ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು | ಬಿಜೆಪಿ ಪ್ರತಿಭಟನೆ: ಡಿಸಿ ಕಚೇರಿ ಮುತ್ತಿಗೆ ಯತ್ನ

Published 28 ಜೂನ್ 2024, 14:15 IST
Last Updated 28 ಜೂನ್ 2024, 14:15 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ₹187 ಕೋಟಿ ಅಕ್ರಮ ಹಣ ವರ್ಗಾವಣೆ ಹಗರಣದ ಸಮಗ್ರ ತನಿಖೆಯಾಗಬೇಕು. ಅಕ್ರಮದಲ್ಲಿ ಭಾಗಿಯಾದ ಮಂತ್ರಿಗಳು ರಾಜೀನಾಮೆ ನೀಡಿ ರಾಜ್ಯದ ಖಜಾನೆಗೆ ಹಣ ಮರಳಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದ ಎಸ್‌.ಟಿ ಮೋರ್ಚಾ ನೇತೃತ್ವದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಬಿಜೆಪಿ ಜಿಲ್ಲಾ ಕಚೇರಿಯಿಂದ ಪಕ್ಷದ ಬಾವುಟ ಹಾಗೂ ಫಲಕಗಳನ್ನು ಹಿಡಿದು ಆಜಾದ್ ಪಾರ್ಕ್ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜ ಶೆಟ್ಟಿ ಮಾತನಾಡಿ, ಜನಸಾಮಾನ್ಯರ ಪರ ಕೆಲಸ ಮಾಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಈಗ ನಿತ್ಯ ಹಗರಣಗಳಲ್ಲಿ ತೊಡಗಿದೆ. ಪರಿಶಿಷ್ಟ ಪಂಗಡದ ಸಮುದಾಯದ ಏಳಿಗೆಗೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಇದ್ದ ₹187 ಕೋಟಿ ಹಣವನ್ನು ಅಕ್ರಮವಾಗಿ ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿ ಸಮುದಾಯಕ್ಕೆ ವಂಚನೆ ಮಾಡಿದೆ. ಆರೋಪ ಹೊತ್ತು ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಹಗರಣದಲ್ಲಿ ಇನ್ನು ಹಲವು ಕಾಣದ ಕೈಗಳ ಕೈವಾಡವಿರುವ ಶಂಕೆ ಇದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಹೋರಾಟ ಸರ್ಕಾರದ ವಿರುದ್ಧವಲ್ಲ, ಬದಲಾಗಿ ಭ್ರಷ್ಟಾಚಾರದ ವಿರುದ್ಧ. ಜನಸಾಮಾನ್ಯರ ಹಣವನ್ನು ಕಾಂಗ್ರೆಸ್‌ ಲೂಟಿ ಮಾಡುವ ಮೂಲಕ ಮತ ನೀಡಿದ ಮತದಾರರ ಮೇಲೆ ಚಪ್ಪಡಿ ಎಳೆಯುವ ಕೆಲಸ ಮಾಡುತ್ತಿದೆ. ಈ ಹಗರಣದಲ್ಲಿ ಮುಖ್ಯಮಂತ್ರಿ ಸೇರಿದಂತೆ ಹಲವು ಮಂತ್ರಿಗಳು ಭಾಗಿಯಾಗಿರುವ ಅನುಮಾನವಿದೆ. ವರ್ಗಾವಣೆಯಾಗಿರುವ ಹಣ ಸರ್ಕಾರದ ಖಜಾನೆಗೆ ವಾಪಸ್ ಬರಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಿ ನ್ಯಾಯ ಸಿಗುವವವರೆಗೂ ಹೋರಾಟ ನಿರಂತರವಾಗಿರಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಎಸ್‌.ಟಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ನಂದೀಶ್‌ ಮದಕರಿ, ಎಸ್‌.ಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪಿ.ವೆಂಕಟೇಶ್‌, ನಗರ ಮಂಡಲ ಅಧ್ಯಕ್ಷ ಪುಷ್ಪರಾಜ್‌, ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಮುಖಂಡರಾದ ಬಿ.ರಾಜಪ್ಪ, ಮಧುಕುಮಾರ್ ರಾಜ್ ಅರಸ್, ಕೋಟೆ ರಂಗನಾಥ್‌, ಓಂಕಾರೇಗೌಡ, ದುರ್ಗೇಶ್ ಪಾಲ್ಗೊಂಡಿದ್ದರು.

ವಶಕ್ಕೆ ಪಡೆದು ಬಿಡುಗಡೆ
ಪ್ರತಿಭಟನೆ ಬಳಿಕ ಆಜಾದ್ ಪಾರ್ಕ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ಮೆರವಣಿಗೆ ಸಾಗಿ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ಜಿಲ್ಲಾಧಿಕಾರಿ ಕಚೇರಿ ಎದುರು ಬ್ಯಾರಿಕೇಡ್ ಅಳವಡಿಸಿ ತಡೆಯಲು ಮುಂದಾದರು. ಮಾತಿನ ಚಕಮಕಿ ನಡೆಯಿತು. 20ಕ್ಕೂ ಹೆಚ್ಚು ಮುಖಂಡರು ಹಾಗೂ ಕಾರ್ಯಕರ್ತರನ್ನು ವಶಕ್ಕೆ ಪಡೆದು ಬಸವನಹಳ್ಳಿ ಠಾಣೆಗೆ ಕರೆದೊಯ್ದು ಬಿಡುಗಡೆಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT