ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎನ್‌.ಆರ್‌.ಪುರ: ಸ್ವಚ್ಛವಾಗದ ಚರಂಡಿ–ಡೆಂಗಿ ಹೆಚ್ಚುವ ಆತಂಕ

Published 8 ಜುಲೈ 2024, 7:00 IST
Last Updated 8 ಜುಲೈ 2024, 7:00 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಪಟ್ಟಣದ ಮುಖ್ಯ ರಸ್ತೆ ಬಳಿಯ ಚರಂಡಿಯೂ ಸೇರಿದಂತೆ ಹಲವು ವಾರ್ಡ್‌ಗಳಲ್ಲಿ ಪಟ್ಟಣ ಪಂಚಾಯಿತಿಯವರು ಚರಂಡಿಗಳನ್ನು ಸ್ವಚ್ಛಗೊಳಿಸಿಲ್ಲ. ಚರಂಡಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯದೆ, ಅಲ್ಲಲ್ಲಿ ನಿಂತಿರುವುದರಿಂದ ಸೊಳ್ಳೆಗಳ ಹಾವಳಿ ಜಾಸ್ತಿಯಾಗಿದೆ. ಇದರಿಂದ ಡೆಂಗಿ ಹೆಚ್ಚಾಗಬಹುದು ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ಚಿಕ್ಕಮಗಳೂರು ಬಿಟ್ಟರೆ ಅತಿಹೆಚ್ಚು ಡೆಂಗಿ ಪ್ರಕರಣಗಳು ಕಂಡು ಬಂದಿರುವುದು ನರಸಿಂಹರಾಜಪುರದಲ್ಲಿ. ವರದಿಯಾದ ಡೆಂಗಿ ಪ್ರಕರಣಗಳಲ್ಲಿ ಜಿಲ್ಲೆಯಲ್ಲಿ ನರಸಿಂಹರಾಜಪುರ ಎರಡನೇ ಸ್ಥಾನದಲ್ಲಿದೆ. ಇದುವರೆಗೆ 115 ಡೆಂಗಿ ಶಂಕಿತ ಪ್ರಕರಣಗ ಳನ್ನು ಗುರುತಿಸಲಾಗಿತ್ತು. ಇವುಗಳಲ್ಲಿ ಸುಮಾರು 20 ಪ್ರಕರಣಗಳು ದೃಢಪಟ್ಟಿದ್ದು, ರೋಗಪೀಡಿತರೆಲ್ಲರೂ ಗುಣಮುಖರಾಗಿದ್ದಾರೆ. ಶನಿವಾರ ಪುನಃ ನಾಲ್ವರಲ್ಲಿ ಜ್ವರ ಕಾಣಿಸಿಕೊಂಡಿದ್ದು, ಅವರಲ್ಲಿ ಒಬ್ಬರಿಗೆ ಡೆಂಗಿ ದೃಢಪಟ್ಟಿದೆ.

ಪಟ್ಟಣ ಪಂಚಾಯಿತಿ ಸಮೀಪದಿಂದ ಮುಖ್ಯರಸ್ತೆಯ ಇಕ್ಕೆಲಗಳಲ್ಲೂ ಚರಂಡಿ ಸ್ವಚ್ಛಗೊಳಿಸಿಲ್ಲ. ಹಾಗಾಗಿ ಮಳೆಯ ನೀರು ಹರಿಯದೆ ನಿಂತುಕೊಂಡಿದೆ. ಅಗ್ರಹಾರದ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪದ ರಾಮಪ್ರಕಾಶ್ ಹೋಟೆಲ್ ಮುಂಭಾಗದಲ್ಲಿ  ಚರಂಡಿಯಲ್ಲಿ ಹುಲ್ಲುರಾಶಿ ಬೆಳೆದಿದ್ದು, ಚರಂಡಿಯನ್ನು ಸಂಪೂರ್ಣ ಆವರಿಸಿಕೊಂಡಿದೆ. ಸುಂಕದಕಟ್ಟೆಯ ಸಮೀಪ ಚರಂಡಿಯಲ್ಲಿ ಕೆಸರು ತುಂಬಿಕೊಂಡಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಪಟ್ಟಣದ ಕೆಲವು ವಾರ್ಡ್ ಗಳಲ್ಲಿ ಔಷಧಿ ಸಿಂಪಡಿಸಲಾಗಿದೆ. ಆದರೆ, ಸೊಳ್ಳೆಗಳ ಹಾವಳಿ ಈಗಲೂ ಮುಂದುವರಿದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. 

‘ಪಟ್ಟಣ ಪಂಚಾಯಿತಿಯವರು ಚರಂಡಿ ಸ್ವಚ್ಛಗೊಳಿಸಿಲ್ಲ. ಚರಂಡಿಯಲ್ಲಿ ಹುಲ್ಲು ಬೆಳೆದು ನೀರು ಹರಿವಿಗೆ ಅಡ್ಡಿ ಉಂಟಾಗಿದೆ. ಸೊಳ್ಳೆ ಕಾಟ ಜಾಸ್ತಿಯಾಗಿದ್ದು, ಡೆಂಗಿ ಹರಡುವ ಆತಂಕ ಎದುರಾಗಿದೆ. ಪಟ್ಟಣ ಪಂಚಾಯಿತಿಯವರು  ಚರಂಡಿ ಸ್ವಚ್ಛಗೊಳಿಸಲು ಗಮನಹರಿಸಬೇಕು’ ಎಂದು ರಾಮಪ್ರಕಾಶ್ ಹೋಟೆಲ್ ಮಾಲೀಕ ರಮೇಶ್ ಒತ್ತಾಯಿಸಿದರು.

‘ಪಟ್ಟಣದಲ್ಲಿ ಡೆಂಗಿ ಹರಡುವುದನ್ನು ತಡೆಯಲು ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ವಹಿಸಿದ್ದೇವೆ. ಕೆರೆಗಳಲ್ಲಿ ಬಿಡಲು 1ಸಾವಿರ ಗಪ್ಪಿಮೀನುಗಳನ್ನು ತರಿಸಲಾಗಿದೆ. ಮಳೆ ಕಡಿಮೆಯಾದ ಕೂಡಲೇ ಯಂತ್ರದ ಮೂಲಕ ಫಾಗಿಂಗ್ ಮಾಡಲಾಗುವುದು. ಡೆಂಗಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಜಯ ಕುಮಾರ್ ತಿಳಿಸಿದರು.

‘ಪಟ್ಟಣದ ವ್ಯಾಪ್ತಿಯಲ್ಲಿ 11 ವಾರ್ಡ್‌ಗಳಿದ್ದು 1ನೇ ವಾರ್ಡ್‌ನಿಂದ ಹಂತ ಹಂತವಾಗಿ ಚರಂಡಿ ಸಚ್ಛಗೊಳಿಸಿಕೊಂಡು ಬರಲಾಗುತ್ತಿದೆ. ಶೀಘ್ರದಲ್ಲೇ ಎಲ್ಲಾ ಕಡೆ ಚರಂಡಿ ಸ್ವಚ್ಛಗೊಳಿಸಲಾಗುವುದು. ಹಿಂದೆ ನಿರ್ಮಾಣ ಮಾಡಿದ ಚರಂಡಿಗಳಲ್ಲಿ ವಾಟ ಸರಿಯಿಲ್ಲದೆ ಕೆಲವು ಕಡೆ ನೀರು ಸರಾಗವಾಗಿ ಹರಿಯುತ್ತಿಲ್ಲ’ ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ದೂರಿದರು.

ಪಟ್ಟಣದ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ ಚರಂಡಿ ಸ್ವಚ್ಛಗೊಳಿಸಿ ಸೊಳ್ಳೆ ನಿಯಂತ್ರಣಕ್ಕೆ ಔಷಧಿ ಸಿಂಪಡಿಸಲಾಗುತ್ತಿದೆ. ಹಂತ,ಹಂತವಾಗಿ ಎಲ್ಲಾ ಕಡೆಯೂ ಚರಂಡಿ ಸ್ವಚ್ಛಗೊಳಿಸಲಾಗುವುದು.
ಆರ್.ವಿ.ಮಂಜುನಾಥ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT