ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈರಲ್‌ ಜ್ವರ ಬಾಧೆ: ಶಾಲೆಯಲ್ಲಿ ತಾತ್ಕಾಲಿಕ ಕ್ಲಿನಿಕ್‌ ವ್ಯವಸ್ಥೆ

ಮರ್ಲೆತಿಮ್ಮನಹಳ್ಳಿ ಗ್ರಾಮ: 42 ಮಂದಿ ರಕ್ತ ಪರೀಕ್ಷೆ
Last Updated 21 ಮೇ 2019, 15:27 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ತಾಲ್ಲೂಕಿನ ಮರ್ಲೆತಿಮ್ಮನಹಳ್ಳಿಯಲ್ಲಿ ಬಹಳಷ್ಟು ಮಂದಿ ಜ್ವರ, ಮೈಕೈ ನೋವನಿಂದಬಳಲುತ್ತಿದ್ದು ಗ್ರಾಮದ ಶಾಲೆಯಲ್ಲಿ ತಾತ್ಕಾಲಿಕ ಕ್ಲಿನಿಕ್‌ ವ್ಯವಸ್ಥೆ ಮಾಡಲಾಗಿದೆ.

ಜ್ವರ, ಮೈಕೈ ನೋವು, ತಲೆಭಾರ, ಊತ ಬಾಧೆಗಳಿಂದ ಬಳಲುತ್ತಿದ್ದಾರೆ. ಕ್ಲಿನಿಕ್‌ನಲ್ಲಿ ವೈದ್ಯ ಡಾ.ಕಾರ್ತಿಕ್‌, ಆರೋಗ್ಯ ನಿರೀಕ್ಷಕರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ಚಿಕಿತ್ಸೆ ನೀಡುತ್ತಿದ್ದಾರೆ.

‘ಗ್ರಾಮದಲ್ಲಿ ವೈರಲ್‌ ಜ್ವರ ಇದೆ. ಈವರೆಗೆ 42 ಮಂದಿ ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷಿಸಲಾಗಿದೆ. ಡೆಂಗಿ, ಮಲೇರಿಯಾ, ಚಿಕುನ್‌ ಗುನ್ಯ ಪ್ರಕರಣಗಳು ಪತ್ತೆಯಾಗಿಲ್ಲ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಲ್ಲಿಕಾರ್ಜುನಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಮದ 70ಕ್ಕೂ ಹೆಚ್ಚು ಮಂದಿಗೆ ಜ್ವರ ಕಾಣಿಸಿಕೊಂಡಿದೆ. ಅವರಿಗೆ ತಾತ್ಕಾಲಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರೋಗ ಲಕ್ಷಣದ ಆಧಾರದಲ್ಲಿ ರಕ್ತ ಪರೀಕ್ಷೆ ನಡೆಸಲಾಗುತ್ತಿದೆ. ಮಳೆಗಾಲದ ಆರಂಭದಲ್ಲಿ ‌ಹವಾಮಾನ ವೈಪರಿತ್ಯದಿಂದಾಗಿ ಜ್ವರ ಬರುವುದು ಸಾಮಾನ್ಯ. ತೀವ್ರ ಜ್ವರ ಇರುವುದರಿಂದ ಗ್ರಾಮದ ಜನರಲ್ಲಿ ಭೀತಿ ಆವರಿಸಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಗ್ರಾಮಸ್ಥರಿಗೆ ದಿನ ಬಿಟ್ಟು ದಿನ ಶುದ್ಧ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಂಜುನಾಥ್ ತಿಳಿಸಿದರು.

‘ಗ್ರಾಮದಲ್ಲಿ ಭಾನುವಾರದಿಂದ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದು ಚಿಕಿತ್ಸೆ ನೀಡಲಾಗುತ್ತಿದೆ. ರಕ್ತ ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿದೆ. ಸುಸ್ತು, ಜ್ವರ ಹೆಚ್ಚಿದ್ದವರಿಗೆ ಡ್ರಿಪ್ಸ್‌ ಹಾಕಲಾಗಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದರೆ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗುವುದು’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಸೀಮಾ ತಿಳಿಸಿದರು.

‘ಗ್ರಾಮದ ಸಮೀಪ ಕಲ್ಲು ಕ್ವಾರಿ ಇದೆ. ಅಲ್ಲಿ ಕೆಮಿಕಲ್ ಬ್ಲಾಸ್ಟ್ ಮಾಡುತ್ತಾರೆ. ಅದರ ವಾಸನೆ ಗ್ರಾಮದ ತುಂಬೆಲ್ಲ ಹರಡುತ್ತದೆ. ಟಿಪ್ಪರ್‌ಗಳು ‌ಓಡಾಡುವ ದಾರಿಗೆ ನೀರು ಹಾಕಲ್ಲ. ಸಿಕ್ಕಾಪಟ್ಟೆ ದೂಳು ಎದ್ದೇಳುತ್ತದೆ. ಹೀಗಾಗಿ, ಗ್ರಾಮಸ್ಥರಿಗೆ ಅನಾರೋಗ್ಯ ಕಾಡುತ್ತಿದೆ’ ಎಂದು ರೈತ ಮುಖಂಡ ಟಿ.ಎ.ಮಂಜುನಾಥ್ ಆರೋಪಿಸಿದರು.

ಗ್ರಾಮದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ವಹಿಸಬೇಕು. ನೈರ್ಮಲ್ಯ ಕಾಪಾಡಬೇಕು ಎಂದು ಆರೋಗ್ಯ ಸಿಬ್ಬಂದಿ ಗ್ರಾಮದಲ್ಲಿ ಆರೋಗ್ಯ ಜಾಗೃತಿ ಮೂಡಿಸುತ್ತಿದ್ದಾರೆ.

‘ಜ್ವರ, ಕೀಲು ನೋವು ವಿಪರೀತ ಬಾಧೆ’

‘ಒಂದೂವರೆ ತಿಂಗಳ ಹಿಂದೆ ಮೊದಲು ಜ್ವರ ಬಂತು, ಕೆಲ ದಿನಗಳಲ್ಲಿ ನಿಧಾನವಾಗಿ ತಲೆನೋವು, ಕೀಲು ನೋವು, ಊತ ಆರಂಭವಾಯಿತು. ಬಿಸಿಲಿದ್ದಾಗ ನೋವು ಕಡಿಮೆ ಇರುತ್ತದೆ. ಬೆಳಗಿನ ವೇಳೆ ಎದ್ದೇಳಲಾಗದಷ್ಟು ಕೀಲು ನೋವು ಇರುತ್ತದೆ. ಎರಡು ದಿನಗಳಿಂದ ಬಾಧೆ ತೀವ್ರವಾಗಿದೆ. ಮನೆಯಲ್ಲಿ ಏಳು ಮಂದಿ ಇದ್ದೇವೆ. ಈ ಪೈಕಿ ಆರು ಮಂದಿಗೆ ಜ್ವರ ಇದೆ. ಹಲವಾರು ಆಸ್ಪತ್ರೆಗಳಲ್ಲಿ ತೋರಿಸಿದರೂ ಗುಣವಾಗಿಲ್ಲ’ಎಂದು ಗ್ರಾಮಸ್ಥ ಟಿ.ಕೆ.ಲಕ್ಷ್ಮಣ್ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT