ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪ: ಆಂಬುಲೆನ್ಸ್ ಚಾಲಕನ ಪುತ್ರಿಯ ಸಾಧನೆ

ವೈದ್ಯೆಯಾಗುವ ಕನಸು ಹೊತ್ತಿರುವ ಕೊಪ್ಪದ ಮಾನ್ಯಶ್ರೀ
Last Updated 10 ಆಗಸ್ಟ್ 2021, 3:22 IST
ಅಕ್ಷರ ಗಾತ್ರ

ಕೊಪ್ಪ: ಎಂ.ಎಸ್.ದ್ಯಾವೇಗೌಡ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಪ್ರಭಾಕರ ಶೆಟ್ಟಿ ಅವರ ಪುತ್ರಿ ಮಾನ್ಯಶ್ರೀ ಪಿ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆಯುವ ಮೂಲಕ ಸಾಧನೆ ತೋರಿದ್ದಾರೆ.

ಪಟ್ಟಣ ಸಮೀಪದ ಹುಲುಮಕ್ಕಿ (ದಾಸಮಠ)ಯಲ್ಲಿರುವ ಬಿ.ಜಿ.ಎಸ್.ವೆಂಕಟೇಶ್ವರ ವಿದ್ಯಾಮಂದಿರದ ವಿದ್ಯಾರ್ಥಿನಿಯಾಗಿರುವ ಮಾನ್ಯಶ್ರೀ, ತಾಲ್ಲೂಕಿನ ಹಿರೇಕೊಡಿಗೆ ಗ್ರಾಮದ ತಾವಳ್ಳಿ ಕೊಕ್ಕೋಡು ನಿವಾಸಿ ಪ್ರಭಾಕರ ಶೆಟ್ಟಿ ಮತ್ತು ಸಂಧ್ಯಾ ಶೆಟ್ಟಿ ಅವರ ಪುತ್ರಿ. ಮಾನ್ಯಶ್ರೀ ಕೇವಲ ಓದಿನಲ್ಲಿ ಅಷ್ಟೇ ಅಲ್ಲದೆ ಕ್ರೀಡೆ, ಸಾಂಸ್ಕೃತಿಕ, ವಿವಿಧ ಸ್ಪರ್ಧೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಪ್ರಾಥಮಿಕ ಶಾಲೆ ಹಂತದಲ್ಲಿದ್ದಾಗ ಸಾಮಾನ್ಯ ಜ್ಞಾನ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 21ನೇ ರ‍್ಯಾಂಕ್ ಪಡೆದಿದ್ದರು.

‘ಪರೀಕ್ಷೆ ಸುಲಭವಾಗಿರಲಿಲ್ಲ. ಆನ್‌ಲೈನ್ ತರಗತಿಗೆ ನೆಟ್‌ವರ್ಕ್‌ ಸಮಸ್ಯೆಯಾಗಿತ್ತು. ಟ್ಯೂಷನ್‌ಗೆ ಹೋಗುತ್ತಿದ್ದೆ. ತಂದೆ ತಾಯಿ, ಶಿಕ್ಷಕರು ಹೆಚ್ಚು ಪ್ರೋತ್ಸಾಹಿಸಿದ್ದರು. ವೈದ್ಯಕೀಯ ವಿಜ್ಞಾನ ಓದಬೇಕು ಎಂದುಕೊಂಡಿದ್ದು, ಈಗಾಗಲೇ ಪಿಯುಸಿಗೆ ಉಜಿರೆ ಎಸ್.ಡಿ.ಎಂ. ಕಾಲೇಜಿಗೆ ಸೇರಿದ್ದೇನೆ’ ಎಂದು ಮಾನ್ಯಶ್ರೀ ಪಿ. 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

‘ಮಗಳ ಸಾಧನೆ ಹೆಮ್ಮೆ ತಂದಿದೆ. ಎಲ್ಲ ಸ್‍ರ್ಧೆಯಲ್ಲೂ ಮುಂಚೂಣಿಯಲ್ಲಿದ್ದಳು. ಮಗಳು ವೈದ್ಯೆಯಾಗಲಿ ಎಂಬ ಆಸೆ ನಮ್ಮದು, ಆಕೆಯ ಸಾಧನೆಗೆ ಸದಾ ಪ್ರೋತ್ಸಾಹಿಸುತ್ತೇವೆ’ ಎಂದು ಪ್ರಭಾಕರ ಶೆಟ್ಟಿ, ಸಂಧ್ಯಾ ಶೆಟ್ಟಿ ದಂಪತಿ ಪ್ರತಿಕ್ರಿಯಿಸಿದರು.

‘ಮಾನ್ಯಶ್ರೀ ಓದಿನಲ್ಲಿ ಅಷ್ಟೆ ಅಲ್ಲದೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದಳು. ವಿದ್ಯಾರ್ಥಿನಿಯ ಪ್ರತಿಭೆಯನ್ನು ಗುರುತಿಸಿ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ಅವರು ಶಾಲಾ ಶುಲ್ಕ ರಿಯಾಯಿತಿ ನೀಡಿದ್ದರು. ಆಕೆಯ ಸಾಧನೆ ನಮ್ಮೆಲ್ಲರಿಗೂ ಹೆಮ್ಮೆ ಎನಿಸಿದೆ’ ಎಂದು ಬಿಜಿಎಸ್ ವೆಂಕಟೇಶ್ವರ ವಿದ್ಯಾಮಂದಿರದ ಪ್ರಾಂಶುಪಾಲ ಎಚ್.ಕೆ.ಮಹಾಬಲೇಶ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT