ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೃಂಗೇರಿ: ರಸ್ತೆ ಪಕ್ಕ ಬಸ್‌ ಕಾಯುವ ಅನಿವಾರ್ಯತೆ

ಶಿಥಿಲಾವಸ್ಥೆಗೊಂಡ ಬಸ್‌ ತಂಗುದಾಣಗಳಲ್ಲಿ ಪ್ರಯಾಣಿಕರಿಗೆ ನೆರಳಿಲ್ಲ
Last Updated 10 ಆಗಸ್ಟ್ 2021, 3:20 IST
ಅಕ್ಷರ ಗಾತ್ರ

ಶೃಂಗೇರಿ: ತಾಲ್ಲೂಕಿನಲ್ಲಿ ಹಲವು ಬಸ್‌ ತಂಗುದಾಣಗಳು ಶಿಥಿಲಾವಸ್ಥೆಗೊಂಡಿವೆ. ಹೀಗಾಗಿ, ಮಳೆ ಬರಲಿ, ಬಿಸಿಲು ಇರಲಿ ಪ್ರಯಾಣಿಕರು ಬಸ್‌ಗಾಗಿ ರಸ್ತೆ ಪಕ್ಕದಲ್ಲಿ ನಿಲ್ಲಬೇಕಾಗುವ ಪರಿಸ್ಥಿತಿ ಇದೆ.

ಕೂತುಗೋಡು ಪಂಚಾಯಿತಿ ವ್ಯಾಪ್ತಿಯ ಬೆಟ್ಟಗೆರೆಯ ತಂಗುದಾಣ ಮಳೆಯಿಂದ ಕುಸಿದು ಬಿದ್ದು, ಜನರು ರಸ್ತೆಯಲ್ಲಿ ನಿಲ್ಲುತ್ತಿದ್ದಾರೆ.

ತಾಲ್ಲೂಕಿನಲ್ಲಿ 90ಕ್ಕೂ ಹೆಚ್ಚು ತಂಗುದಾಣಗಳಲ್ಲಿ ಶೇ 60ರಷ್ಟು ಶಿಥಿಲಾ ವಸ್ಥೆಯಲ್ಲಿವೆ. ಮಣ್ಣಿನ ರಾಶಿಗಳು, ಪ್ಲಾಸ್ಟಿಕ್ ತೊಟ್ಟೆಗಳು, ಪಾಚಿಕಟ್ಟಿ ಎದ್ದಿರುವ ಹಸಿರು ಹುಲ್ಲು, ನೆಲದ ತುಂಬಾ ಹರಡಿರುವ ಮರಳು, ಸಗಣಿಗಳಿಂದ ತಂಗುದಾಣಗಳಲ್ಲಿ ನಿಲ್ಲಲು ಅಸಹ್ಯವಾಗುತ್ತದೆ.

ಕೆಲವು ತಂಗುದಾಣಗಳು ರಾತ್ರಿ ಕುಡುಕರ ಅಡ್ಡೆಯಾಗಿವೆ. ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮನೆಯಲ್ಲಿ ಬೆಳೆದ ತರಕಾರಿ ಮತ್ತು ಇನ್ನಿತರ ಬೆಳೆಗಳನ್ನು ಪಟ್ಟಣದ ಮಾರು ಕಟ್ಟೆಗೆ ಕೊಂಡೊಯ್ಯಲು, ಇಂದಿಗೂ ಬಹುತೇಕ ಜನ ಬಸ್‍ಗಳನ್ನು ಅವಲಂಬಿಸಿದ್ದಾರೆ. ಅಂಥರಿಗೆ ಬಸ್‌ ತಂಗುದಾಣದ ಅವಶ್ಯಕತೆ ಇದೆ.

ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಸಮುದಾಯ ಭವನ, ಗ್ರಂಥಾಲಯ, ಸರ್ಕಾರಿ ಕಟ್ಟಡಗಳು, ತಂಗುದಾಣ ನಿರ್ವಹಣೆಗಾಗಿ 14 ಮತ್ತು 15ನೇ ಹಣಕಾಸು ಯೋಜನೆಯಡಿ ಅನುದಾನ ಬರುತ್ತದೆ. ಗ್ರಾಮ ಪಂಚಾಯಿತಿ ಆದಾಯದಲ್ಲಿ ಕಟ್ಟಡದ ದುರಸ್ತಿ ಮಾಡಬಹುದು. ಆದರೆ, ಪಂಚಾಯಿತಿ ಅಧಿಕಾರಿಗಳಲ್ಲಿ ಇಚ್ಛಾಶಕ್ತಿಯ ಕೊರತೆ ಇದೆ. ತಾಲ್ಲೂಕಿನ ಭಕ್ತಂಪುರ, ಗುಬ್ಬು ಗೋಡು, ಸಂಕ್ಲಾಪುರ, ಕರುವಾನೆ, ಮೆಣಸೆ, ಕೆರೆಕಟ್ಟೆ, ಕುತೂಗೋಡು, ಅನೆಗುಂದ ಮುಂತಾದ ಕಡೆ ಇರುವ ತಂಗುದಾಣಗಳಲ್ಲಿ ನಿರ್ವಹಣೆ ಕೊರತೆ ಯಿಂದ ಪಾಳು ಬಿದ್ದಿವೆ. ಅನುದಾನದ ಕೊರತೆಯಿದೆ ಎಂದು ಹೇಳುತ್ತಾ ಬರುವ ಜನಪ್ರತಿನಿಧಿಗಳು ಜನಸಾಮಾನ್ಯರ ಅಗತ್ಯವನ್ನು ಅರ್ಥೈಸಿಕೊಳ್ಳಲು ವಿಫಲವಾಗಿದ್ದಾರೆ ಎಂದು ಭಕ್ತಂಪುರದ ಗ್ರಾಮಸ್ಥರು ದೂರುತ್ತಾರೆ.

ಹಾಳು ಬಿದ್ದಿರುವ ತಂಗುದಾಣವನ್ನು ದುರಸ್ತಿಗೊಳಿಸುವುದು ಗ್ರಾಮ ಪಂಚಾ ಯಿತಿಗಳ ಕರ್ತವ್ಯ. ಸಂಬಂಧಪಟ್ಟವರು ಶಿಥಿಲಗೊಂಡ ತಂಗುದಾಣವನ್ನು ದುರಸ್ತಿಗೊಳಿಸಬೇಕು ಎಂದು ಬೆಟ್ಟಗೆರೆಯ ಶ್ರೀನಿವಾಸ್ ಮೂರ್ತಿ, ಶೃಂಗೇಶ್ವರ ಭಟ್, ಕೆರೆಮನೆ ರಾಜಶೇಖರ್, ಚಂದ್ರಶೇಖರ್ ಸೂರ್ಡಿ ಒತ್ತಾಯಿಸಿದ್ದಾರೆ.

‘ಜನರಿಗೂ ಸಾಮಾಜಿಕ ಪ್ರಜ್ಞೆ ಇರಲಿ’
ಗ್ರಾಮ ಪಂಚಾಯಿತಿ ಸುಪರ್ದಿಯಲ್ಲಿರುವ ಸರ್ಕಾರಿ ಕಟ್ಟಡಗಳು, ತಂಗುದಾಣಗಳು ಸುಸ್ಥಿತಿಯಲ್ಲಿದ್ದರೆ ಮಾತ್ರ ಗ್ರಾಮ ಪಂಚಾಯಿತಿಯ ಘನತೆ ಹೆಚ್ಚಾಗುತ್ತದೆ. ಊರು ಎಂದರೆ ಅಲ್ಲಿನ ಶಾಲೆಗಳು, ಸಮುದಾಯ ಭವನಗಳು, ಗ್ರಂಥಾಲಯಗಳು ಎಲ್ಲರ ಕಣ್ಮನ ಸೆಳೆಯುವಂತಿರಬೇಕು. ಯಾರದೋ ಸ್ಮರಣಾರ್ಥ ಕುಟುಂಬಸ್ಥರು ಕಟ್ಟಿರುವ ಸುಸ್ಥಿತಿಯಲ್ಲಿರುವ ತಂಗುದಾಣಗಳಲ್ಲಿ ಬ್ಯಾನರ್‌ಗಳು ಜೋತಾಡುತ್ತಿದೆ. ತಂಗುದಾಣವಿರುವುದು ಪ್ರಯಾಣಿಕರಿಗೆ ನಿಲ್ಲಲು ತಾಣ. ಸಾಮಾಜಿಕ ಪ್ರಜ್ಞೆ ನಾಗರಿಕರಿಗೂ ಇರಬೇಕು ಎನ್ನುತ್ತಾರೆ ಕೃಷಿಕ ವಿಶ್ವನಾಥ್ ಸೂರ್ಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT