ಚಾರಣಿಗರ ಸ್ವರ್ಗ ಶಿಶಿಲ

7
ಶಿಶಿಲಾ ಗುಡ್ಡದ ಬಳಿ ಕಾಣುವ ಪ್ರಕೃತಿಯ ರಮ್ಯನೋಟ

ಚಾರಣಿಗರ ಸ್ವರ್ಗ ಶಿಶಿಲ

Published:
Updated:
ಶಿಶಿಲ ಗುಡ್ಡದ ಬಳಿಯಿರುವ ಭೈರಾಪುರ ನಾಣ್ಯಭೈರವೇಶ್ವರ ಸ್ವಾಮಿ ದೇವಾಲಯ.

ಮಲೆನಾಡಿನ ಮಡಿಲಾದ ಮೂಡಿಗೆರೆಯು ಪ್ರಾಕೃತಿಕ ಸಿರಿವಂತಿಕೆಯನ್ನು ಹೊಂದಿರುವ ಪ್ರದೇಶವಾಗಿದ್ದು, ತಾಲ್ಲೂಕಿನ ಯಾವ ಭಾಗದತ್ತ ಕಣ್ಣಾಡಿಸಿದರೂ, ಹಸಿರು ಪರ್ವತಗಳ ಸಾಲೇ ಕಾಣ ಸಿಗುತ್ತವೆ. ಮುಂಗಾರು ಮಳೆ ಬಂತೆಂದರೆ ಈ ಪರ್ವತಗಳಲೆಲ್ಲಾ ಹುಲ್ಲು ಚಿಗುರಿ ಹಸಿರಿನ ಸ್ವರ್ಗವೇ ಧರೆಗಿಳಿದಂತಾಗಿ ರಾಜ್ಯದ ಪ್ರವಾಸಿಗರನ್ನಷ್ಟೇ ಅಲ್ಲದೇ ನೆರೆಹೊರೆಯ ಚಾರಣಿಗರನ್ನೂ ಕೈಬೀಸಿ ಕರೆಯುತ್ತದೆ. ಅಂತಹ ಪ್ರಕೃತಿ ಸೌಂದರ್ಯದ ತಾಣಗಳಲ್ಲಿ ಶಿಶಿಲ ಗುಡ್ಡವೂ ಒಂದಾಗಿದ್ದು, ಚಾರಣಿಗರ ಸ್ವರ್ಗವೆಂದೇ ಖ್ಯಾತಿ ಪಡೆದಿದೆ.

ಮೂಡಿಗೆರೆಯಿಂದ ಮೂವತ್ತು ಕಿ.ಮೀ. ದೂರದಲ್ಲಿರುವ ಭೈರಾಪುರ ಎಂಬ ಗ್ರಾಮದಿಂದ ಅನತಿ ದೂರದಲ್ಲಿ ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ಶಿಶಿಲಗುಡ್ಡವು, ಪ್ರವಾಸಿಗರು ಹಾಗೂ ಚಾರಣಿಗರಿಗೆ ಪ್ರೇಕ್ಷಣೀಯ ಸ್ಥಳವಾಗಿದ್ದು, ವರ್ಷಕ್ಕೆ ಸುಮಾರು 30 ಸಾವಿರಕ್ಕೂ ಅಧಿಕ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಶಿಶಿಲದ ಪ್ರಾರಂಭದಲ್ಲಿಯೇ ತಾಲ್ಲೂಕಿನ ಪುರಾತನ ದೇವಾಲಯಗಳಲ್ಲೊಂದಾದ ನಾಣ್ಯಭೈರವೇಶ್ವರ ಎಂಬ ದೇವಾಲಯವಿದ್ದು, ಅದರ ಸುತ್ತಮುತ್ತಲಿನ ಪ್ರದೇಶವು ಪ್ರಕೃತಿಯ ಸವಿಯನ್ನು ಸವಿಯಲು ಹೇಳಿ ಮಾಡಿಸಿದ ತಾಣವಾಗಿದೆ. ದೇವಾಲಯದಿಂದ ಕೂಗಳತೆ ದೂರದಲ್ಲಿರುವಂತೆ ಕಾಣುವ ಶಿಶಿಲಗುಡ್ಡವು, ಕಣ್ಣಿಗೆ ಕಂಡಷ್ಟು ಹತ್ತಿರದಲ್ಲಿರದೇ, ಅದರ ಹತ್ತಿರ ಕಣಿವೆ ಮಾರ್ಗಗಳಲ್ಲಿ ಸಾಗುವುದೇ ರೋಮಾಂಚಿತ ಅನುಭವವಾಗುತ್ತದೆ.

ಶಿಶಿಲ ಬೆಟ್ಟವನ್ನೇರಲು ಎಂಟೆದೆ ಬೇಕು ಎಂಬ ಮಾತು ಪ್ರತೀತಿಯಲ್ಲಿರುವುದು ಬೆಟ್ಟದ ಎತ್ತರಕ್ಕೆ ಸಾಕ್ಷಿಯಾಗಿದ್ದು, ಒಮ್ಮೆ ಬೆಟ್ಟವನ್ನೇರಿದರೆ ಸಾಕು, ಇಡೀ ದಿನ ಇಲ್ಲೇ ಕಳೆಯಬೇಕು ಎಂದು ಮನಸ್ಸು ಹಾತೊರೆಯುವುದು ನಿಶ್ಚಿತ. ಬೆಟ್ಟದ ಮೇಲಿಂದ ಕಣ್ಣು ಹಾಯಿಸಿದಷ್ಟೂ ಕಾಣಸಿಗುವ ಹಸಿರು ಕಾನನದ ನಡುವಿನ ಆಳವಾದ ಕಣಿವೆ, ಮಲೆನಾಡಿನ ಸೊಬಗನ್ನು ಇಮ್ಮಡಿಗೊಳಿಸುತ್ತದೆ.

ಇನ್ನು ಈ ಪ್ರದೇಶಕ್ಕೆ ಭೇಟಿ ನೀಡುವ ಚಾರಣಿಗರು ಈ ಪ್ರದೇಶದಿಂದ ದೇವರ ಮನೆ, ಗುಂಡ್ಯ, ದೇವಾಲಯದಕೆರೆ, ಅಗ್ನಿಗುಡ್ಡ, ದೇವರುಂದ, ಕೋಗಿಲೆಗುಡ್ಡ, ದಕ್ಷಿಣ ಕನ್ನಡ ಜಿಲ್ಲೆಯ ಶಿಶಿಲ ಮುಂತಾದ ಪ್ರದೇಶಗಳಿಗೆ ಕಾಲ್ನಡಿಗೆಯಲ್ಲಿ ಸಾಗುತ್ತಾರೆ. ಆದರೆ, ಈ ರೀತಿಯ ಚಾರಣ ಕೈಗೊಳ್ಳಲು ಅರಣ್ಯ ಇಲಾಖೆಯ ಅನುಮತಿ ಅಗತ್ಯವಾಗಿದ್ದು, ಅನುಮತಿ ಪಡೆಯದೇ ಅರಣ್ಯ ಪ್ರವೇಶಿಸಿದವರು ಶಿಕ್ಷೆಗೂ ಗುರಿಯಾದ ಉದಾಹರಣೆಗಳಿವೆ.

ಶಿಶಿಲ ಪ್ರವಾಸಕ್ಕೆ ಮಳೆಗಾಲಕ್ಕಿಂತ ಬೇಸಿಗೆಯು ಸೂಕ್ತವಾಗಿದ್ದು, ನಾಣ್ಯ ಭೈರವೇಶ್ವರನ ದರ್ಶನಮಾಡಿ, ಸುತ್ತಲಿನ ಪ್ರಕೃತಿಯನ್ನು, ಸವಿಯುತ್ತೇವೆ ಹಾಗೂ ಇಂಬಳ (ಜಿಗಣೆ)ಕ್ಕೊಂದಷ್ಟು ರಕ್ತದಾನ ಮಾಡುತ್ತೇವೆ ಎಂಬ ಧೈರ್ಯವಿದ್ದರೆ ಮಳೆಗಾಲದಲ್ಲೂ ಭೇಟಿ ನೀಡಬಹುದು. ಇದರಿಂದ ಬೇಸಿಗೆಯಲ್ಲಿ ಸಿಗದ ಮಲೆನಾಡಿನ ಮಳೆಯ ಸವಿಯನ್ನು ಅನುಭವಿಸಲು ಸಾಧ್ಯವಾಗುತ್ತದೆ. ಶಿಶಿಲ ಪ್ರದೇಶವು ಜೀವವೈವಿಧ್ಯಮಯ ತಾಣವಾಗಿರುವುದರಿಂದ ಅರಣ್ಯ ಪ್ರದೇಶಕ್ಕಾಗಲೀ, ಅಲ್ಲಿರುವ ವನ್ಯಜೀವಿಗಳಿಗಾಗಲೀ ಅಡ್ಡಿ ಉಂಟುಮಾಡುವ ಮನಸ್ಥಿತಿಯನ್ನು ಕಳಚಿಟ್ಟು ಸಾಗಬೇಕಿದ್ದು, ಫ್ಲಾಸ್ಟಿಕ್‌ ಬಳಕೆಯನ್ನೂ ಮಾತ್ರ ತಾಲ್ಲೂಕು ಪ್ರವೇಶಿಸುವಾಗಲೇ ಕೈಬಿಡಬೇಕು.

 

 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !