ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡತ ನಾಪತ್ತೆ ಪ್ರಕರಣ; ದೂರು ದಾಖಲಿಸಲು ಸೂಚನೆ

ಕೊಪ್ಪ: ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಸೂಚನೆ
Last Updated 7 ಮಾರ್ಚ್ 2021, 4:00 IST
ಅಕ್ಷರ ಗಾತ್ರ

ಕೊಪ್ಪ: ‘ತಾಲ್ಲೂಕು ಕಚೇರಿಯಲ್ಲಿ ಕಡತಗಳು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬ್ಬಂದಿ ಪ್ರಕಾಶ್ ಅವರಿಗೆ ಸೂಚನೆ ನೀಡಿ, ಕಡತ ಹುಡು ಕಿಸಬೇಕು. ಸ್ಪಂದಿಸದಿದ್ದಲ್ಲಿ ಸಂಬಂಧಿಸಿದ ಸಿಬ್ಬಂದಿ ವಿರುದ್ಧ ಪೊಲೀಸ್ ದೂರು ದಾಖಲಿಸಬೇಕು’ ಎಂದು ಶಾಸಕ ಟಿ.ಡಿ.ರಾಜೇಗೌಡ ಅವರು ತಹಶೀಲ್ದಾರ್ ಎಚ್.ಎಸ್.ಪರಮೇಶ್ ಅವರಿಗೆ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣ ದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಆಶ್ರಯ ನಿವೇಶನಕ್ಕೆ ಮಂಜೂರಾದ ಜಾಗದಲ್ಲಿ ಅರಣ್ಯ ಇಲಾಖೆ ಮರ ತೆರವುಗೊಳಿಸಿಕೊಡಿ. ಇಲ್ಲದಿದ್ದಲ್ಲಿ ನಾವೇ ಜೆಸಿಬಿ, ಹಿಟಾಚಿ ಮೂಲಕ ತೆರವುಗೊಳಿಸಬೇಕಾಗುತ್ತದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಸಿದರು.

‘ರಾಷ್ಟ್ರೀಯ ಹೆದ್ದಾರಿ– 169 ರ ವಿಸ್ತರಣೆ ವೇಳೆ ಬಂಡೆ ಕಲ್ಲುಗಳನ್ನು, ರಸ್ತೆಗೆ ಅಪಾಯವಿದ್ದ ಮರಗಳನ್ನು ತೆರವು ಗೊಳಿಸಿಲ್ಲ. ತಿರುವುಗಳನ್ನು ಸರಿಪಡಿಸಿಲ್ಲ. ಪಟ್ಟಣಕ್ಕೆ ನೀರು ಸರಬರಾಜು ಆಗುವ ಪೈಪ್ ಲೈನ್ ಸ್ಥಳಾಂತರಿಸಿಕೊಡಲು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎನ್.ರಾಮಸ್ವಾಮಿ ಒತ್ತಾಯಿಸಿದರು.

ಪ್ರತಿಕ್ರಿಯಿಸಿದ ಶಾಸಕ ರಾಜೇಗೌಡ ಅವರು, ‘ಬಂಡೆ ತೆರವುಗೊಳಿಸಿ, ಚರಂಡಿ ನಿರ್ಮಾಣ ನಂತರ ಬಿಲ್ ಪಾವತಿಸಬೇಕು. ಪಟ್ಟಣಕ್ಕೆ ನೀರು ಸರಬ ರಾಜು ಆಗುವ ಪೈಪ್ ಸ್ಥಳಾಂತರಿಸಿ ಕೊಡಲು ಆದ್ಯತೆ ನೀಡಿ’ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಸೂಚಿಸಿದರು.

‘ಪೋಡಿ ಮುಕ್ತ ಯೋಜನೆಯಲ್ಲಿ ಅರ್ಜಿಗಳು ಬಾಕಿ ಉಳಿದಿದ್ದರೂ, ಸಂಪೂರ್ಣ ಪೋಡಿ ಮುಕ್ತಗೊಂಡಿದೆ ಎಂದು ಅಧಿಕಾರಿಗಳು ತಪ್ಪು ವರದಿ ನೀಡಿದ್ದಾರೆ. ಇದರಿಂದ ಜನರಿಗೆ ಸಮಸ್ಯೆ ಯಾಗುತ್ತದೆ’ ಎಂದು ಪಿ.ಸಿ.ಎ.ಆರ್.ಡಿ ಬ್ಯಾಂಕ್ ಅಧ್ಯಕ್ಷ ಎಚ್.ಎಸ್.ಇನೇಶ್ ಹೇಳಿದರು.

ತೋಟಗಾರಿಕೆ ಅಧಿಕಾರಿ ಅಕ್ಷಯ್ ಮಾತನಾಡಿ, ‘ಅಡಿಕೆ ಸಂಸ್ಕರಣಾ ಘಟಕಕ್ಕೆ ಅರ್ಜಿ ಸಲ್ಲಿಸಿದ 10 ಮಂದಿ ಪೈಕಿ 4 ಮಂದಿ ದಾಖಲೆ ಸರಿಯಾಗಿದೆ’ ಎಂದರು. ರಾಜೇಗೌಡ ಮಾತನಾಡಿ, ‘ಲೋನ್ ಮಂಜೂರಾದವರಿಗೆ ಮುಂದಿನ ಕ್ರಮ ಕೈಗೊಳ್ಳಿ’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಅಂತೋಣಿ ರಾಜ್ ಮಾತನಾಡಿ, ‘ಪ್ರಾಥಮಿಕ ಶಾಲೆಗೆ ಸಂಬಂಧಿಸಿದಂತೆ 65 ಹುದ್ದೆ ಖಾಲಿ ಇದೆ’ ಎಂದರು. ಎಸ್.ಎನ್.ರಾಮಸ್ವಾಮಿ ಮಾತನಾಡಿ, ‘ಶಿಕ್ಷಕರ ಕೊರತೆ ಇರುವಾಗ ಬೇರೆ ಕಡೆಗೆ ವರ್ಗಾವಣೆ ಮಾಡಬಾರದು’ ಎಂದರು.

ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಕವನ ಮಾತನಾಡಿ, ‘ಕೃಷಿ ಹೊಂಡ ಹೊಂದಿದ ರೈತರಿಗೆ ಇಲಾಖೆ ವತಿಯಿಂದ ಮೀನುಮರಿಗಳನ್ನು ನೀಡಲಾಗುತ್ತದೆ. ಇಲಾಖೆ ವತಿಯಿಂದ ಮೀನು ಮರಿಗಳಿಗೆ ಆಹಾರ ಒದಗಿಸಲು ಸಹಾಯಧನ ಸಿಗಲಿದೆ’ ಎಂದರು.

ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ.ಮಹೇಂದ್ರ ಕಿರೀಟಿ ಮಾತನಾಡಿ, ‘ಕಟ್ಟೆಹಕ್ಕಲು ಭಾಗದಲ್ಲಿ ಉಣುಗಿನಲ್ಲಿ ಕೆ.ಎಫ್.ಡಿ. ಪತ್ತೆಯಾಗಿದ್ದರಿಂದ ಗಡಿಭಾಗವಾದ ಸಿದ್ಧರಮಠದ ವಿವಿಧೆಡೆ ಇದೇ 8ರಂದು ಜನರಿಗೆ ಲಸಿಕೆ ಹಾಕಲಾಗುತ್ತಿದೆ’ ಎಂದು ತಿಳಿಸಿದರು.

ನಾಮನಿರ್ದೇಶಿತ ಸದಸ್ಯ ಮಣಿಕಂಠನ್ ಕಂದಸ್ವಾಮಿ ಮಾತನಾಡಿ, ‘ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷಾ ವರದಿ ತಕ್ಷಣಕ್ಕೆ ಸಿಗಬೇಕು. ಇಲ್ಲದಿದ್ದಲ್ಲಿ ಅವರ ಶೈಕ್ಷಣಿಕ ಚಟುವಟಿಕೆಗಳಿಗೆ ತೊಡಕಾಗಲಿದೆ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಗಾನವಿ, ‘ತಕ್ಷಣಕ್ಕೆ ವರದಿ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ’ ಎಂದರು.

‘ಬಸರೀಕಟ್ಟೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಬಳಿಕ ಹೈಮಾಸ್ಟ್‌ ದೀಪ ಉರಿಯುತ್ತಿಲ್ಲ. ಸಂಪರ್ಕ ಕಡಿತಗೊಳಿಸಿದ್ದು ಸರಿಯಲ್ಲ. ಮೂರ್ನಾಲ್ಕು ದಿನಗಳಲ್ಲಿಯೇ ಸಂಪರ್ಕ ಕಲ್ಪಿಸಿಕೊಡಬೇಕು’ ಎಂದು ಮಣಿಕಂಠನ್ ಒತ್ತಾಯಿಸಿದರು.

ಸೂಚನೆ: ಶಾಲೆಗೆ ದಾನ ನೀಡಿದ ಜಾಗವನ್ನು ಶಿಕ್ಷಣ ಇಲಾಖೆ ಸುಪರ್ದಿಗೆ ತೆಗೆದುಕೊಳ್ಳಬೇಕು. ತರಕಾರಿ ಅಂಗಡಿ, ಗೂಡಂಗಡಿಗಳಲ್ಲಿ ಮದ್ಯ ಅಕ್ರಮ ಮಾರಾಟ ನಡೆಯುತ್ತಿರುವ ದೂರು ಇದ್ದು, ಅಬಕಾರಿ ಮತ್ತು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ತಾಲ್ಲೂಕು ಕಚೇರಿಯಲ್ಲಿ ಅಧಿಕಾರಿಗಳು ಜನರಿಂದ ಹಣ ಸುಲಿಗೆ ಮಾಡುತ್ತಿರುವ ದೂರು ಇದೆ, ಇದರಿಂದ ಜನಪ್ರತಿನಿಧಿಗಳಿಗೆ ಕೆಟ್ಟ ಹೆಸರು ಬರುತ್ತಿದ್ದು, ತಹಶೀಲ್ದಾರ್ ಅವರು ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಹೇಳಿದರು.

ಜಿಲ್ಲಾ ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ದಿವ್ಯಾ ದಿನೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಂತಿ ನಾಗರಾಜ್, ಉಪಾಧ್ಯಕ್ಷೆ ಜೆ.ಎಸ್.ಲಲಿತಾ, ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ಪದ್ಮಾವತಿ ರಮೇಶ್, ಸಂತೋಷ್ ಅರೆನೂರ್, ವೆಂಕಟೇಶ್, ಪೂರ್ಣಚಂದ್ರ, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಜಯಂತ್, ತಹಶೀಲ್ದಾರ್ ಎಚ್.ಎಸ್.ಪರಮೇಶ್, ಇಒ ಎಚ್.ಡಿ.ನವೀನ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT