ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ಸೆಂಟ್ಸ್ ಜಾಗದ ಹಕ್ಕುಪತ್ರಕ್ಕೆ ಅಲೆದಾಟ

ಮಹಿಳೆಗೆ ನ್ಯಾಯ ಒದಗಿಸಲು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೋರಾಟ
Last Updated 9 ಮಾರ್ಚ್ 2021, 3:22 IST
ಅಕ್ಷರ ಗಾತ್ರ

ಪುತ್ತೂರು: ‘3 ಸೆಂಟ್ಸ್ ಜಾಗದ ಹಕ್ಕುಪತ್ರಕ್ಕಾಗಿ ಮಹಿಳೆಯೊಬ್ಬರನ್ನು ಅಧಿಕಾರಿಗಳು ನೂರಾರು ಬಾರಿ ಕಚೇರಿಗೆ ಅಲೆದಾಡುವಂತೆ ಮಾಡಿದ್ದಾರೆ. 25 ವರ್ಷಗಳಿಂದ ವಾಸ್ತವ್ಯವಿರುವ ಈ ಮಹಿಳೆಗೆ ಅನ್ಯಾಯವಾಗಿದೆ’ ಎಂದು ಆರೋಪಿಸಿರುವ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರು, ಸೋಮವಾರ ಪುತ್ತೂರು ಮಿನಿ ವಿಧಾನಸೌಧಕ್ಕೆ ಭೇಟಿ ನೀಡಿ, ಮಹಿಳೆಗೆ ನ್ಯಾಯ ಒದಗಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

‘ತಾಲ್ಲೂಕು ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಸಂತತಿ ನಕ್ಷೆ ನೀಡುವಲ್ಲಿಯೂ ವಿಳಂಬವಾಗುತ್ತಿದೆ. ಉಪ ನೋಂದಣಿ ಕಚೇರಿಯಲ್ಲಿ ಸಮರ್ಪಕ ಕೆಲಸವೇ ನಡೆಯುತ್ತಿಲ್ಲ. ಕೇಳಿದರೆ ಸರ್ವರ್ ಸಮಸ್ಯೆ ಎಂದು ಹೇಳುತ್ತಿದ್ದಾರೆ. ಜಾಗದ ಪ್ಲಾಂಟಿಂಗ್ ಆಗದೆ ಜನತೆ ಕಷ್ಟಪಾಡುವಂತಾಗಿದೆ ಎಂದು ಅವರು ಆರೋಪಿಸಿದರು.

ಈ ಬಗ್ಗೆ ಪುತ್ತೂರು ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್ ಮತ್ತುತಹಶೀಲ್ದಾರ್ ರಮೇಶ್ ಬಾಬು ಅವರೊಂದಿಗೆ ಚರ್ಚೆ ನಡೆಸಿದ ಶಕುಂತಳಾ ಶೆಟ್ಟಿ, ‘ಮಚ್ಚಿಮಲೆ ನಿವಾಸಿ ಸೀತಮ್ಮ ಬಡ ಮಹಿಳೆಯಾಗಿದ್ದು, ಒಂದು ವರ್ಷದಲ್ಲಿ ನೂರಾರು ಬಾರಿ ನಿಮ್ಮ ಕಚೇರಿಗೆ ಅಲೆದಾಟ ಮಾಡಿದ್ದಾರೆ. ಅವರಿಗೆ 3 ಸೆಂಟ್ಸ್ ಜಾಗದ ಹಕ್ಕುಪತ್ರ ನೀಡಲು ಸಾಧ್ಯವಾಗಿಲ್ಲ. ಇನ್ನು ನಿಮ್ಮ ಕಚೇರಿಯ ಬಾಗಿಲಲ್ಲಿ ಧರಣಿ ಕುಳಿತುಕೊಳ್ಳುವುದೊಂದೇ ನಮಗೆ ಉಳಿದಿರುವ ದಾರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಿಮ್ಮ ಇಲಾಖೆಯಲ್ಲಿಯೇ ವ್ಯಕ್ತಿಯೊಬ್ಬರಿಂದ ಆ ಬಡ ಮಹಿಳೆಗೆ ಅನ್ಯಾಯವಾಗಿದೆ. ಆದರೂ ನೀವು ಈ ಬಗ್ಗೆ ಗಮನ ಹರಿಸಿಲ್ಲ’ ಎಂದು ಹೇಳಿದರು.

ತಹಶೀಲ್ದಾರ್ ರಮೇಶ್ ಬಾಬು ಅವರು, ‘ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿ ಮಾರ್ಚ್‌ 25ರೊಳಗೆ ಹಕ್ಕುಪತ್ರ ನೀಡುವುದಾಗಿ ತಿಳಿಸಿದರು.

ಡಾ.ಯತೀಶ್ ಉಳ್ಳಾಲ್ ಅವರು, ‘ಜನರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗುವುದು. ನೋಂದಣಿ ಇಲಾಖೆ ಈಗ ಸ್ವಲ್ಪ ಮಟ್ಟಿಗೆ ಸರಿಯಾಗಿದೆ. ಇನ್ನೂ ದುರಸ್ತಿ ಆಗಬೇಕಾಗಿದೆ. ಬಡ ಮಹಿಳೆಗೆ ಹಕ್ಕುಪತ್ರ ನೀಡುವಲ್ಲಿ ನಮ್ಮಿಂದ ತಪ್ಪಾಗಿದೆ’ ಎಂದರು.

ಹೋರಾಟ ಅನಿವಾರ್ಯ: ಬಳಿಕ ಸುದ್ದಿಗಾರದೊಂದಿಗೆ ಮಾತನಾಡಿದ ಶಕುಂತಳಾ ಶೆಟ್ಟಿ, ‘ಹಾಲಿ ಶಾಸಕರು ಇದೇ ಕಟ್ಟಡದಲ್ಲಿದ್ದರೂ ಅವರಿಗೆ ಈ ಬಡಜನತೆಯ ಸಮಸ್ಯೆ ಅರ್ಥವಾಗುತ್ತಿಲ್ಲ. ಒಂದು ತಿಂಗಳಿನಿಂದ ಹಲವಾರು ದೂರುಗಳು ನನಗೆ ಬಂದಿವೆ. ಹಾಗಾಗಿ, ಅಧಿಕಾರಿಗಳಿಗೆ ಎಚ್ಚರಿಕೆ ನೀಡುವ ಕೆಲಸ ಮಾಡಿದ್ದೇನೆ. ಇದು ಹೀಗೆ ಮುಂದುವರಿದರೆ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ’ ಎಂದು ಎಚ್ಚರಿಸಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಕೆಪಿಸಿಸಿ ಸದಸ್ಯ ಎಂ.ಬಿ.ವಿಶ್ವನಾಥ ರೈ, ಪಕ್ಷದ ಮುಖಂಡರಾದ ಎಚ್.ಮಹಮ್ಮದ್ ಆಲಿ, ಆಸ್ಕರ್ ಆಲಿ ನೆಕ್ಕಿಲಾಡಿ, ಬೋಳೋಡಿ ಚಂದ್ರಹಾಸ ರೈ, ಮಹಮ್ಮದ್ ರಿಯಾಝ್, ಪೂರ್ಣೇಶ್ ರೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT