ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲ್ದೂರು | ಕೆಸರುಮಯ ರಸ್ತೆ: ಸಂಚಾರ ದುಸ್ತರ

ಶಾಲಾ–ಕಾಲೇಜು ವಿದ್ಯಾರ್ಥಿಗಳು, ಗ್ರಾಮಸ್ಥರಿಗೆ ತೀವ್ರ ಸಂಕಷ್ಟ
Published 23 ಮೇ 2024, 7:30 IST
Last Updated 23 ಮೇ 2024, 7:30 IST
ಅಕ್ಷರ ಗಾತ್ರ

ಆಲ್ದೂರು: ತುಡುಕೂರು ಗ್ರಾಮದ ರಸ್ತೆ ಸಂಪೂರ್ಣ ಹಾಳಾಗಿದ್ದು, ಈ ಮಾರ್ಗದಲ್ಲಿ ಸಂಚರಿಸಲು ಗ್ರಾಮಸ್ಥರು ಪರದಾಡುವಂತಾಗಿದೆ.

ಆಲ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಡುಕೂರು, ಆಲ್ದೂರು ಭಾಗದಿಂದ ಚಿಕ್ಕಮಗಳೂರು ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಗ್ರಾಮದಲ್ಲಿ 50ಕ್ಕೂ ಹೆಚ್ಚು ಪರಿಶಿಷ್ಟ ಸಮುದಾಯದ ಕುಟುಂಬಗಳು ವಾಸ ಇವೆ.

ಅರ್ಧ ಕಿ.ಮೀ.ಗೂ ಹೆ‌ಚ್ಚಿನ ಉದ್ದದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇದರಿಂದ ಶಾಲಾ–ಕಾಲೇಜು ವಿದ್ಯಾರ್ಥಿಗಳು, ಗ್ರಾಮಸ್ಥರು‌ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. 

ಗ್ರಾಮದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಬದಿಯಲ್ಲಿ ಹಾಕಿರುವ ಮಣ್ಣಿನ ಮೇಲೆ ವಾಹನಗಳು ಓಡಾಟ ನಡೆಸಿದ್ದರಿಂದ ರಸ್ತೆ ಕೆಸರುಮಯವಾಗಿದೆ.

ಪಂಚಾಯಿತಿಯ ತುಡುಕೂರು ವಾರ್ಡ್‌ ಸದಸ್ಯ ಕೌಶಿಕ್ ಮಾತನಾಡಿ, ‘ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣವಾಗುತ್ತಿದ್ದು, ಈ ಕಾಮಗಾರಿ ಈ ವಾರ್ಡ್‌ಗೆ ಸಂಬಂಧಪಟ್ಟಿದ್ದಲ್ಲ. ಜೆಜೆಎಂ ಕಾಮಗಾರಿಗೆ ಗ್ರಾಮಸ್ಥರು ಯಾವುದೇ ರೀತಿಯಲ್ಲಿ ಅಡ್ಡಿ ಮಾಡಿಲ್ಲ. ಆದರೆ, ರಸ್ತೆ ಬದಿ ಮಣ್ಣು ಹಾಕಿ ನಿರ್ಲಕ್ಷ್ಯ ಮಾಡಿದ ಪರಿಣಾಮ ರಸ್ತೆ ಕೆಸರುಮಯವಾಗಿದೆ’ ಎಂದರು.

‘ಪಂಚಾಯಿತಿ ಅನುದಾನದಿಂದ ಮೂಲ ಸೌಕರ್ಯ ಒದಗಿಸಲಾಗಿದೆ. ಹಿಂದಿನ ಶಾಸಕರ ಅನುದಾನದಿಂದ ಕೆಲವೆಡೆ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಅರ್ಧ ಕಿ.ಮೀ ಬಾಕಿ ಇರುವ ಕಾಮಗಾರಿಗೆ ಶಾಸಕಿ ನಯನಾ ಮೋಟಮ್ಮ ಅನುದಾನ ಒದಗಿಸಬೇಕು’ ಎಂದು ಆಗ್ರಹಿಸಿದರು.

ತುಡುಕೂರು ರಸ್ತೆ ಕಾಮಗಾರಿಗೆ ಅನುದಾನ ಮೀಸಲಿಡಲಾಗಿದ್ದು ಮುಂಬರುವ ದಿನಗಳಲ್ಲಿ ಹೆಚ್ಚಿನ ಅನುದಾನ ಒದಗಿಸಲಾಗುವುದು.
ನಯನಾ ಮೋಟಮ್ಮ ಶಾಸಕಿ
‘ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಿ’
ಡಿಎಸ್ಎಸ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ತುಡುಕೂರು ಯೋಗೇಶ್ ಮಾತನಾಡಿ ಈ ಹಿಂದಿನ ಶಾಸಕರು ಅನುದಾನ ಒದಗಿಸಿದ್ದರಿಂದ ರಸ್ತೆ ಕಾಮಗಾರಿ ಭಾಗಶಃ ಪೂರ್ಣವಾಗಿದ್ದು ಎಂ.ಪಿ.ಕುಮಾರಸ್ವಾಮಿ ರಸ್ತೆಗಾಗಿ ₹10 ಲಕ್ಷ ಅನುದಾನ ಮೀಸಲಿಟ್ಟಿದ್ದರು. ಚುನಾವಣೆ ಸಮೀಪಿಸಿದ್ದರಿಂದ ಅನುದಾನ ಬಿಡುಗಡೆಯಾಗಿರಲಿಲ್ಲ. ಹಾಲಿ ಶಾಸಕರು ಶೀಘ್ರ ಅನುದಾನ ಒದಗಿಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT