ವಿಹಾರ ಪಥದ ಮರಗಳಿಗೆ ‘ಸಿಮೆಂಟ್‌’ ಕುತ್ತು

ಸೋಮವಾರ, ಜೂನ್ 24, 2019
30 °C
ರತ್ನಗಿರಿ ಬೋರೆ ಮಹಾತ್ಮಗಾಂಧಿ ಉದ್ಯಾನ

ವಿಹಾರ ಪಥದ ಮರಗಳಿಗೆ ‘ಸಿಮೆಂಟ್‌’ ಕುತ್ತು

Published:
Updated:
Prajavani

ಚಿಕ್ಕಮಗಳೂರು: ನಗರದ ರತ್ನಗಿರಿ ಬೋರೆಯ ಮಹಾತ್ಮಗಾಂಧಿ ಉದ್ಯಾನದಲ್ಲಿ ವಾಯುವಿಹಾರ ಪಥ ನಿರ್ಮಾಣ ಕಾಮಗಾರಿ ಚಾಲ್ತಿಯಲ್ಲಿದ್ದು, ಪಥದಲ್ಲಿನ ಮರಗಳ ಬುಡಕ್ಕೂ ಸಿಮೆಂಟ್‌ ಹಾಕಿರುವುದರಿಂದ ಬೇರಿಗೆ ನೀರು, ಗಾಳಿ ತಾಕುವುದಕ್ಕೆ ತಡೆಯಾಗಿದೆ.
ವಾಯುವಿಹಾರ ಪಥದಲ್ಲಿ ಸಿಮೆಂಟ್‌ ಟೈಲ್ಸ್‌ಗಳನ್ನು ಅಳವಡಿಸುವ ಕೆಲಸ ನಡೆಯುತ್ತಿದೆ. ಪಥದ ಅರ್ಧಕ್ಕಿಂತ ಹೆಚ್ಚು ಭಾಗದಲ್ಲಿ ಈಗ ಇಂಟರ್‌ಲಿಂಕ್‌ ಟೈಲ್ಸ್‌ಗಳನ್ನು ಅಳವಡಿಸಲಾಗಿದೆ. ಟೈಲ್ಸ್‌ ಅಡಿ ನುಚ್ಚುಜಲ್ಲಿ ಹಾಕಲಾಗಿದೆ. ವಿಹಾರ ಮಾರ್ಗದಲ್ಲಿ ಹಲವು ಮರಗಳು ಇವೆ. ಅವುಗಳ ಸುತ್ತ ಸ್ವಲ್ಪವೂ ಜಾಗ ಬಿಡದೆ ಟೈಲ್ಸ್‌ ಅಳವಡಿಸಿರುವುದು ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ. 

ಉದ್ಯಾನದ ಸೊಬಗನ್ನು ವೃದ್ಧಿಸಲು ಹಲವಾರು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸಂಗೀತ ಕಾರಂಜಿ, ಹುಲ್ಲುಹಾಸು, ವಾಯು ವಿಹಾರ ಪಥ ನಿರ್ಮಾಣ, ಪ್ರತಿಮೆ, ಮಕ್ಕಳ ಆಟಿಕೆ ಅಳವಡಿಕೆ ಮೊದಲಾದ ಕೆಲಸಗಳು ಸಾಗಿವೆ.

ಇದು ನಗರದ ಪ್ರಮುಖ ಉದ್ಯಾನವಾಗಿದ್ದು, ಚಂದ್ರದ್ರೋಣ ಪರ್ವತ ಶ್ರೇಣಿಯನ್ನು ಇಲ್ಲಿಂದ ನೋಡಬಹುದು. ನಿತ್ಯ ನೂರಾರು ಮಂದಿ ಈ ಉದ್ಯಾನಕ್ಕೆ ಇಲ್ಲಿಗೆ ಬರುತ್ತಾರೆ. ಪುಟಾಣಿ ರೈಲು ವ್ಯವಸ್ಥೆಯೂ ಇದೆ. ಮಲೆನಾಡಿನ ‘ಪ್ರೀ ವೆಡ್ಡಿಂಗ್‌ ಶೂಟ್‌’ ತಾಣಗಳಲ್ಲಿ ಈ ಉದ್ಯಾನವೂ ಒಂದು. ನಾಡಿನ ವಿವಿಧೆಡೆಗಳಿಂದ ಜೋಡಿಗಳು ಫೋಟೊ, ವಿಡಿಯೋ ಕ್ಲಿಕ್ಕಿಸಿಕೊಳ್ಳಲು ಇಲ್ಲಿಗೆ ಬರುತ್ತಾರೆ.

‘ಮರದ ಬುಡದ ಸುತ್ತ ಕನಿಷ್ಠ ಒಂದೆರಡು ಅಡಿ ಜಾಗ ಇದ್ದರೆ ಮಾತ್ರ ಬೇರಿಗೆ ನೀರು, ಗಾಳಿ ತಾಕುವುದಕ್ಕೆ ಅವಕಾಶ ಇರುತ್ತದೆ. ಬುಡವನ್ನೂ ಸಿಮೆಂಟ್‌ ಹಾಕಿ ಮುಚ್ಚಿದರೆ ನೀರು, ಗಾಳಿ ಇಲ್ಲದೆ ಬೇರು ಒಣಗಿ ಮರ ಸಾಯುತ್ತದೆ. ಸಂಬಂಧಪಟ್ಟವರು ಎಚ್ಚೆತ್ತು ಈ ನಿಟ್ಟಿನಲ್ಲಿ ಗಮನಹರಿಸಬೇಕು. ವಾಯುವಿಹಾರ ಪಥ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾಗಿದೆ’ ಎಂದು ವಾಯುವಿಹಾರಿ ರಾಮನಹಳ್ಳಿಯ ವಸಂತಾ ದೂಷಿಸುತ್ತಾರೆ.

ಮಳೆ ಸುರಿದಾಗ ವಿಹಾರ ಪಥದಲ್ಲಿ ನೀರು ಸರಾಗವಾಗಿ ಹರಿಯಲು ಸಮರ್ಪಕ ವ್ಯವಸ್ಥೆ ಮಾಡಿಲ್ಲ. ಪಥದ ಇಕ್ಕೆಲದಲ್ಲಿ ಸಿಮೆಂಟಿನ ಪುಟ್ಟಗೋಡೆಗಳನ್ನು ವ್ಯವಸ್ಥಿತವಾಗಿ ಅಳವಡಿಸಿಲ್ಲ. ಉದ್ಯಾನ ಮತ್ತು ಸುತ್ತಮುತ್ತ ಸ್ವಚ್ಛತೆಯ ಕೊರತೆ ತಾಂಡವವಾಡುತ್ತಿದೆ. ರಾಮನಹಳ್ಳಿ ರಸ್ತೆಯಿಂದ ಉದ್ಯಾನಕ್ಕೆ ಸಾಗುವ ಹಾದಿಯ ಇಕ್ಕೆಲಗಳಲ್ಲೂ ಕಸದ್ದೇ ದರ್ಬಾರ್‌.

‘ಬುಡಕ್ಕೆ ಕಾಂಕ್ರೀಟ್‌ ಹಾಕಿದರೆ ಗಿಡಗಳು ಕಾಲಾಂತರದಲ್ಲಿ ಒಣಗುತ್ತವೆ. ಬೇರಿಗೆ ನೀರು, ಗಾಳಿ ತಲುಪಬೇಕು. ಇಂಟರ್‌ಲಾಕ್‌ ಟೈಲ್ಸ್‌ ಹಾಕಿ ಪಥ ನಿರ್ಮಿಸುತ್ತಿರುವುದು ಸರಿಯಲ್ಲ. ಮಣ್ಣಿನ ಹಾದಿಯನ್ನೇ ವ್ಯವಸ್ಥಿತವಾಗಿ ನಿರ್ಮಿಸಿ, ಕಾಲಕಾಲಕ್ಕೆ ನಿರ್ವಹಣೆ ಮಾಡಿದ್ದರೆ ಸಾಕಿತ್ತು. ಟೈಲ್ಸ್‌ ಪಥದಲ್ಲಿ ನಡಿಗೆ ಹಿತ ಅನಿಸುವುದಿಲ್ಲ. ಈ ಉದ್ಯಾನವು ಗಂಧದ ಗಿಡಮರಗಳಿಗೆ ಪ್ರಸಿದ್ಧಿ. ಇಲ್ಲಿ ಕಾಂಕ್ರೀಟಿಕರಣ ಕಡಿಮೆ ಮಾಡಿ, ಹಸಿರಿನ ಸಿರಿ ವೃದ್ಧಿಸಲು ಗಮನ ಹರಿಸಬೇಕಿದೆ’ ಎನ್ನುತ್ತಾರೆ ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಜಿ.ವೀರೇಶ್‌ ಹೇಳುತ್ತಾರೆ.

‘ಕಾಮಗಾರಿ ಪರಿಶೀಲಿಸಿ ವರದಿ ನೀಡುವಂತೆ ಎಂಜಿನಿಯರ್‌ವೊಬ್ಬರಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಪಥದ ಮರಗಳ ಬುಡದ ಸುತ್ತು ಒಂದು ಅಡಿ ಜಾಗ ಬಿಡುವಂತೆ ಮತ್ತು ಪಥದ ಬದಿಯಲ್ಲಿ ಬಿದಿರು ಮೆಳೆಗೆ ಹಾನಿಯಾಗದಂತೆ ಟೈಲ್ಸ್‌ ಅಳವಡಿಸುವಂತೆ ಗುತ್ತಿಗೆದಾರನಿಗೆ ಸೂಚಿಸಲಾಗುವುದು’ ಎಂದು ಮಹಾತ್ಮ ಗಾಂಧಿ ಟ್ರಸ್ಟ್‌ನ ಕಾರ್ಯದರ್ಶಿ ಕೆ.ಮೋಹನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

*
ಉದ್ಯಾನದಲ್ಲಿನ ವಿಹಾರ ಪಥವನ್ನು ಪರಿಶೀಲನೆ ಮಾಡಲಾಗುವುದು. ಲೋಪವನ್ನು ಸರಿಪಡಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗುವುದು.
–ಕೆ.ಪರಮೇಶಿ, ಆಯುಕ್ತರು, ನಗರಸಭೆ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !