನ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ ಚಾವಣಿ ಕುಸಿದಿದೆ. ಬಿ.ಕಣಬೂರು ಗ್ರಾಮದ ಅಂಗನವಾಡಿ ಕೇಂದ್ರದ ತಡೆಗೋಡೆ ಕುಸಿದಿದೆ. ಇಟ್ಟಿಗೆ ಸಿಗೋಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿ ಕುಸಿದಿದೆ.
ಬಿರುಕು ಬಿಟ್ಟ ಗೋಡೆ
ತರೀಕೆರೆ: ತರೀಕೆರೆ ಮತ್ತು ಅಜ್ಜಂಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆ ಕಟ್ಟಡಗಳಿಗೆ ಭಾರಿ ಹಾನಿಯಾಗದಿದ್ದರೂ ಗೋಡೆ ಬಿರುಕು ಬಿಟ್ಟ ಮತ್ತು ಸೋರುತ್ತಿರುವ ಪ್ರಕರಣಗಳು ವರದಿಯಾಗಿದೆ. ಈವರೆಗೂ 52 ಶಾಲೆಗಳನ್ನು ಗುರುತಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಕಟ್ಟಡಗಳು ಹಳೆಯದಾಗಿದ್ದು ಅವುಗಳಲ್ಲಿ ಶಿಥಿಲಗೊಂಡ ಕಟ್ಟಡಗಳು ಹೆಚ್ಚಾಗಿವೆ. ಕೆಲವು ಶಾಲೆಗಳಲ್ಲಿ ಶೌಚಾಲಯ ಅಧೋಗತಿಯಲ್ಲಿವೆ. ಇದರಿಂದ ಶಾಲಾ ಮಕ್ಕಳು ಮತ್ತು ಶಿಕ್ಷಕರು ಈ ಮಳೆಗಾಲದಲ್ಲಿ ಶೌಚಾಲಯಕ್ಕಾಗಿ ಪರದಾಡುವಂತಾಗಿದೆ.
ಶಾಲೆ ಬಳಿಯೇ ಕುಸಿತ
ಕಳಸ ತಾಲ್ಲೂಕಿನಲ್ಲಿ ಮಳೆಯಿಂದಾಗಿ ಶಾಲೆಗಳಿಗೆ ಹೆಚ್ಚಿನ ಹಾನಿ ಆಗಿಲ್ಲ. ಹೊರನಾಡು ಪ್ರೌಢಶಾಲೆಯ ಒಂದು ಕೊಠಡಿಯ ಗೋಡೆ ಬಿರುಕು ಬಿಟ್ಟಿದೆ. ಸಂಸೆ ಪ್ರಾಥಮಿಕ ಶಾಲೆಯ ಹೆಂಚುಗಳು ಒಡೆದು ನೀರು ಒಳಗೆ ಜಿನುಗುತ್ತಿದೆ. ಕಳೆದ ವರ್ಷ ಹಾನಿಯಾಗಿದ್ದ ಹಿರೇಬೈಲ್ ಪ್ರಾಥಮಿಕ ಶಾಲೆಯ ಕೊಠಡಿ ದುರಸ್ತಿ ಈವರೆಗೂ ಆರಂಭವಾಗಿಲ್ಲ. ಕಾಮಗಾರಿ ಆರಂಭಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದು ಲೋಕೋಪಯೋಗಿ ಎಂಜಿನಿಯರ್ ತಿಳಿಸಿದ್ದಾರೆ. ಹಿರೇಬೈಲ್ ಶಾಲೆಗೆ ಹೊಂದಿಕೊಂಡ ಧರೆ ಶನಿವಾರ ಕುಸಿದಿದೆ. ಇದರಿಂದ ಆ ಶಾಲೆಯ 28 ಮಕ್ಕಳು ಭಯಗೊಂಡಿದ್ದಾರೆ. ಶಾಲೆಯ ಕಾಂಪೌಂಡ್ ಕೂಡ ಕುಸಿಯುವ ಅಪಾಯವಿದ್ದು ತುರ್ತಾಗಿ ಕಾಮಗಾರಿ ದುರಸ್ತಿಪಡಿಸಬೇಕು ಎಂಬುದು ಪೋಷಕರು ಆಗ್ರಹ.
ಹಾನಿಯಾಗಿರುವ ಶಾಲಾ ಕಟ್ಟಡಗಳ
ವಿವರ ಶೈಕ್ಷಣಿಕ ವಲಯ; ಹಿರಿಯ ಪ್ರಾಥಮಿಕ ಶಾಲೆ; ಕಿರಿಯ ಪ್ರಾಥಮಿಕ ಶಾಲೆ; ಪ್ರೌಢಶಾಲೆ; ಒಟ್ಟು ತರೀಕೆರೆ; 28; 3; 3; 34 ಬೀರೂರು; 40; 43; 6; 89 ಚಿಕ್ಕಮಗಳೂರು; 28; 28; 5; 61 ಕಡೂರು; 16; 10; 1; 27 ಕೊಪ್ಪ; 17; 2; 4; 23 ಎನ್.ಆರ್.ಪುರ; 4; 3; 1; 8 ಶೃಂಗೇರಿ; 5; –;–; 5 ಮೂಡಿಗೆರೆ; 22; –; –; 22 ಒಟ್ಟು; 160; 89; 20; 269
ಚಾವಣಿ ಕುಸಿತವೇ ಹೆಚ್ಚು
ಕೊಪ್ಪ ತಾಲ್ಲೂಕಿನಲ್ಲಿ 23 ಸರ್ಕಾರಿ ಶಾಲೆಗಳು 13 ಅಂಗನವಾಡಿ ಕೇಂದ್ರಗಳು ಅತಿವೃಷ್ಟಿಯಿಂದ ಹಾನಿಗೀಡಾಗಿವೆ. ಅತ್ತಿಕೊಡಿಗೆ ಪಂಚಾಯಿತಿ ವ್ಯಾಪ್ತಿಯ ಒಂದು ಕೇಂದ್ರ ಭುವನಕೋಟೆ ಪಂಚಾಯಿತಿ ವ್ಯಾಪ್ತಿ ಹೆದ್ಸೆಯಲ್ಲಿನ ಒಂದು ಅಂಗನವಾಡಿ ಕೇಂದ್ರ ತೀವ್ರ ಹಾನಿಗೊಳಗಾಗಿವೆ. ಶಾಲೆಗಳ ಪೈಕಿ ಅತ್ತಿಕೊಡಿಗೆ ಪಂಚಾಯಿತಿ ವ್ಯಾಪ್ತಿ ಕವನಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಾವಣಿಗೆ ಹಾನಿಯಾಗಿದೆ. ವೀರಗಲ್ಲುಮಕ್ಕಿ ಪ್ರಾಥಮಿಕ ಶಾಲೆಯ ಚಾವಣಿಯಿಂದ ನೀರು ಗೋಡೆ ಮೇಲೆ ಸೋರುತ್ತಿದೆ. ಹಾಲ್ಮತ್ತೂರು ಹಿರಿಯ ಪ್ರಾಥಮಿಕ ಶಾಲೆ ಅಸಗೋಡು ಮೇಲುಬಿಳುರೆಯ ಹಿರಿಯ ಪ್ರಾಥಮಿಕ ಶಾಲೆ ಚಾವಣಿ ಕುಸಿದಿದೆ. ಕಮ್ಮರಡಿ ಹಿರಿಯ ಪ್ರಾಥಮಿಕ ಶಾಲೆ ಕಾಂಪೌಂಡ್ ಕುಸಿದಿದೆ. ಲೋಕನಾಥಪುರ ಹಿರಿಯ ಪ್ರಾಥಮಿ ಶಾಲೆಯ ಗೋಡೆ ಬಿರುಕು ಮೂಡಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಕೊಪ್ಪ ಪಟ್ಟಣ ಶಾಲೆ ಚಾವಣಿ ಗೋಡೆಗೆ ಹಾನಿಯಾಗಿದೆ. ಹೆದ್ಸೆ ಹಿರಿಯ ಪ್ರಾಥಮಿಕ ಶಾಲೆ ಚಾವಣಿ ಗೋಡೆಗೆ ಹಾನಿಯಾಗಿದೆ. ಜಯಪುರದ ಹಿರಿಯ ಪ್ರಾಥಮಿಕ ಶಾಲೆ ಚಾವಣಿಗೆ ಹಾನಿಯಾಗಿದೆ. ಅಂದಗಾರು ಶಾಲೆಯ ಗೋಡೆಯಲ್ಲಿ ಬಿರುಕು ಮೂಡಿದೆ. ಲೋಕನಾಥಪುರ ಸರ್ಕಾರಿ ಪ್ರೌಢಶಾಲೆ ಕಟ್ಟಡಕ್ಕೆ ಧರೆ ಮಣ್ಣು ಜರಿದು ಕುಳಿತಿದೆ. ಬಪ್ಪುಂಜಿ ಹಾಗೂ ಕುದುರೆಗುಂಡಿ ಪ್ರೌಢಶಾಲೆಯ ಚಾವಣಿಗೆ ಹಾನಿಯಾಗಿದೆ. ಕಮ್ಮರಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಕಟ್ಟಡದ ಗೋಡೆ ಬಿರುಕು ಬಿಟ್ಟಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.